ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಬದಲಾದರೂ ಬ್ಯಾನರ್‌ ಬದಲಾಗಿಲ್ಲ!

ಪ್ರಮುಖ ವೃತ್ತಗಳಲ್ಲಿ ರಾರಾಜಿಸುತ್ತಿವೆ ಬಿ.ಎಸ್‌.ಯಡಿಯೂರಪ್ಪ ಅಳವಡಿಸಿದ್ದ ಪ್ರಚಾರ ಫಲಕಗಳು
Last Updated 29 ಆಗಸ್ಟ್ 2021, 2:59 IST
ಅಕ್ಷರ ಗಾತ್ರ

ಗದಗ: ಜಿಲ್ಲಾಡಳಿತ ಭವನ ಹೊರತುಪಡಿಸಿ ಇನ್ನುಳಿದ ಸರ್ಕಾರಿ ಕಚೇರಿಗಳ ಆವರಣ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಅಳವಡಿಸಿದ್ದ ಪ್ರಚಾರ ಫಲಕಗಳು, ಸರ್ಕಾರದ ಯೋಜನೆ ತಿಳಿಯಪಡಿಸುವ ಬ್ಯಾನರ್‌ಗಳು ಇನ್ನೂ ಹಾಗೆಯೇ ಉಳಿದುಕೊಂಡಿವೆ. ರಾಜ್ಯದ ಮುಖ್ಯಮಂತ್ರಿ ಬದಲಾಗಿ ಒಂದು ತಿಂಗಳಾಗುತ್ತ ಬಂದರೂ ಹಳೆಯ ಪ್ರಚಾರ ಫಲಕ, ಬ್ಯಾನರ್‌ಗಳನ್ನು ಇನ್ನೂ ತೆರವುಗೊಳಿಸಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ಎತ್ತಿದ್ದಾರೆ.‌

ನಗರದ ಸೆಂಟ್‌ ಜೋಸೆಫ್‌ ಶಾಲೆಯ ಹತ್ತಿರವಿರುವ ಹೆಲ್ತ್‌ ಕ್ಯಾಂಪ್‌, ಎಪಿಎಂಸಿ ಆವರಣದಲ್ಲಿರುವ ಮಣ್ಣು ಆರೋಗ್ಯ ಕೇಂದ್ರ, ರೈತ ಸಂಪರ್ಕ ಕೇಂದ್ರ, ಉಪವಿಭಾಗಾಧಿಕಾರಿಗಳ ಕಚೇರಿ ಆವರಣ, ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರ ಜನಸಂಪರ್ಕ ಕಾರ್ಯಾಲಯದ ಆವರಣವೂ ಸೇರಿದಂತೆ ನಗರದ ಹಲವೆಡೆ ಅಳವಡಿಸಿದ್ದ ಪ್ರಚಾರ ಫಲಕಗಳಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಎಂದು ಸಾರುವ ಬ್ಯಾನರ್‌ಗಳೇ ಈಗಲೂ ಇವೆ. ಇವುಗಳನ್ನು ಬದಲಿಸಲು ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಈಗ ಮುಖ್ಯಮಂತ್ರಿ ಬದಲಾಗಿದ್ದಾರೆ. ಈ ಹಿಂದೆ ಸರ್ಕಾರದಿಂದ ಬಂದಿದ್ದ ಪ್ರಚಾರ ಫಲಕಗಳೇ ಬಹುತೇಕ ಕಚೇರಿಯಲ್ಲಿ ಈಗಲೂ ಉಳಿದುಕೊಂಡಿವೆ. ಆದರೂ, ನಗರದ ಕೆಲವು ಕಡೆಗಳಲ್ಲಿ ಹೊಸ ಫಲಕಗಳನ್ನು ಅಳವಡಿಸಲಾಗಿದೆ. ಉಳಿದ ಕಡೆ ಪರಿಶೀಲಿಸಿ ಕ್ರಮವಹಿಸಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ ಕುಮಾರ್‌ ಎಂ. ತಿಳಿಸಿದರು.

‘ಈ ಹಿಂದೆ ಬೆಂಗಳೂರಿನ ಕೇಂದ್ರ ಕಚೇರಿಯಿಂದ ಕಳುಹಿಸಿಕೊಟ್ಟಿದ್ದ ಪ್ರಚಾರ ಫಲಕಗಳೇ ಈಗಲೂ ಸರ್ಕಾರಿ ಕಚೇರಿಗಳ ಆವರಣದಲ್ಲಿವೆ. ಪ್ರಚಾರ ಫಲಕಗಳನ್ನು ಬದಲಿಸುವುದಕ್ಕೆ ಸಂಬಂಧಿಸಿದಂತೆ ಸಭೆ ನಡೆದಿದ್ದು, ಇನ್ನೆರಡು ದಿನಗಳಲ್ಲಿ ಕೇಂದ್ರ ಕಚೇರಿಯಿಂದ ಸಾಫ್ಟ್‌ ಕಾಪಿ ಬರಲಿವೆ. ಇನ್ನೆರಡು ದಿನಗಳಲ್ಲಿ ಅವುಗಳನ್ನು ಬದಲಿಸಿ, ಹೊಸದನ್ನು ಅಳವಡಿಸಲು ಕ್ರಮವಹಿಸಲಾಗುವುದು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT