ಸೋಮವಾರ, ಡಿಸೆಂಬರ್ 5, 2022
21 °C
ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಚಿವ ಬಿ.ಸಿ. ಪಾಟೀಲ ಸೂಚನೆ

ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮವಹಿಸಿ: ಬಿ.ಸಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಜಿಲ್ಲೆಯ ಎಲ್ಲ ಅರ್ಹ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆ ತಲುಪುತ್ತಿದೆಯೇ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು ಹಾಗೂ ಜಿಲ್ಲೆಯಲ್ಲಿ ಒಸಿ, ಜೂಜಾಟ ನಿಯಂತ್ರಣಕ್ಕೆ ಪೊಲೀಸರು ಕಟ್ಟುನಿಟ್ಟಿನ ಕ್ರಮವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ರೈತ ವಿದ್ಯಾನಿಧಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮಹಾತ್ವಾಕಾಂಕ್ಷಿ ಯೋಜನೆ. ರೈತರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿರುವ ಈ ಯೋಜನೆ ಎಲ್ಲರಿಗೂ ತಲುಪುತ್ತಿದೆಯೇ? ಇಲ್ಲವೇ? ಎಂಬುದನ್ನು ಡಿಡಿಪಿಐ ಹಾಗೂ ಡಿಡಿಪಿಯು ಖುದ್ದು ಪರಿಶೀಲಿಸಿ, ವರದಿ ನೀಡಬೇಕು’ ಎಂದು ಸೂಚಿಸಿದರು.

ಗದಗ ಜಿಲ್ಲೆಯಲ್ಲಿ ಒಸಿ, ಮಟ್ಕಾ, ಜೂಜಾಟ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಪದೇಪದೇ ಸಿಕ್ಕಿಬೀಳುವವರನ್ನು ಗಡಿಪಾರು ಮಾಡಲು ಕ್ರಮವಹಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜುಗೆ ನಿರ್ದೇಶನ ನೀಡಿದರು.

ಪಡಿತರ ಅಕ್ಕಿ ಸಾಗಣೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ ಸಚಿವ ಬಿ.ಸಿ.ಪಾಟೀಲ, ತಪ್ಪಿತಸ್ಥರ ಹೆಡೆಮುರಿ ಕಟ್ಟಲು ಆಹಾರ, ಪೊಲೀಸ್‌ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸುವಂತೆ ಹೇಳಿದರು.

ಅಕ್ರಮ ಅಕ್ಕಿ ಸಾಗಣೆ ವೇಳೆ ವಶಪಡಿಸಿಕೊಂಡ ವಾಹನವನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಎಸ್‌ಪಿಗೆ ಸೂಚಿಸಿದರು.

ಕೆಲವು ಕಡೆಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಮದ್ಯ ಮಾರಾಟ ಮಳಿಗೆಗಳು ತೆರೆದಿರುತ್ತವೆ. ವ್ಯಸನಿಗಳು ಚಹಾ ಕುಡಿದಂತೆ ಮದ್ಯ ಸೇವಿಸುತ್ತಿರುತ್ತಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಹಿಸಬೇಕು. ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಅನನುಕೂಲ ಆಗದಂತೆ ಕ್ರಮವಹಿಸಬೇಕು. ಗುಣಮಟ್ಟದ ತರಕಾರಿ ಪೂರೈಸಬೇಕು. ವಸತಿನಿಲಯಗಳಿಗೆ ಅನೀರಿಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲಿಸಲು ಜಿಲ್ಲಾಧಿಕಾರಿ ಹಾಗೂ ಸಿಇಒಗೆ ಸೂಚಿಸಿದರು.

‘ಬಿಡಾಡಿ ಜಾನುವಾರುಗಳನ್ನು ಗುರುತಿಸಿ ಅವುಗಳನ್ನು ಹತ್ತಿರದ ಗೋಶಾಲೆಗೆ ಸ್ಥಳಾಂತರಿಸಬೇಕು. ಚರ್ಮಗಂಟು ರೋಗ ಲಸಿಕೆ ನೀಡಬೇಕು. ಜಾನುವಾರುಗಳ ಮೂಲ ಮಾಲೀಕರು ಬಂದಲ್ಲಿ ಷರತ್ತು ಹಾಗೂ ಜಾನುವಾರುಗಳ ನಿರ್ವಹಣಾ ವೆಚ್ಚವನ್ನು ಭರಿಸಿಕೊಂಡು ಹಿಂದಿರುಗಿಸಬೇಕು’ ಎಂದು ಸೂಚಿಸಿದರು.

ಅರಣ್ಯೀಕರಣದಿಂದಾಗುವ ಪ್ರಯೋಜನೆಗಳ ಕುರಿತು ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಜಾಗೃತಿ ಮೂಡಿಸಬೇಕು. ಅಲ್ಲದೇ ಈಗಾಗಲೇ ಅರಣ್ಯ ಇಲಾಖೆಯಿಂದ ರಸ್ತೆ ಬದಿಗಳಲ್ಲಿ ನೆಡಲಾಗಿರುವ ಮರಗಳ ಪೋಷಣೆಗೂ ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಸಮೀಪದ ಶಾಲೆಗಳಿಗೆ ವರ್ಗಾಯಿಸುವಂತೆ ಸೂಚಿಸಿದ ಅವರು, ದುರಸ್ತಿಗೆ ಕೂಡಲೇ ಪ್ರಸ್ತಾವ ಸಲ್ಲಿಸುವಂತೆ ಹೇಳಿದರು.

ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ವಿಮಾ ಮೊತ್ತವನ್ನು ನಿಯಮಿತವಾಗಿ ಅರ್ಹ ರೈತರಿಗೆ ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ವಿಮಾ ಕಂಪನಿಗಳಿಗೆ ತಿಳಿಸಿದರು.

ಜಿಲ್ಲೆಯ ಪ್ರತಿ ವಿಧಾನಸಭೆ ಮತಕ್ಷೇತ್ರದಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೆ ಅಗತ್ಯದ ಪ್ರಸ್ತಾವ ಸಲ್ಲಿಸಲು ಸೂಚಿಸಿದರು. 

ಅಂಗವಿಕಲರ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಆಯ್ಕೆ ಆಗಿರುವ ಎಂ.ಆರ್‌.ಡಬ್ಲ್ಯು ಹಾಗೂ ವಿ.ಆರ್.ಡಬ್ಲ್ಯುಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಕ್ರಮ ವಹಿಸುವಂತೆ ಸಿಇಒಗೆ ಸೂಚಿಸಿದರು.

ಸಾರಿಗೆ ಇಲಾಖೆ ಅಧಿಕಾರಿಗಳು ಹೆಚ್ಚುವರಿ ತೂಕ ಹೊಂದಿದಂತಹ ವಾಹನಗಳನ್ನು ತಪಾಸಣೆ ಮಾಡಿ, ಅಂತಹ ವಾಹನಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್‌, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಸಿಇಒ ಡಾ.ಸುಶೀಲಾ ಬಿ., ಎಸ್‌ಪಿ ಶಿವಪಕ್ರಾಶ ದೇವರಾಜು, ಡಿಎಫ್‌ಒ ದೀಪಿಕಾ ಬಾಜಪೇಯಿ ಇದ್ದರು.

ಆರೋಗ್ಯ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಚಾಟಿ

ವಿಧಾನ ಪರಿಷತ್‌ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮುಂಡರಗಿ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದಲ್ಲಿನ ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರದ ದುರಸ್ತಿಗೆ ಕ್ರಮವಹಿಸುವಂತೆ ಸೂಚಿಸಿದರು.

ಶಿರಹಟ್ಟಿ ತಾಲ್ಲೂಕಿನ ಮಾಚೇನಹಳ್ಳಿಯಲ್ಲಿ ಪ್ರಾರಂಭಿಸಲಾದ ಆರೋಗ್ಯ ಉಪಕೇಂದ್ರಕ್ಕೆ ಅಗತ್ಯದ ವೈದ್ಯಕೀಯ ಸಿಬ್ಬಂದಿ ನಿಯೋಜಿಸದ ಕಾರಣ, ಭೂಮಿ ನೀಡಿದ ಮಾಲೀಕನೇ ಆಸ್ಪತ್ರೆಯಲ್ಲಿ ವಾಸಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಕ್ಷಣದ ಕ್ರಮವಹಿಸಿ, ಅಲ್ಲಿನ ಜನರಿಗೆ ಆರೋಗ್ಯ ಸೇವೆ ಒದಗಿಸಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ನಿರ್ಮಾಣವಾಗಿರುವ ಚಿಟ್ಟಿ ಆರ್ಟ್‌ ಗ್ಯಾಲರಿಯ ಸದುಪಯೋಗಕ್ಕೆ ಆಗ್ರಹಿಸಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿಯಮಿತವಾಗಿ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದರು. ಕಟ್ಟಡ ನಿರ್ವಹಣೆಗೆ ಬೇಕಿರುವ ಸಿಬ್ಬಂದಿ ನೇಮಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಲಕ್ಷ್ಮೇಶ್ವರದಲ್ಲಿ ಸುರಿದ ಭಾರಿ ಮಳೆಯ ಕಾರಣ ಎರಡು ಶಾಲೆಗಳು ಜಲಾವೃತಗೊಂಡಿದ್ದು, ಮಕ್ಕಳನ್ನು ಬೇರೆಡೆಗೆ ಸ್ಥಳಾಂತರಿಸಿ ಶಾಲೆಗೆ ಬೀಗ ಹಾಕಲಾಗಿದೆ. ಎರಡು ತಿಂಗಳಾದರೂ ಸಮಸ್ಯೆ ಬಗೆಹರಿದಿಲ್ಲ. ಶಿಕ್ಷಣ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅಧಿಕಾರಿಗಳಿಗೆ ಚಾಟಿ ಬೀಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.