ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಅಲೆ ಎದುರಿಸಲು ಸಿದ್ಧತೆ ಆರಂಭ: ಸಚಿವೆ ಶಶಿಕಲಾ ಜೊಲ್ಲೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
Last Updated 11 ಜೂನ್ 2021, 2:05 IST
ಅಕ್ಷರ ಗಾತ್ರ

ಗದಗ: ‘ಕೊರೊನಾ ಎರಡನೇ ಅಲೆಯಲ್ಲಿ ಅನೇಕ ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಮೂರನೇ ಅಲೆ ಕೂಡ ಬರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಲಾಖೆ ವತಿಯಿಂದ ಮೂರನೇ ಅಲೆ ಎದುರಿಸಲು ಸಿದ್ಧತೆ ನಡೆಸಿದ್ದೇವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಬೆಟಗೇರಿಯಲ್ಲಿರುವ ಸೇವಾಭಾರತಿ ಟ್ರಸ್ಟ್‌ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಕೇಂದ್ರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

‘ಮೂರನೇ ಅಲೆ ಸಂದರ್ಭದಲ್ಲಿ ಸೋಂಕಿಗೆ ತುತ್ತಾದ ಗ್ರಾಮೀಣ ಮಕ್ಕಳ ಆರೈಕೆಗಾಗಿ ಕೋವಿಡ್‌ ಆರೈಕೆ ಕೇಂದ್ರ ತೆರೆಯಲಾಗುವುದು. ಈ ಸಂಬಂಧ ಜಿಲ್ಲೆಯಲ್ಲಿ ಐದು ಕಡೆಗಳಲ್ಲಿ ಆರೈಕೆ ಕೇಂದ್ರ ತೆರೆಯಲು ಯೋಜಿಸಲಾಗಿದೆ. ಸೋಂಕಿತ ಮಕ್ಕಳು ಸೂಪರ್‌ ಸ್ಪ್ರೆಡ್ಡರ್‌ ಆಗಿರುತ್ತಾರೆ. ಆದಕಾರಣ, ಸೋಂಕಿನ ಸರಪಳಿ ತುಂಡರಿಸಲು ಮಗು ಮತ್ತು ತಾಯಿಯನ್ನು ಕೋವಿಡ್‌ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುವುದು. ಸೋಂಕಿತ ಮಕ್ಕಳನ್ನು ಗುರುತಿಸುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡಲಿದ್ದಾರೆ’ ಎಂದು ಅವರು ತಿಳಿಸಿದರು.

‘ಸೋಂಕಿತ ಮಕ್ಕಳನ್ನು ಆಸ್ಪತ್ರೆಯಲ್ಲಿಟ್ಟು ಚಿಕಿತ್ಸೆ ನೀಡುವ ಪರಿಸ್ಥಿತಿ ಎದುರಾದರೆ ಅದನ್ನು ನಿಭಾಯಿಸಲು ಅನುಕೂಲವಾಗುತಂತೆ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಕೋವಿಡ್‌ ವಾರ್ಡ್‌ ನಿರ್ಮಿಸುವ ಉದ್ದೇಶವಿದೆ. ಜಿಮ್ಸ್‌ನಲ್ಲಿ ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ’ ಎಂದು ತಿಳಿಸಿದರು.

‘ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡ ಅನಾಥರಾದ ಮಕ್ಕಳನ್ನು ಬಾಲಸೇವಾ ಯೋಜನೆ ಅಡಿ ಗುರುತಿಸಿದ್ದು, ಅಂತಹ ಮಕ್ಕಳಿಗೆ ಪ್ರತಿ ತಿಂಗಳು ₹3.5 ಸಾವಿರ ಹಣ, ಉಚಿತ ಶಿಕ್ಷಣ, ಎಸ್ಸೆಸ್ಸೆಲ್ಸಿ ನಂತರ ಲ್ಯಾಪ್‌ಟಾಪ್‌ ವಿತರಣೆ, ಹೆಣ್ಣು ಮಗುವಿಗೆ 21 ವರ್ಷ ತುಂಬಿದ ನಂತರ ₹1 ಲಕ್ಷ ಹಣ ನೀಡಲಾಗುವುದು’ ಎಂದು ತಿಳಿಸಿದರು.

‘ಕೋವಿಡ್‌ ಆರೈಕೆ ಕೇಂದ್ರದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಮಕ್ಕಳ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಟೆಲಿ ಕೌನ್ಸಲಿಂಗ್‌ ವ್ಯವಸ್ಥೆ ಮಾಡಲಾಗುವುದು. ಕೋವಿಡ್‌ನಿಂದ ತಂದೆ ತಾಯಿ ಕಳೆದುಕೊಂಡು ಅನಾಥವಾಗಿರುವ ಮಕ್ಕಳು ಕಂಡು ಬಂದಲ್ಲಿ 1098ಗೆ ಕರೆ ಮಾಡಿ ತಿಳಿಸಬೇಕು’ ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.

‘ತಂದೆ-ತಾಯಂದಿರ ಪ್ರೀತಿ, ವಾತ್ಸಲ್ಯದಿಂದ ದೂರವಾಗಿರುವ ಈ ಮುದ್ದು ಕಂದಮ್ಮಗಳನ್ನು ನೋಡಿದಾಗ ಹೃದಯ ಭಾರವಾಯಿತು. ಮಕ್ಕಳನ್ನು ಮುದ್ದಾಡಿದಾಗ ನನ್ನೊಳಗಿನ ಮಾತೃ ವಾತ್ಸಲ್ಯ ಜಾಗೃತಗೊಂಡಿತು. ಮಕ್ಕಳ ಮುಖದಲ್ಲಿ ನಗು ಅರಳಿದಾಗ ಮನಸ್ಸಿಗೆ ಪ್ರಶಾಂತವೆನಿಸಿತು. ದೇವರಿಗೆ ಸಮಾನವಾದ ಮಕ್ಕಳನ್ನು ಈ ಆರೈಕೆ ಕೇಂದ್ರದಲ್ಲಿ ಯಾವುದೇ ಕೊರಗು ಬಾರದಂತೆ ಸಿಬ್ಬಂದಿ ವರ್ಗ ಪಾಲನೆ ಮಾಡುತ್ತಿರುವುದು ಕಂಡು ನಿಜಕ್ಕೂ ಸಂತೋಷವೆನಿತು’ ಎಂದು ಹೇಳಿದರು.

ಮಕ್ಕಳನ್ನು ಮುದ್ದಿಸಿದ ಸಚಿವೆ ಜೊಲ್ಲೆ

‘ಅಮೂಲ್ಯ ದತ್ತು ಸ್ವೀಕಾರ ಕೇಂದ್ರದಲ್ಲಿ 3ರಿಂದ 6 ತಿಂಗಳ ಎಂಟು ಮಕ್ಕಳು ಇದ್ದು, ಈ ಮಕ್ಕಳನ್ನು ಟ್ರಸ್ಟ್‌ನವರು ಚೆನ್ನಾಗಿ ಪೋಷಿಸುತ್ತಿದ್ದಾರೆ. ಚರ್ಮರೋಗದಿಂದ ಬಳಲುತ್ತಿರುವ ಮಗುವನ್ನು ನೋಡಿದಾಗ ಮನಸ್ಸಿಗೆ ಅತೀವ ದುಃಖ ಆಯಿತು. ಅಲೋಪಥಿ ಚಿಕಿತ್ಸೆ ಆ ಮಗುವಿಗೆ ಆಗಿಬರಲಿಲ್ಲ. ಇದನ್ನು ಮನಗಂಡ ಇಲ್ಲಿನ ಸಿಬ್ಬಂದಿ ನಾಟಿ ವೈದ್ಯರ ಕಡೆಯಿಂದ ಮಗುವಿಗೆ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಇದರಿಂದಾಗಿ ಆ ಮಗುವಿನ ಚರ್ಮರೋಗ ಶೇ 50ರಷ್ಟು ವಾಸಿಯಾಗಿದೆ. ಮಗು ಪೂರ್ಣವಾಗಿ ಹುಷಾರಾಗುವ ಭರವಸೆ ಇದೆ’ ಎಂದು ಕಣ್ತುಂಬಿಕೊಂಡರು.

ತೊಟ್ಟಿಲಲ್ಲಿ ಇದ್ದ ಮಗುವನ್ನು ಎತ್ತಿಕೊಂಡು ಎದೆಗಪ್ಪಿಕೊಂಡ ಸಚಿವೆ ಶಶಿಕಲಾ ಜೊಲ್ಲೆ, ಆ ಮಕ್ಕಳ ನಗುವಿನಲ್ಲಿ ದುಃಖ ಮರೆತರು. ಕೆಲಕಾಲ ತಾವೇ ಮಗುವಿನಂತಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT