ಬುಧವಾರ, ಸೆಪ್ಟೆಂಬರ್ 18, 2019
25 °C

ಬಿ.ಜಿ ಅಣ್ಣಿಗೇರಿ ನಿಧನ

Published:
Updated:
Prajavani

ಗದಗ: ಗುರುಕುಲ ಮಾದರಿಯಲ್ಲಿ ಮಕ್ಕಳಿಗೆ ಉಚಿತವಾಗಿ ಮನೆ ಪಾಠ ಮಾಡುತ್ತಾ ‘ಸಂತ ಶಿಕ್ಷಕ’ ಎಂದೇ ಹೆಸರಾಗಿದ್ದ ಬಸವಂತಪ್ಪ ಗುರಪ್ಪ ಅಣ್ಣಿಗೇರಿ (89) ಗುರುವಾರ ಅನಾರೋಗ್ಯದಿಂದ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು.

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮುದೇನಗುಡಿ ಗ್ರಾಮದಲ್ಲಿ ಜನಿಸಿದ ಬಿ.ಜಿ ಅಣ್ಣಿಗೇರಿ ಅವರು, 1954ರಲ್ಲಿ ಗದುಗಿನ ಮಾಡೆಲ್ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಮುಖ್ಯೋಪಾಧ್ಯಾಯರಾಗಿ ನಿವೃತ್ತಿಯಾಗಿದ್ದರು. ಬ್ರಹ್ಮಚರ್ಯರಾಗಿದ್ದ ಅವರು ನಿವೃತ್ತಿ ಬಳಿಕವೂ ಮೂರೂವರೆ ದಶಕಗಳ ಕಾಲ ಗದುಗಿನ ವಕಾರ ಸಾಲಿನ ಆಶ್ರಮವೊಂದರಲ್ಲಿ ಮನೆ ಪಾಠ ಮುಂದುವರಿಸಿದ್ದರು.

ತಮ್ಮ ಸೇವಾವಧಿಯಲ್ಲಿ ವೇತನವನ್ನು ಮಕ್ಕಳ ಕಲ್ಯಾಣಕ್ಕೆ ಬಳಸಿದ್ದ ಅವರು, ನಿವೃತ್ತಿ ನಂತರವೂ ಬಂದ ಹಣವನ್ನು ವಿದ್ಯಾರ್ಥಿಗಳಿಗಾಗಿಯೇ ಬಳಸುತ್ತಿದ್ದರು. ಲಿಂಗೈಕ್ಯ ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಬಿ.ಜಿ. ಅಣ್ಣಿಗೇರಿ ಅವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ, ಅವರ ಶಿಷ್ಯ ಬಳಗದಿಂದ ದೇಣಿಗೆ ಸಂಗ್ರಹಿಸಿ, ಆ ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಯೋಜನೆ ರೂಪಿಸಿದ್ದರು.

2000ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. 2015ರಲ್ಲಿ ನರೇಗಲ್‍ನಲ್ಲಿ ನಡೆದಿದ್ದ ರೋಣ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸೆ.6ರಂದು ಸಂಜೆ 6 ಗಂಟೆಗೆ ಅವರ ಆಶ್ರಮದ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಶಿಷ್ಯ ಬಳಗ ತಿಳಿಸಿದೆ.

Post Comments (+)