ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈವಿಕ ಇಂಧನ: ಬೇಕಿದೆ ಹೆಚ್ಚಿನ ಪ್ರೋತ್ಸಾಹ

ಜೈವಿಕ ಇಂಧನ ದಿನಾಚರಣೆಯಲ್ಲಿ ಪ್ರಗತಿಪರ ಕೃಷಿಕ ರಾಮಣ್ಣ ನಾಗನೂರ ಅಭಿಮತ
Published 11 ಆಗಸ್ಟ್ 2023, 15:56 IST
Last Updated 11 ಆಗಸ್ಟ್ 2023, 15:56 IST
ಅಕ್ಷರ ಗಾತ್ರ

ಗದಗ: ‘ಗ್ರಾಮೀಣ ಭಾಗದಲ್ಲಿ ರೈತರು ಹಲವು ಶತಮಾನಗಳಿಂದ ಬೆಳೆಯುತ್ತಿರುವ ಮರ-ಗಿಡಗಳು ಜೈವಿಕ ಇಂಧನದ ಆಕರಗಳಾಗಿವೆ. ದೇಶದಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ’ ಎಂದು ಪ್ರಗತಿಪರ ಕೃಷಿಕ ರಾಮಣ್ಣ ನಾಗನೂರ ತಿಳಿಸಿದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮತ್ತು ಸಾಮಾಜಿಕ ಅರಣ್ಯ ಇಲಾಖೆಯಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಆವರಣದಲ್ಲಿರುವ ಜೈವಿಕ ಇಂಧನ ಸಂಶೋಧನೆ ಮತ್ತು ಮಾಹಿತಿ ಕೇಂದ್ರದಲ್ಲಿ ಶುಕ್ರವಾರ ನಡೆದ ಜೈವಿಕ ಇಂಧನ ದಿನಾಚರಣೆಯಲ್ಲಿ ಮಾತನಾಡಿದರು.

‘ಐದು ಎಕರೆಯಲ್ಲಿ ಸಿಮರೂಬಾ ಬೆಳೆದಿದ್ದು, ಇದರ ಬೀಜಗಳಿಂದ ಜೈವಿಕ ಇಂಧನ ಉತ್ಪಾದಿಸಬಹುದಾಗಿದೆ. ಈ ಬಗ್ಗೆ ರೈತರಿಗೆ ಹೆಚ್ಚಿನ ತಿಳಿವಳಿಕೆ ಮೂಡಿಸಿದರೆ ಜೈವಿಕ ಇಂಧನಕ್ಕೆ ಬೇಕಿರುವ ಗಿಡಗಳ ಪೋಷಣೆಯಲ್ಲಿ ತೊಡಗುತ್ತಾರೆ. ಇಂತಹ ಉತ್ತೇಜನಕಾರಿ ಚಟುವಟಿಕೆಗಳು ಹೆಚ್ಚು ನಡೆಯಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಸಹಕಾರ ಮತ್ತು ಪ್ರೋತ್ಸಾಹ ನಮ್ಮಂತಹ ರೈತರಿಗೆ ನೆರವಾಗಿದೆ’ ಎಂದು ತಿಳಿಸಿದರು.

ಜೈವಿಕ ಇಂಧನ ಸಂಶೋಧನೆ, ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ಕೇಂದ್ರದ (ಬಿಆರ್‌ಐಡಿಸಿ) ಸಂಯೋಜಕ ನಿಂಗಪ್ಪ ಪೂಜಾರ ಮಾತನಾಡಿ, ‘ಪೆಟ್ರೋಲ್‌, ಡೀಸೆಲ್‌ ಇವೆಲ್ಲವೂ ನವೀಕರಿಸಲಾಗದ ಇಂಧನ ಮೂಲಗಳು. ಒಮ್ಮೆ ಬಳಸಿದರೆ ಮುಗಿಯಿತು. ಬಳಕೆ ಹೆಚ್ಚುತ್ತ ಹೋದಂತೆ ಇಂಧನದ ಕೊರತೆ ಎದುರಾಗುತ್ತದೆ. ಹಾಗಾಗಿ, ನವೀಕರಿಸಬಹುದಾದ ಇಂಧನ ಮೂಲವಾದ ಜೈವಿಕ ಇಂಧನ ಉತ್ಪಾದನಾ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳು ನಿರಂತವಾಗಿ ನಡೆಸಬೇಕಾದ ಅಗತ್ಯವಿದೆ. ಸಂಶೋಧನೆ ಜತೆಗೆ ಜೈವಿಕ ಇಂಧನ ಬಳಕೆಯನ್ನು ಉತ್ತೇಜಿಸುವುದು ಇಂದಿನ ಜರೂರು’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ ಮಾತನಾಡಿ, ‘ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹೊಸದನ್ನು ತಿಳಿಯುವ ಬಗ್ಗೆ ಸದಾ ಉತ್ಸುಕರಾಗಿರುತ್ತಾರೆ. ಅವರೊಳಗಿನ ಕೌತುಕ ಮನೋಭಾವವೇ ಜೈವಿಕ ಇಂಧನ ಸಂಶೋಧನೆ, ಜಾನುವಾರು ಸಾಕಣೆ, ಬೀಜ ಬ್ಯಾಂಕ್‌, ನರ್ಸರಿ ಹೀಗೆ ಅವರ ಆಸಕ್ತಿಯ ಕ್ಷೇತ್ರಗಳಲ್ಲಿನ ಹೊಸ ವಿಚಾರಗಳ ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜೈವಿಕ ಇಂಧನ ಉತ್ಪಾದನೆಯ ವಿವಿಧ ಹಂತಗಳನ್ನು ಪ್ರದರ್ಶಿಸಲಾಯಿತು. ಇಲ್ಲಿ ಉತ್ಪಾದನೆಯಾದ ಜೈವಿಕ ಇಂಧನವನ್ನು ವಿಶ್ವವಿದ್ಯಾಲಯದ ಟ್ರ್ಯಾಕ್ಟರ್‌ಗಳಿಗೆ ಬಳಕೆ ಮಾಡಲಾಗುತ್ತಿದೆ. ಜೈವಿಕ ಇಂಧನ ದಿನಾಚರಣೆ ಅಂಗವಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಜೈವಿಕ ಇಂಧನಕ್ಕೆ ಆಕರವಾಗಿರುವ ಗಿಡಗಳನ್ನು ನಡೆಲಾಯಿತು.

ಡಾ. ರವಿ ಜಡಿ ಸ್ವಾಗತಿಸಿದರು. ಗಿರೀಶ್‌ ದೀಕ್ಷಿತ್‌ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT