ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾನಗರಿಗೆ ಕಪ್ಪುಚುಕ್ಕೆಯಾದ ಬಸ್ ನಿಲ್ದಾಣ

ಅವ್ಯವಸ್ಥೆಯ ತಾಣ ನರೇಗಲ್‌ ಬಸ್‌ ನಿಲ್ದಾಣ: ಸ್ವಚ್ಛತೆ ಮರೀಚಿಕೆ, ನಿಲ್ದಾಣದ ಬಯಲಿನಲ್ಲೇ ಶೌಚ
Published 21 ಆಗಸ್ಟ್ 2023, 6:25 IST
Last Updated 21 ಆಗಸ್ಟ್ 2023, 6:25 IST
ಅಕ್ಷರ ಗಾತ್ರ

ಚಂದ್ರು ಎಂ. ರಾಥೋಡ್

ನರೇಗಲ್:‌ ಜಿಲ್ಲೆಯ ವಿದ್ಯಾನಗರಿ ಎಂದು ಗುರುತಿಸಿಕೊಂಡಿರುವ ನರೇಗಲ್‌ ಪಟ್ಟಣದ ಬಸ್‌ ನಿಲ್ದಾಣ ಅವ್ಯವಸ್ಥೆಯ ತಾಣವಾಗಿದೆ. ಆವರಣದ ಎಲ್ಲೆಂದರಲ್ಲಿ ಕಸ ಬಿದ್ದಿರುತ್ತದೆ. ನಿಲ್ದಾಣದಲ್ಲಿ ಸ್ವಚ್ಛತೆ ಎಂಬುದು ಮರೆಯಾಗಿದೆ.

ಪ್ರತಿದಿನ ಈ ನಿಲ್ದಾಣಕ್ಕೆ 250ಕ್ಕೂ ಹೆಚ್ಚು ಬಸ್‌ಗಳು ಬಂದು ಹೋಗುತ್ತವೆ. ಅಂದಾಜು 12 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಹಾದು ಹೋಗುತ್ತಾರೆ. ಆದರೆ, ನರೇಗಲ್‌ ಬಸ್‌ ನಿಲ್ದಾಣದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಅನಿವಾರ್ಯತೆ ಇಂದಿಗೂ ತಪ್ಪಿಲ್ಲ.

ಬಸ್‌ ನಿಲ್ದಾಣದಲ್ಲಿ ಕುಳಿತುಕೊಳ್ಳುವ ಆಸನಗಳ ಮೇಲೆ ಹಗಲು ವೇಳೆಯಲ್ಲಿ ಜನರು ಮಲಗಿರುತ್ತಾರೆ. ಎಲ್ಲೆಂದರಲ್ಲಿ ಎಲೆ ಅಡಿಕೆ, ಗುಟಕಾ ಜಗಿದು ಉಗಿದಿದ್ದಾರೆ. ಇದರಿಂದ ನಿಲ್ದಾಣದ ಬಣ್ಣವೂ ಬದಲಾಗಿದೆ. ಆಸನಗಳ ಮೇಲೆ ಕುಳಿತು ಪ್ರಯಾಣಿಕರು ಸಂಚರಿಸುವ ಜಾಗದಲ್ಲಿಯೇ ಧೂಮಪಾನ ಮಾಡುತ್ತಾರೆ. ಅದರಲ್ಲೂ ಬೀಡಿ– ಸಿಗರೇಟ್‌ ಸೇದುವ ಪುಂಡರ ಕಿರಿಕಿರಿ ಹೆಚ್ಚಾಗಿದೆ.

ಇಲ್ಲಿನ ಪುರುಷರ ಶೌಚಾಲಯವು ನೀರಿನ ಸಮಸ್ಯೆಯಿಂದ ದುರ್ವಾಸನೆ ಬೀರುತ್ತಿದೆ. ಮೂತ್ರ ವಿಸರ್ಜನೆಯಲ್ಲಿ ಶೌಚದ ಪೈಪುಗಳನ್ನು ಅಳವಡಿಸದೇ ಇರುವ ಕಾರಣ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೊಮ್ಮೆ ಶೌಚಾಲಯಕ್ಕೆ ನೀರಿನ ಪೂರೈಕೆಯೇ ಇರುವುದಿಲ್ಲ. ಇದರಿಂದ ಶೌಚಾಲಯವು ದುರ್ವಾಸನೆ ಬೀರುವ ಹಾಗೂ ರೋಗಗಳನ್ನು ಹರಡುವ ತಾಣವಾಗಿದೆ. ಮಹಿಳೆಯರ ಶೌಚಾಲಯದ ವ್ಯವಸ್ಥೆಯೂ ಸರಿ ಇಲ್ಲದ ಕಾರಣ ಮಹಿಳೆಯರು ಬಯಲಲ್ಲಿಯೇ ಶೌಚಕ್ಕೆ ಮುಂದಾಗುತ್ತಾರೆ.

ಸ್ಥಳೀಯ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ ನೇತೃತ್ವದಲ್ಲಿ ಪಟ್ಟಣ ಪಂಚಾಯ್ತಿಯಿಂದ ಮಾರ್ಚ್ 17ಕ್ಕೆ ಬಸ್‌ ನಿಲ್ದಾಣವನ್ನು ಸ್ವಚ್ಛಗೊಳಿಸಲಾಗಿತ್ತು. ಆಗ ಮಹಿಳಾ ಶೌಚಾಲಯದ ಎದುರಿನ ಕಸದ ರಾಶಿಯಲ್ಲಿ ಕಂಡು ಬಂದ ಹಾವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಡಲಾಯಿತು. ನಂತರ ಸ್ವಚ್ಛತೆ ಕಾಪಾಡುವಂತೆ ನಿಲ್ದಾಣಾಧಿಕಾರಿಗೆ ತಿಳಿಸಿದ್ದರು. ಆದರೆ, ನಿರ್ಲಕ್ಷ್ಯ ತೋರಿದ ಕಾರಣ ಎಲ್ಲೆಡೆ ಮುಳ್ಳಿನಕಂಟಿ ಜತೆಗೆ ಮತ್ತೇ ಕಸದ ರಾಶಿ ಬೆಳೆದು ನಿಂತಿದೆ.

ಅಡ್ಡಾದಿಡ್ಡಿ ನಿಲ್ಲುವ ಬಸ್‌ಗಳು: ನರೇಗಲ್‌ ನಿಲ್ದಾಣದಲ್ಲಿ ಫ್ಲಾಟ್‌ ಫಾರಂ ವ್ಯವಸ್ಥೆ ಹಾಗೂ ಬೋರ್ಡುಗಳು ಇಲ್ಲದಿರುವ ಕಾರಣ ಯಾವುದೇ ಬಸ್‌ಗಳು ಫ್ಲಾಟ್‌ಫಾರ್ಮ್‌ಗೆ ಬಂದು ನಿಲ್ಲುವುದಿಲ್ಲ. ಬದಲಾಗಿ ಜಾಗ ಸಿಕ್ಕಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ. ಇದರಿಂದಾಗಿ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಬಸ್‌ ನಿಲ್ದಾಣಕ್ಕೆ ಬರುವ ಯಾವ ಬಸ್‌, ಯಾವ ಊರಿಗೆ ಹೋಗುತ್ತದೆ. ಎಲ್ಲಿ ನಿಲ್ಲುತ್ತದೆ ಎಂದು ಪ್ರಯಾಣಿಕರು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರು ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳು ಇಲ್ಲದೆ ಇರುವ ಕಾರಣ ಜನರಿಗೆ ತೊಂದರೆ ಆಗಿದೆ. ಕುಡಿಯುವ ನೀರು ಎಂದು ನಳದ ಮೂಲಕ ಸಿಂಟ್ಯಾಕ್ಸ್‌ ನೀರು ಬೀಡುತ್ತಾರೆ. ಅದರ ಸುತ್ತಲೂ ಪಾಚಿಗಟ್ಟಿದ್ದು ದುರ್ವಾಸನೆ ಬೀರುತ್ತಿದೆ.

ವೇಳಾಪಟ್ಟಿಗೆ ಜಾಹೀರಾತು!: ಇಲ್ಲಿನ ಬಸ್‌ ನಿಲ್ದಾಣದಲ್ಲಿ ಬರೆಯಿಸಲಾಗಿರುವ ಹಳೆಯ ವೇಳಾಪಟ್ಟಿಗೆ ಜನರು ಜಾಹಿರಾತು ಅಂಟಿಸುತ್ತಾರೆ. ಆದರೆ ಅಂಟಿಸಿದ ಕಂಪನಿ, ವ್ಯಕ್ತಿಗಳ ವಿರುದ್ದ ಯಾವುದೇ ಕ್ರಮಕ್ಕೆ ಮುಂದಾಗದ ಕಾರಣ ಬಸ್‌ ನಿಲ್ದಾಣವನ್ನು ಜಾಹೀರಾತು ತಾಣವನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಬಸ್‌ ಬರುವ, ಬಿಡುವ ವೇಳೆ ಹಾಗೂ ಗ್ರಾಮಗಳ ಮಾಹಿತಿ ಸಿಗದೆ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ

ಮಿತಿಮೀರಿದ ಕುಡುಕರ ಹಾವಳಿ: ‘ಬಸ್‌ ನಿಲ್ದಾಣದಲ್ಲಿ ಸಂಜೆಯಾಗುತ್ತಿದ್ದಂತೆ ಕುಡುಕರ, ಪುಂಡರ ಹಾವಳಿ ಮಿತಿಮೀರುತ್ತದೆ. ಬಸ್‌ ನಿಲ್ದಾಣದಲ್ಲೇ ಕುಡಿದು ಗಲೀಜು ಮಾಡುತ್ತಾರೆ. ಇದನ್ನು ತಡೆಯಲು ಹೋಗುವ ನಿಯಂತ್ರಣಾಧಿಕಾರಿ ಹಾಗೂ ಸಾರ್ವಜನಿಕರ ಮೇಲೆಯೇ ಹಲ್ಲೆಗೆ ಮುಂದಾಗುತ್ತಾರೆ. ಅಧಿಕಾರಿಗಳು ಎಷ್ಟೇ ಹೇಳಿದರೂ ಕುಡುಕರು ಕೇಳುತ್ತಿಲ್ಲ. ತಿಳಿಸಿ ಬುದ್ದಿ ಹೇಳಲು ಹೋದರೆ ನಿಲ್ದಾಣ ನಿಮಪ್ಪನದ್ದಾ ಎಂದು ಗದರಿಸುತ್ತಾರೆ. ಈಗಾಗಲೇ ಠಾಣಾಧಿಕಾರಿ ನಿಖಿಲ್‌ ಹಾಗೂ ಸಿಬ್ಬಂದಿಗೆ ಈ ವಿಚಾರವನ್ನು ಅನೇಕ ಬಾರಿ ತಿಳಿಸಿದ್ದೇನೆ. ಪೊಲೀಸರು ಕ್ರಮವಹಿಸಬೇಕು’ ಎಂದು ನಿಯಂತ್ರಣಾಧಿಕಾರಿ ಬೇವುರ ಹೇಳಿದರು.

ವಿದ್ಯಾ ನಗರಿ ಎಂಬ ಹಿರಿಮೆಗೆ ಪಾತ್ರವಾಗಿರುವ ನರೇಗಲ್‌ಗೆ ಸರ್ಕಾರಿ ಬಸ್‌ ನಿಲ್ದಾಣ ಕಿರೀಟಪ್ರಾಯವಾಗಬೇಕಿತ್ತು. ಆದರೆ, ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಪ್ರತಿನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಅಡ್ಡಾಡುವ ಜಾಗವನ್ನು ಸ್ವಚ್ಛ ಮತ್ತು ಜನಸ್ನೇಹಿಯಾಗಿಡುವ ಪ್ರಯತ್ನಕ್ಕೆ ಅಧಿಕಾರಿಗಳ ಜತೆಗೆ ಸಾರ್ವಜನಿಕರೂ ಕೈಜೋಡಿಸಬೇಕು. ಆಗಷ್ಟೇ, ಊರು ಸುಂದರಗೊಳ್ಳುತ್ತದೆ. ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂಬ ಆಶಯ ವ್ಯಕ್ತಪಡಿಸುತ್ತಾರೆ ಪಟ್ಟಣದ ಪ್ರಜ್ಞಾವಂತ ಜನರು.

ನರೇಗಲ್‌ ಬಸ್‌ ನಿಲ್ದಾಣದ ಕ್ಯಾಂಟೀನ್‌ ಪಕ್ಕದ ಬಯಲು ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡಿರುವುದು
ನರೇಗಲ್‌ ಬಸ್‌ ನಿಲ್ದಾಣದ ಕ್ಯಾಂಟೀನ್‌ ಪಕ್ಕದ ಬಯಲು ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡಿರುವುದು
ನರೇಗಲ್‌ ಬಸ್‌ ನಿಲ್ದಾಣದಲ್ಲಿ ಸಂಗ್ರಹವಾಗಿರುವ ಮದ್ಯಾಪನದ ಪ್ಯಾಕೇಟುಗಳು
ನರೇಗಲ್‌ ಬಸ್‌ ನಿಲ್ದಾಣದಲ್ಲಿ ಸಂಗ್ರಹವಾಗಿರುವ ಮದ್ಯಾಪನದ ಪ್ಯಾಕೇಟುಗಳು
ನರೇಗಲ್‌ ಬಸ್‌ ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ಬಸ್‌ಗಳು
ನರೇಗಲ್‌ ಬಸ್‌ ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವ ಬಸ್‌ಗಳು
ನರೇಗಲ್‌ ಬಸ್‌ ನಿಲ್ದಾಣದ ಒಳಗೆ ನಿಲ್ಲಿಸಿರುವ ಬೈಕುಗಳು
ನರೇಗಲ್‌ ಬಸ್‌ ನಿಲ್ದಾಣದ ಒಳಗೆ ನಿಲ್ಲಿಸಿರುವ ಬೈಕುಗಳು
ನರೇಗಲ್‌ ಪಟ್ಟಣದ ಬಸ್‌ ನಿಲ್ದಾಣ
ನರೇಗಲ್‌ ಪಟ್ಟಣದ ಬಸ್‌ ನಿಲ್ದಾಣ
ಅರ್ಚನಾ ಕುಲಕರ್ಣಿ
ಅರ್ಚನಾ ಕುಲಕರ್ಣಿ
ರಾಜೇಂದ್ರ ಜಕ್ಕಲಿ
ರಾಜೇಂದ್ರ ಜಕ್ಕಲಿ
ಸಂತೋಷ ಮಣ್ಣೋಡ್ಡರ
ಸಂತೋಷ ಮಣ್ಣೋಡ್ಡರ
ಯಾರಿಗೆ ಎಷ್ಟೇ ತಿಳಿವಳಿಕೆ ನೀಡಿದರೂ ಸ್ವಚ್ಛತೆಗೆ ಜನರು ಸಹಕಾರ ನೀಡುತ್ತಿಲ್ಲ. ಇದಕ್ಕೆ ಸ್ಥಳೀಯರ ಸಹಕಾರವೂ ಅಗತ್ಯವಾಗಿದೆ
ಎಂ. ಡಿ. ಬೇವುರ ನಿಯಂತ್ರಣಾಧಿಕಾರಿ ನರೇಗಲ್‌ ಬಸ್‌ ನಿಲ್ದಾಣ
ಬಸ್‌ ನಿಲ್ದಾಣದಲ್ಲಿ ಕುಡುಕರು ಪುಂಡರ ಹಾವಳಿ ಕುರಿತು ನಿಯಂತ್ರಣಾಧಿಕಾರಿ ಮಾಹಿತಿ ನೀಡಿಲ್ಲ. ಜನರಿಗೆ ತೊಂದರೆಯಾಗದಂತೆ ತಡೆಯಲು ಕ್ರಮ ಜರುಗಿಸಲಾಗುವುದು
ನಿಖಿಲ್ ಎಂ.ಕೆ.‌ ಠಾಣಾಧಿಕಾರಿ ನರೇಗಲ್‌ ಪೊಲೀಸ್‌ ಠಾಣೆ
ನರೇಗಲ್‌ ಬಸ್‌ ನಿಲ್ದಾಣದಲ್ಲಿರುವ ಕುಡುಕರು ಹಾಗೂ ಪುಂಡರ ಹಾವಳಿ ತಡೆಯಲು ಪೊಲೀಸ್‌ ಇಲಾಖೆ ಕ್ರಮವಹಿಸಬೇಕು. ಮಕ್ಕಳು ವೃದ್ಧರು ಹಾಗೂ ಹೆಣ್ಣುಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು
ಸೋಮಪ್ಪ ಹನಮಸಾಗರ ಸ್ಥಳೀಯ ನಿವಾಸಿ

ಬಸ್‌ ನಿಲ್ದಾಣದ ಬಗ್ಗೆ ಸಾರ್ವಜನಿಕರು ಏನಂತಾರೆ? ಶೌಚಾಲಯ ಸ್ವಚ್ಛವಾಗಿಡಿ ಬಸ್‌ ನಿಲ್ದಾಣದ ಸ್ವಚ್ಛತೆ ಹಾಗೂ ಮಹಿಳಾ ಶೌಚಾಲಯದ ಸ್ವಚ್ಛತೆ ಮೊದಲ ಆದ್ಯತೆ ನೀಡಬೇಕು. ನಿಲ್ದಾಣದ ಸುತ್ತ ಇರುವ ಕಸ ತೆಗಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. – ಅರ್ಚನಾ ಕುಲಕರ್ಣಿ ಮಹಿಳಾ ಪ್ರಯಾಣಿಕರು ‍ವೇಳಾಪಟ್ಟಿ ಬರೆಯಿಸಿ ನರೇಗಲ್‌ನಲ್ಲಿರುವ ಬಸ್‌ ನಿಲ್ದಾಣಕ್ಕೆ ಪೂರ್ಣ ಪ್ರಮಾಣದಲ್ಲಿ ಹೊಸದಾಗಿ ಬಣ್ಣ ಹಚ್ಚಿಸಬೇಕು. ಫ್ಲಾಟ್‌ ಫಾರಂ ನಂಬರ್‌ ಬೋರ್ಡ್‌ ಹಾಗೂ ವೇಳಾಪಟ್ಟಿ ಬರೆಯಿಸಬೇಕು. ಇದರಿಂದ ಪ್ರಯಾಣಿಕರಿಗೆ ತುಂಬ ಅನುಕೂಲ ಆಗಲಿದೆ. –ರಾಜೇಂದ್ರ ಜಕ್ಕಲಿ ಗ್ರಾಮದ ಹಿರಿಯ ಇಬ್ಬರನ್ನು ನೇಮಿಸಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿರುವ ಕಾರಣ ನರೇಗಲ್‌ ಪಟ್ಟಣದ ಬಸ್‌ ನಿಲ್ದಾಣಕ್ಕೆ ಇಬ್ಬರು ನಿಯಂತ್ರಣಾಧಿಕಾರಿಗಳನ್ನು ನೇಮಕ ಮಾಡಬೇಕು. ಸಾರಿಗೆ ಇಲಾಖೆ ಈ ನಿಟ್ಟಿನಲ್ಲಿ ಯೋಚಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.–ಸಂತೋಷ ಮಣ್ಣೋಡ್ಡರ ಕಾರ್ಮಿಕ ಸಂಘದ ಅಧ್ಯಕ್ಷ

ನಿಲ್ದಾಣದಲ್ಲಿ ಖಾಸಗಿ ವಾಹನಗಳ ಹಾವಳಿ ಬಸ್‌ ನಿಲ್ದಾಣದಲ್ಲಿ ದ್ವಿಚಕ್ರವಾಹನ ಕಾರು ಸೇರಿದಂತೆ ಖಾಸಗಿ ವಾಹನಗಳ ಹಾವಳಿ ಜಾಸ್ತಿಯಾಗಿದೆ. ಅದರಲ್ಲೂ ದ್ವಿಚಕ್ರವಾಹನಗಳನ್ನು ಫ್ಲಾಟ್‌ ಫಾರಂಗೆ ತಂದು ನಿಲ್ಲಿಸುತ್ತಾರೆ. ಬಸ್‌ಗಳು ಒಳಗೆ ಬರುವಾಗ ವೇಗದಿಂದ ಬರುವ ಖಾಸಗಿ ವಾಹನಗಳಿಂದ ಅಪಘಾತಗಳು ನಡೆಯುವ ಸಂದರ್ಭವೂ ಹೆಚ್ಚಾಗಿದೆ. ಆದ್ದರಿಂದ ಇದನ್ನು ತಡೆಯಬೇಕು. ಬಯಲು ಜಾಗ ಅಪಾರವಾಗಿರುವ ಕಾರಣ ಖಾಸಗಿ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು ಎನ್ನುವುದು ಜನರ ಆಗ್ರಹವಾಗಿದೆ.

ಕ್ಯಾಂಟೀನ್‌ ಪಕ್ಕದ ಬಯಲಿನಲ್ಲೇ ಶೌಚ ಇಲ್ಲಿನ ಕೆಎಸ್‌ಆರ್‌ಟಿಸಿ ಕ್ಯಾಂಟಿನ್‌ ಪಕ್ಕದಲ್ಲಿನ ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆಗೆ ಜನರು ಮುಂದಾಗುತ್ತಾರೆ. ಇದೇ ಜಾಗದಲ್ಲಿ ಟಂಟಂ ಕಾರು ಹಾಗೂ ಇತರೆ ವಾಹನಗಳನ್ನು ನಿಲ್ಲಿಸುವುದರಿಂದ ಕ್ಯಾಂಟಿನ್‌ ಸೇರಿದಂತೆ ಇತರೆ ಅಂಗಡಿಗಳನ್ನು ಹಾಕಿರುವ ಮಾಲಿಕರು ನಷ್ಟದಿಂದ ಬಳಲುತ್ತಿದ್ದಾರೆ. ಬಸ್‌ ನಿಲ್ದಾಣದ ಸುತ್ತಲು ಸರಿಯಾಗಿ ಬೆಳಕಿನ ವ್ಯವಸ್ಥೆಯೂ ಇಲ್ಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT