ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ್ದು ಸುಳ್ಳು ಸುದ್ದಿ: ದೂರು ದಾಖಲು

7

ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ್ದು ಸುಳ್ಳು ಸುದ್ದಿ: ದೂರು ದಾಖಲು

Published:
Updated:

ಗದಗ: ‘ಇಲ್ಲಿನ ಬಿಂಕದಕಟ್ಟಿ ಮೃಗಾಲಯದಿಂದ ಹುಲಿ ತಪ್ಪಿಸಿಕೊಂಡಿದೆ’ಎಂದು ವಾಟ್ಸ್‌ಆ್ಯಪ್‌ನಲ್ಲಿ ಸುಳ್ಳು ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಮೃಗಾಲಯ ಆರ್‌ಎಫ್‌ಒ ಮಹಾಂತೇಶ ಪೆಟ್ಲೂರ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

‘ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ವಾಟ್ಸ್ಆ್ಯಪ್‌ಗೆ ಬಿಂಕದಕಟ್ಟಿ ಮೃಗಾಲಯದಿಂದ ಹುಲಿ ತಪ್ಪಿಸಿಕೊಂಡಿದೆ ಎಂಬ ವಿಡಿಯೊ ತುಣುಕು ಬಂತು. 8 ತಿಂಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿರ ಮೇಲೆ ದಾಳಿ ಮಾಡಿ, ಆತಂಕ ಸೃಷ್ಟಿಸಿದ್ದ ಹುಲಿಯೊಂದರ ಚಿತ್ರ ಹಾಕಿ, ಅದನ್ನು ಗದಗ ಬಿಂಕದಕಟ್ಟಿ ಮೃಗಾಲಯದ ಹುಲಿ ಎಂದು ಚಿತ್ರಿಸಿದ್ದರು.ತಕ್ಷಣ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಗಮನಕ್ಕೆ ಈ ವಿಷಯ ತರಲಾಯಿತು’ಎಂದು ಅವರು ಹೇಳಿದರು.

‘ಇದೊಂದು ಸುಳ್ಳು ಸುದ್ದಿ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡಬಾರದು.ಸಾಮಾಜಿಕ ಜಾಲತಾಣಗಳ ಮೂಲಕ ಇದನ್ನು ಇನ್ನಷ್ಟು ಜನರಿಗೆ ಹರಡಬಾರದು.ಇದರಿಂದ ಬಿಂಕದಕಟ್ಟಿ ಮೃಗಾಲಯಕ್ಕೂ, ಮೃಗಾಲಯದಲ್ಲಿರುವ ಹುಲಿಗೂ ಕೆಟ್ಟ ಹೆಸರು ಬರುತ್ತದೆ. ಎರಡೂ ಹುಲಿಗಳು ಮೃಗಾಲಯದಲ್ಲಿ ಸುರಕ್ಷಿತವಾಗಿವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಟ್ಸ್‌ಆ್ಯಪ್‌,ಫೇಸ್‌ಬುಕ್‌ ಮೂಲಕ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು. ಸಾರ್ವಜನಿಕರು ಇಂತಹ ಸುದ್ದಿಗಳನ್ನು ನಂಬಬಾರದು’ಎಂದು ಎಸ್ಪಿ ಕೆ.ಸಂತೋಷಬಾಬು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !