ಭೀಮಸೇನ ಉತ್ಸವ ಸಮಾರೋಪ

7
2 ದಿನ ಅವಳಿ ನಗರದಲ್ಲಿ ಅಖಿಲ ಭಾರತ ಶಾಸ್ತ್ರೀಯ ಸಂಗೀತ ಸಮ್ಮೇಳನ

ಭೀಮಸೇನ ಉತ್ಸವ ಸಮಾರೋಪ

Published:
Updated:
Prajavani

ಗದಗ: ಭೀಮಸೇನ ಸಂಗೀತ ಪ್ರತಿಷ್ಠಾನದ ಆಶ್ರಯದಲ್ಲಿ ಇಲ್ಲಿನ ವಿದ್ಯಾದಾನ ಸಮಿತಿಯ ಆವರಣದಲ್ಲಿ ನಡೆದ 5ನೇ ಅಖಿಲ ಭಾರತ ಶಾಸ್ತ್ರೀಯ ಸಂಗೀತ ಸಮ್ಮೇಳನ ‘ಭೀಮಸೇನ ಉತ್ಸವ’ಸೋಮವಾರ ರಾತ್ರಿ ಸಮಾರೋಪಗೊಂಡಿತು.

ಫೆ.4 ಮತ್ತು 5 ರಂದು ಎರಡು ದಿನ ರಾಷ್ಟ್ರ,ಅಂತರರಾಷ್ಟ್ರೀಯ ಖ್ಯಾತಿಯ ಹಿರಿಯ ಕಲಾವಿದರು ಸಂಗೀತ, ನೃತ್ಯ ಪ್ರದರ್ಶನದ ಮೂಲಕ ಕಲಾ ರಸಿಕರ ಮನಸೂರೆಗೊಂಡರು.

ಬಳ್ಳಾರಿಯ ಚಾರುಲತಾ ಎಂ. ಪಿ. ಮತ್ತು ತಂಡದವರು ಭೀಮಸೇನ ಜೋಶಿಯವರು ಹಾಡಿದ ಗೀತೆಗಳಿಗೆ ನೃತ್ಯ ಸಂಯೋಜನೆ ಮಾಡಿದ ಭರತನಾಟ್ಯ ಪ್ರದರ್ಶನದ ಮೂಲಕ ಗಮನ ಸೆಳೆದರು.ಭೋಪಾಲದ ಕಲಾವಿದ ಮುಕುಂದ ದೇವ ಸಾಹೂ ಅವರ ದೃಪದ ಗಾಯನ, ದೆಹಲಿ ಮೂಲದ ಆನಂದ ಉಪಾಕ್ಷ ಅವರ ಹಿಂದುಸ್ತಾನಿ ಗಾಯನ ಜನಮನ ರಂಜಿಸಿತು. ಕೋಲ್ಕತ್ತಾದ ಅನುಸ್ಮಿತಾ ಭಟ್ಟಾಚಾರ್ಯ ಮತ್ತು ಬಿಸ್ವಪ್ರತಿಮಬೋಸ್‌ ಅವರ ಭರತನಾಟ್ಯ ಜುಗಲ್‌ಬಂದಿ ಕಲಾರಸಿಕರ ಮನಸೂರೆಗೊಂಡಿತು.ಧಾರವಾಡದ ಬಸವರಾಜ ಹಿರೇಮಠ ಅವರು ಹಾರ್ಮೋನಿಯಂ ಹಾಗೂ ಬೆಂಗಳೂರಿನ ಮಿಹಿರ್ ಕಲ್ಯಾಣಪುರ ತಬಲಾ ಸಾಥ್‌ ನೀಡಿದರು.

ಫೆ.4ರಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ಗದುಗಿನ ವಯಲಿನ್‌ ವಾದಕ ಪ್ರೊ. ನಾರಯಣ ಹಿರೇಕೊಳಚಿ ಅವರ ವಯಲಿನ್‌ ವಾದನ ಮತ್ತು ಪಶ್ಚಿಮ ಬಂಗಾಳದ ಹಿರಿಯ ಕಲಾವಿದ ಪ್ರವೀಣಕುಮಾರ ಮಿಶ್ರಾ ಅವರ ರಾಗಗಳ ಆಲಾಪದ ಅಲೆಯಲ್ಲಿ ಶ್ರೋತೃಗಳು ತೇಲಿದರು. ಪೂಜಾ ಓವಾಳೆಕರ್ ಠಾಣೆ ಅವರ ಕಥಕ್ ಸೋಲೊ ನೃತ್ಯ ಗಮನ ಸೆಳೆಯಿತು. ಪ್ರೊ. ಹನುಮಂತ ಬಿ. ಹೂಗಾರ, ವಿಜಯಕುಮಾರ ಜಿ. ಸುತಾರ ತಬಲಾ ಸಾಥ್‌, ಧಾರವಾಡದ ಹಿರೇಮಠ ಅವರು ಹಾರ್ಮೋನಿಯಂ ಸಾಥ್‌ ನೀಡಿದರು.

ನಿರ್ಣಯ: ಗದಗ ನಗರದಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ರಂಗ ಮಂದಿರಕ್ಕೆ ‘ಭಾರತ ರತ್ನ’ ಪಂಡಿತ ‘ಭೀಮಸೇನ ಜೋಶಿ ಜಿಲ್ಲಾ ರಂಗ ಮಂದಿರ’ ಎಂದು ನಾಮಕರಣ ಮಾಡಬೇಕು. .ಪಂಡಿತ ಭೀಮಸೇನ ಜೋಶಿ ಹೆಸರಿನಲ್ಲಿ ಸರ್ಕಾರವೇ ಒಂದು ಟ್ರಸ್ಟ್‌ ರಚಿಸಬೇಕು. ಈ ಟ್ರಸ್ಟ್‌ ಮೂಲಕ ಜೋಶಿ ಅವರ ಪುಣ್ಯ ಸ್ಮರಣೋತ್ಸವ ನಡೆಯಬೇಕು ಎಂಬ ನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

‘ದೇಶದಾದ್ಯಂತ ಇರುವ ಪಂಡಿತ ಭೀಮಸೇನ ಜೋಶಿ ಅವರ ಅಭಿಮಾನಿಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ನಮ್ಮದಾಗಿದೆ’ ಎಂದು ಭೀಮಸೇನ ಸಂಗೀತ ಪ್ರತಿಷ್ಠಾನದ ನೇತೃತ್ವ ವಹಿಸಿರುವ ಹಿರಿಯ ವೈದ್ಯ ಡಾ.ಶೇಖರ ಡಿ.ಸಜ್ಜನರ್ ಹೇಳಿದರು. ಪ್ರೊ.ದತ್ತ ಪ್ರಸನ್ನ ಪಾಟೀಲ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !