ಶನಿವಾರ, ಡಿಸೆಂಬರ್ 14, 2019
23 °C
ತಮಿಳುನಾಡಿನ ಶಿಲ್ಪಿ ಕಾಳಿಮುತ್ತು, ಸಂಗಡಿಗರಿಂದ ನಿರ್ಮಾಣ

ತುಂಗೆಯ ತಟದಲ್ಲಿ ಭದ್ರಮಹಾಂಕಾಳಿ

ಕಾಶೀನಾಥ ಬಿಳಿಮಗ್ಗದ Updated:

ಅಕ್ಷರ ಗಾತ್ರ : | |

Prajavani

ಮುಂಡರಗಿ: ಕಪ್ಪತಗುಡ್ಡದ ಕೊನೆಯ ಅಂಚಿನಲ್ಲಿರುವ ಸಿಂಗಟಾಲೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿ ಸುಂದರವಾದ ನೂತನ ಭದ್ರ ಮಹಾಂಕಾಳಿ ದೇವಸ್ಥಾನವನ್ನು ನಿರ್ಮಿಸಲಾಗುತ್ತಿದೆ. ದೇವಸ್ಥಾನ ನಿರ್ಮಾಣದ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು, ಫೆಬ್ರುವರಿಯಲ್ಲಿ ದೇವಸ್ಥಾನ ಲೋಕಾರ್ಪಣೆಗೊಳ್ಳಲಿದೆ.

ವೀರಭದ್ರೇಶ್ವರ ಟ್ರಸ್ಟ್‌ ಕಮಿಟಿಯು ಕಳೆದ ವರ್ಷ ₹1.50ಕೋಟಿ ವೆಚ್ಚದಲ್ಲಿ ವೀರಭದ್ರೇಶ್ವರ ದೇವಸ್ಥಾನವನ್ನು ನಿರ್ಮಿಸಿತ್ತು. ಈಗ ಅದರ ಪಕ್ಕದಲ್ಲಿ ಭದ್ರಮಹಾಂಕಾಳಿಯ ದೇವಸ್ಥಾನ ನಿರ್ಮಾಣಗೊಳ್ಳುತ್ತಿದೆ.

ದೊಡ್ಡಬಳ್ಳಾಪುರದಿಂದ ಉತ್ತಮ ಗುಣಮಟ್ಟದ ಬಿಳಿ ಕಲ್ಲುಗಳನ್ನು ತರಿಸಲಾಗಿದ್ದು, ಬೃಹತ್ ಯಂತ್ರಗಳ ನೆರವಿನಿಂದ ತಮಿಳುನಾಡಿನ ಶಿಲ್ಪಿ ಕಾಳಿಮುತ್ತು ಹಾಗೂ ಸಂಗಡಿಗರು 8 ತಿಂಗಳಿಂದ ನಿರ್ಮಾಣಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ₹80ಲಕ್ಷ  ಖರ್ಚು ಮಾಡಲಾಗಿದ್ದು, ದೇವಸ್ಥಾನ ಪೂರ್ಣಗೊಳಿಸಲು ಶಿಲ್ಪಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.

ವೀರಭದ್ರೇಶ್ವರ ಹಾಗೂ ಭದ್ರಮಹಾಂಕಾಳಿ ದೇವಸ್ಥಾನಗಳ ಹಿಂಭಾಗದಲ್ಲಿ ಸದಾ
ಹಸುರಿನಿಂದ ಕಂಗೊಳಿಸುತ್ತಿರುವ ಕಪ್ಪತಗಿರಿಯ ಬೆಟ್ಟದ ಸಾಲುಗಳಿವೆ ಹಾಗೂ ಈರಣ್ಣನ ಗುಡ್ಡದ ಮುಂದೆ ಹರಿಯುತ್ತಿರುವ ತುಂಗಭದ್ರಾ ನದಿಯು ವರ್ಷಪೂರ್ತಿ ಯಾತ್ರಾರ್ಥಿಗಳನ್ನು ಕೈಬೀಸಿ ಕರೆಯುತ್ತಿದೆ.

ಭಕ್ತರ ವಸತಿಗಾಗಿ ದೇವಸ್ಥಾನದ
ಅಕ್ಕಪಕ್ಕದಲ್ಲಿ ಸುಸಜ್ಜಿತವಾದ ಹಲವು ಯಾತ್ರಿ ನಿವಾಸಗಳಿವೆ. ಸರ್ಕಾರಿ ಪ್ರವಾಸಿ ಮಂದಿರವೂ ಇದೆ.
ವೀರಭದ್ರೇಶ್ವರ ದೇವಸ್ಥಾನವು ಜಿಲ್ಲೆಯ ಒಂದು ಪವಿತ್ರ ಮತ್ತು ಪ್ರೇಕ್ಷಣೀಯ
ಸ್ಥಳವಾಗಿದ್ದು, ಪ್ರತೀ ವರ್ಷ ಲಕ್ಷಾಂತರ ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.ಕಾರ್ತಿಕ, ಶ್ರಾವಣ ಮಾಸಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಯುಗಾದಿ ನಂತರ ವೀರಭದ್ರೇಶ್ವರನ ಜಾತ್ರೆ ಜರುಗುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು