ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕ ಗ್ರಂಥಾಲಯ!

7
ಜಿಲ್ಲಾಡಳಿತ–ಗ್ರಂಥಾಲಯ ಇಲಾಖೆ ಸಹಭಾಗಿತ್ವದ ಯೋಜನೆ; ಪ್ರಯಾಣಿಕರಿಗೆ ಅನುಕೂಲ

ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕ ಗ್ರಂಥಾಲಯ!

Published:
Updated:
Deccan Herald

ಗದಗ: ‘ಸಾರ್ವಜನಿಕ ಗ್ರಂಥಾಲಯ ಜನಸಾಮಾನ್ಯರ ವಿಶ್ವವಿದ್ಯಾಲಯ’ ಎಂಬ ಮಾತಿದೆ. ಜಿಲ್ಲಾಡಳಿತವು ಇದೇ ಆಶಯದೊಂದಿಗೆ ಗ್ರಂಥಾಲಯ ಇಲಾಖೆಯ ಸಹಭಾಗಿತ್ವದಲ್ಲಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಗ್ರಂಥಾಲಯ ಪ್ರಾರಂಭಿಸಿದೆ. ಎರಡು ವಾರಗಳ ಹಿಂದೆ ಪ್ರಾರಂಭಗೊಂಡಿರುವ ಈ ಜ್ಞಾನದ ಆಲಯವು ನಿತ್ಯ ಬಸ್‌ ನಿಲ್ದಾಣಕ್ಕೆ ಬಂದ ನೂರಾರು ಪ್ರಯಾಣಿಕರನ್ನು ಕೈಬೀಸಿ ಕರೆಯುತ್ತಿದೆ.

ರಾಜ್ಯದ ಕೆಲವು ಬಸ್‌ ನಿಲ್ದಾಣಗಳಲ್ಲಿ ಈಗಾಗಲೇ ಸಾರ್ವಜನಿಕ ಗ್ರಂಥಾಲಯ ತೆರೆಯಲಾಗಿದೆ. ಗದಗ ಜಿಲ್ಲೆಯಲ್ಲಿ ಇದೇ ಮೊದಲು. ನಿತ್ಯ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರೇ ಈ ಗ್ರಂಥಾಲಯದ ಪ್ರಮುಖ ಓದುಗರು.

ನಗರದ ಹಳೆಯ ಬಸ್‌ನಿಲ್ದಾಣದ ಕಟ್ಟವವನ್ನು ಕೆಡವಿ, ಅಲ್ಲಿ ಹೊಸ ಕಟ್ಟಡ ಕಟ್ಟುತ್ತಿದ್ದಾರೆ. ಹೀಗಾಗಿ ಹೊಸ ಬಸ್‌ ನಿಲ್ದಾಣದಲ್ಲಿ ಬಸ್‌ಗಳ ಮತ್ತು ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ವರ್ಷದ ಹಿಂದೆ ಬಿಕೊ ಎನ್ನುತ್ತಿದ್ದ ನಿಲ್ದಾಣವು ಈಗ ನಿತ್ಯ ನೂರಾರು ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಸಿಬ್ಬಂದಿ ನೀಡುವ ಮಾಹಿತಿ ಪ್ರಕಾರ ನಿತ್ಯ 80 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಈ ನಿಲ್ದಾಣದ ಮೂಲಕ ವಿವಿಧೆಡೆ ಪ್ರಯಾಣ ಬೆಳೆಸುತ್ತಾರೆ. ಬಸ್‌ಗಾಗಿ ಕಾಯುವ ಸಮಯವನ್ನೇ ಜ್ಞಾನದ ಸಮಯವಾಗಿ ಬದಲಾಯಿಸಲು ರೂಪುಗೊಂಡ ಯೋಜನೆಯೇ ಈ ಗ್ರಂಥಾಲಯ.

ನಿಲ್ದಾಣದಲ್ಲಿ ಖಾಲಿ ಇದ್ದ ಕೊಠಡಿಯೊಂದನ್ನು ಗ್ರಂಥಾಲಯವಾಗಿ ಪರಿವರ್ತಿಸಲಾಗಿದೆ. ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಂಥಾಲಯ ಇಲಾಖೆಯಲ್ಲಿದ್ದ ಪುಸ್ತಕಗಳನ್ನೇ ಇಲ್ಲಿ ತಂದು ಜೋಡಿಸಲಾಗಿದೆ. ಸದಾ ಪ್ರಯಾಣಿಕರ ಗದ್ದಲದಿಂದ ಕೂಡಿರುತ್ತಿದ್ದ ಬಸ್‌ ನಿಲ್ದಾಣದಲ್ಲಿ ಗ್ರಂಥಾಲಯ ಪ್ರಾರಂಭವಾದ ನಂತರ ಶಿಸ್ತು ಮೂಡಿದೆ. ಅಲ್ಲಲ್ಲಿ ನಿಂತುಕೊಂಡು ಮಾತನಾಡುತ್ತಿದ್ದವರು, ಈಗ ಗ್ರಂಥಾಲಯದೊಳಗೆ ಹೋಗಿ, ಪತ್ರಿಕೆ, ಪುಸ್ತಕ ಓದುತ್ತಾರೆ.

ಜ್ಞಾನ ದಾಹ ಇಂಗಿಸಲು 2 ಸಾವಿರ ಪುಸ್ತಕಗಳು

9 ಕನ್ನಡ, 2 ಇಂಗ್ಲಿಷ್ ದಿನ ಪತ್ರಿಕೆಗಳು, 4 ಕನ್ನಡ ವಾರ ಪತ್ರಿಕೆಗಳು, 6 ಮಾಸಿಕ ಪತ್ರಿಕೆಗಳು ಗ್ರಂಥಾಲಯದಲ್ಲಿ ನಿತ್ಯ ಓದಲು ಲಭ್ಯವಿದೆ. 600ಕ್ಕೂ ಹೆಚ್ಚು ಕನ್ನಡ, 20ಕ್ಕೂ ಹೆಚ್ಚು ಇಂಗ್ಲಿಷ್‌ ಪುಸ್ತಕಗಳು ಸೇರಿ ವಿವಿಧ ವಿಷಯಗಳಿಗೆ ಸಂಬಂಧಿಸಿದ 2 ಸಾವಿರಕ್ಕೂ ಹೆಚ್ಚು ಪುಸ್ತಕಗಳು ಗ್ರಂಥಾಲಯದಲ್ಲಿವೆ.

‘ಪ್ರತಿನಿತ್ಯ ಸರಾಸರಿ 150 ಜನರು ಭೇಟಿ ನೀಡುತ್ತಾರೆ. ಇವರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಗ್ರಂಥಾಲಯ ಸಹಾಯಕ ಗಿರೀಶ ತಿರ್ಲಾಪೂರ ಹೇಳಿದರು.

ಗದುಗಿನ ರೈಲ್ವೆ ನಿಲ್ದಾಣದಲ್ಲೂ ಸಾರ್ವಜನಿಕ ಗ್ರಂಥಾಲಯ ತೆರೆಯುವ ಯೋಜನೆ ಇದೆ. ರೈಲ್ವೆ ಇಲಾಖೆಯಿಂದ ಅನುಮತಿ ಮತ್ತು ಸ್ಥಳ ಲಭಿಸಿದರೆ ಶೀಘ್ರದಲ್ಲೇ ಆರಂಭಿಸಲಾಗುವುದು
- ಜಿ.ಎಸ್.ವೆಂಕಟೇಶ್ವರಿ, ಗ್ರಂಥಾಲಯ ಇಲಾಖೆ ಅಧಿಕಾರಿ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !