ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣತಿ ನಡೆಸಿ ಪುನರ್ವಸತಿ ಕಲ್ಪಿಸಿ

ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಆಗ್ರಹ
Last Updated 16 ಜುಲೈ 2022, 4:14 IST
ಅಕ್ಷರ ಗಾತ್ರ

ಗದಗ: ‘ದೇವದಾಸಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ಸಹಾಯಧನವನ್ನು ಕನಿಷ್ಠ ₹5 ಸಾವಿರಕ್ಕೆ ಹೆಚ್ಚಿಸಬೇಕು. ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ದೇವದಾಸಿ ಮಹಿಳೆಯರ ಮಕ್ಕಳು ಮತ್ತು ಕುಟುಂಬದ ಸದಸ್ಯರನ್ನು ತಕ್ಷಣವೇ ಗಣತಿ ಮಾಡಿ ಅವರಿಗೂ ಪುನರ್ವಸತಿ ಕಲ್ಪಿಸಬೇಕು’ ಎಂದುರಾಜ್ಯ ಕಾರ್ಯದರ್ಶಿ ಬಿ. ಮಾಳಮ್ಮ ಆಗ್ರಹಿಸಿದರು,

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‌ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ಜಂಟಿಯಾಗಿ ಶುಕ್ರವಾರ ಇಲ್ಲಿನ ಗದಗ-ಬೆಟಗೇರಿ ನಗರಸಭೆ ಆವರಣದಿಂದ ನಗರದ ಪ್ರಮುಖ ಬೀದಿಗಳ ಮೂಲಕ ಜಿಲ್ಲಾಡಳಿತ ಭವನದವರೆಗೆ ಜಾಥಾ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.

ಸಂಘದ ಗೌರವಾಧ್ಯಕ್ಷ ಯು.ಬಸವರಾಜ ಮಾತನಾಡಿ, ‘ಬಜೆಟ್‍ಗೂ ಮುನ್ನ ವಿಧಾನಸೌಧದ ಬಳಿ 2 ಸಾವಿರ ಮಹಿಳೆಯರು ನಡೆಸಿದ ಅಹೋರಾತ್ರಿ ಧರಣಿ ವೇಳೆ ಮನವಿ ಸ್ವೀಕರಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವರು ಮಾಸಾಶನ ಹೆಚ್ಚಳ ಸೇರಿದಂತೆ ಮತ್ತಿತರೆ ಭರವಸೆ ನೀಡಿದ್ದರು. ಆದರೆ, ಅದು ಘೋಷಣೆಯಾಗಲಿಲ್ಲ. ಸರ್ಕಾರ ಈಗಲಾದರೂ ನಮ್ಮ ಹಕ್ಕೊತ್ತಾಯಗಳನ್ನು 2022ರ ರಾಜ್ಯ ಬಜೆಟ್‍ನಲ್ಲಿ ಸೇರ್ಪಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಮುಖಂಡ ಬಾಲು ರಾಠೋಡ ಮಾತನಾಡಿ, ದೇವದಾಸಿ ಮಹಿಳೆಯರ ಮಕ್ಕಳಿಗೂ ತಲಾ ಕನಿಷ್ಠ ₹10 ಲಕ್ಷ ಮೌಲ್ಯದ ಹಿತ್ತಲು ಸಹಿತ ಮನೆಯನ್ನು ಹತ್ತು ಸೆಂಟ್ಸ್ ಸ್ಥಳದಲ್ಲಿ ಉಚಿತವಾಗಿ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.

ಬದುಕು ರೂಪಿಸಿಕೊಳ್ಳಲು ತರಕಾರಿ, ತೆಂಗು, ಹಣ್ಣು, ಬೆಳೆಯಲು ಮತ್ತು ಪಶುಪಾಲನೆಯಲ್ಲಿ ತೊಡಗಲು ಅನುವಾಗುವಂತೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ಅಗತ್ಯ ಕಾರ್ಯಕ್ರಮ ರೂಪಿಸಬೇಕು. ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು ತಕ್ಷಣವೇ ತುಂಬಬೇಕು. ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಖಾಸಗಿ ರಂಗಕ್ಕೂ ಮೀಸಲಾತಿಯನ್ನು ವಿಸ್ತರಿಸಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೇಲಿನ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆ 2014ನ್ನು ತಕ್ಷಣ ಅಂಗೀಕರಿಸಬೇಕು. ಮಕ್ಕಳ ಸ್ವ-ಸಹಾಯ ಗುಂಪುಗಳಿಗೆ ಕನಿಷ್ಠ ₹1 ಲಕ್ಷ ಸುತ್ತುನಿಧಿ ಮತ್ತು ₹15 ಲಕ್ಷ ಹಣವನ್ನು ಶೇ 75 ಸಹಾಯಧನವಿರುವ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ದೇವಮ್ಮ ಜೋಗಣ್ಣವರ, ಯಮನವ್ವ ಹುಲಿಗೆಮ್ಮ, ನಿಂಗಮ್ಮ ತಡಹಾಳ, ಗೀತಾ ತೆಗ್ಗಿನಮನಿ, ಕರಿಯಪ್ಪ ಚಲವಾದಿ, ನಾಗಪ್ಪ ಮಾದರ, ಪಕೀರಮ್ಮ ಪೂಜಾರ, ಅಡಿವೆಮ್ಮ ಬೆಳಗಟ್ಟಿ, ಹನಮವ್ವ ಚಲವಾದಿ, ದುರಗಮ್ಮ ಮಾದರ, ಶಿವವ್ವ ನಿಡಗುಂದಿ, ಮಾದೇವಿ ದೊಡ್ಡಮನಿ, ಮರಿಯಮ್ಮ, ಮಲ್ಲಿಕಾರ್ಜುನ ಮಾದರ, ಮುತ್ತಪ್ಪ ಮುದೇನಗುಡಿ, ಕೆಂಚಪ್ಪ ಮಾದರ, ನಾಗರಾಜ ಮುಂಡರಗಿ, ವಿಜಯ ಹಾಗೂ ರೋಣ, ಗಜೇಂದ್ರಗಡ, ನರಗುಂದ, ಮುಂಡರಗಿ, ಗದಗ ತಾಲ್ಲೂಕಿನ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT