ಸೋಮವಾರ, ಸೆಪ್ಟೆಂಬರ್ 20, 2021
23 °C
ನೂತನ ಸಚಿವ ಸಂಪುಟದಲ್ಲಿ ಸಿ.ಸಿ.ಪಾಟೀಲಗೆ ಸಚಿವ ಸ್ಥಾನ

ಸಿ.ಸಿ.ಪಾಟೀಲ: ಪಕ್ಷ ನಿಷ್ಠೆ, ಸ್ನೇಹ ಭಾವಕ್ಕೆ ಖುಲಾಯಿಸಿದ ಅದೃಷ್ಟ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ಮೊದಲಿನಿಂದಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಿಷ್ಠರಾಗಿ ಗುರುತಿಸಿಕೊಂಡಿದ್ದ ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ನಿರೀಕ್ಷೆಯಂತೆ ಸಚಿವ ಸ್ಥಾನ ಪಡೆದಿದ್ದಾರೆ. ಜತೆಗೆ ಬೊಮ್ಮಾಯಿ ಅವರೊಂದಿಗಿನ ಆತ್ಮೀಯ ಗೆಳೆತನ ಇವರಿಗೆ ಉತ್ತಮ ಖಾತೆ ದೊರಕಿಸಿಕೊಡುವ ವಿಶ್ವಾಸ ಮೂಡಿಸಿದೆ.

ವಲಸಿಗರ ಒತ್ತಡ, ಸಚಿವ ಸ್ಥಾನ ಸಿಗದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳುತ್ತಿದ್ದ ಸ್ವಪಕ್ಷದ ಘಟನಾನುಘಟಿಗಳನ್ನು ಹಿಂದಿಕ್ಕಿ ಹೊಸ ಸಂಪುಟದಲ್ಲಿ ಸಚಿವ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸಿ.ಸಿ.ಪಾಟೀಲ ಲಿಂಗಾಯತ ಪಂಚಮಸಾಲಿ ಸಮುದಾಯದ ನಾಯಕ. ಪಕ್ಷ ನಿಷ್ಠೆ, ಸ್ವಾಮಿ ನಿಷ್ಠೆ ಜತೆಗೆ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಸಮರ್ಥವಾಗಿ ಆಡಳಿತ ನೀಡಿದ್ದು ಕೂಡ ಮತ್ತೊಮ್ಮೆ ಮಂತ್ರಿ ಸ್ಥಾನ ಒಲಿದು ಬರಲು ಕಾರಣವಾಗಿದೆ. ಕೋವಿಡ್‌–19 ಹಾಗೂ ಅತಿವೃಷ್ಟಿ ನಿರ್ವಹಣೆಯಲ್ಲಿ ಅವರು ತೋರಿದ ಚಾಕಚಕ್ಯತೆ ಕೂಡ ‘ಸಚಿವರ ಪಟ್ಟಿ’ಯಲ್ಲಿ ತಮ್ಮ ಹೆಸರು ಭದ್ರವಾಗಿ ನೆಲೆನಿಲ್ಲಲು ನೆರವಾದ ಪ್ರಬಲ ಅಂಶ ಎನ್ನಲಾಗಿದೆ.

2004, 2008 ಹಾಗೂ 2018ರಲ್ಲಿ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ, ಗಣಿ ಮತ್ತು ಭೂ ವಿಜ್ಞಾನ ಖಾತೆ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಖಾತೆ, ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

1995ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಚುನಾಯಿತರಾದ ಇವರು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಹುದ್ದೆ (2008–2010), ಡಿ.ವಿ.ಸದಾನಂದಗೌಡ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿ (2010–2012) ಹಾಗೂ 2016ರಲ್ಲಿ ಗದಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸಿದ್ದಾರೆ. ನಂತರ 2018ರಲ್ಲಿ ನಡೆದ ಚುನಾವಣೆಯಲ್ಲಿ ಜಯಗಳಿಸಿ, 2019ರಿಂದ ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

‘ಅಶ್ವಮೇಧ ಯಾಗದ ಕುದುರೆಯನ್ನು ಹಿಡಿದು ಕಟ್ಟಿಹಾಕಲು ತಾಕತ್ತು ಇರಬೇಕು. ಉತ್ತಮ ಆಡಳಿತ ಹಾಗೂ ಪಕ್ಷ ನಿಷ್ಢೆಯಿಂದಲೇ ಸಿ.ಸಿ.ಪಾಟೀಲ ಅಂತಹ ಶಕ್ತಿ ಗಳಿಸಿಕೊಂಡಿದ್ದಾರೆ. ಜಿಲ್ಲೆಗೆ ಸಚಿವ ಸ್ಥಾನ ಸಿಗದಿದ್ದರೆ ತೀವ್ರ ಕಷ್ಟ ಎದುರಾಗುತ್ತಿತ್ತು. ಜಿಲ್ಲಾ ಉಸ್ತುವಾರಿ ಸಚಿವರನ್ನು ಹುಡುಕಿಕೊಂಡು ಜಿಲ್ಲೆಯ ಜನರು ಅಲೆಯಬೇಕಿತ್ತು. ಸಿ.ಸಿ.ಪಾಟೀಲರಿಗೆ ಸಚಿವ ಸ್ಥಾನ ಲಭಿಸಿದೆ. ಹಾಲುಂಡಷ್ಟು ಖುಷಿಯಾಗಿದೆ. ಮುಂದೆ ಕೂಡ ಅವರು ಜನರ ಆಶೋತ್ತರಗಳಿಗೆ ಅನುಗುಣವಾಗಿ ನಡೆಯುವ ಭರವಸೆ ಇದೆ’ ಎಂದು ಜಿಲ್ಲೆಯ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.

ಮೊದಲಿನಿಂದಲೂ ಸ್ನೇಹಿತರು

ವಯಸ್ಸಿನಲ್ಲಿ ತನಗಿಂತಲೂ ಕಿರಿಯಾದರೂ ಸಹ ಬಸವರಾಜ ಬೊಮ್ಮಾಯಿ ನನ್ನ ರಾಜಕೀಯ ಗುರು ಎಂದು ಸಿ.ಸಿ.ಪಾಟೀಲ ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದಾರೆ.

ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ಹೋರಾಟದಲ್ಲಿ ಸಿ.ಸಿ.ಪಾಟೀಲರ ಜತೆಯಾಗಿ ಬೊಮ್ಮಾಯಿ ಕೂಡ ಕೈ ಜೋಡಿಸಿದ್ದರು. ಮೊದಲಿನಿಂದಲೂ ರಾಜಕೀಯವಾಗಿ ಇಬ್ಬರೂ ಆತ್ಮೀಯರಾಗಿರುವುದು ಕೂಡ ಇವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲು ನೆರವಾಗಿದೆ ಎನ್ನಲಾಗಿದೆ.

ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಸಚಿವ ಸಿ.ಸಿ.ಪಾಟೀಲ ಅವರಿಗೆ ಈ ಬಾರಿ ನೀರಾವರಿ ಖಾತೆ ಸಿಕ್ಕರೆ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುಕೂಲ ಆಗಲಿದೆ.
- ರವಿ ದಂಡಿನ, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು