ಗುರುವಾರ , ಸೆಪ್ಟೆಂಬರ್ 16, 2021
29 °C
ಬೊಮ್ಮೊಯಿ ಸಂಪುಟದಲ್ಲಿ ಪ್ರಮುಖ ಖಾತೆ ಪಡೆದುಕೊಂಡ ಸಿ.ಸಿ.ಪಾಟೀಲ

ಸ್ನೇಹಿತನಿಗೆ ಅಚ್ಚರಿಯ ಉಡುಗೊರೆ ಕೊಟ್ಟ ಸಿಎಂ!

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ನರಗುಂದ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ ಅವರಿಗೆ ನಿರೀಕ್ಷೆಯಂತೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮುಖ ಖಾತೆಯೊಂದನ್ನು ಬೆಳ್ಳಿತಟ್ಟೆಯಲ್ಲಿಟ್ಟು ಗೆಳೆಯನ ಕೈಗೆ ಇಟ್ಟಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಯೊಬ್ಬರಿಗೆ ನೂತನ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆ ಸಿಕ್ಕಿರುವುದಕ್ಕೆ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದರೆ; ಪಕ್ಷದ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆ ಪ‍ಡೆಯುವ ಸಲುವಾಗಿ ಅನೇಕರು ಹಲವು ದಿನಗಳಿಂದ ಲಾಬಿ ನಡೆಸಿದ್ದರು. ಕೆಲವರಂತೂ ‘ನನಗೆ ಇಂತಹದ್ದೇ ಖಾತೆ ಕೊಡಬೇಕು’ ಎಂದು ಮುಖ್ಯಮಂತ್ರಿ ಎದುರು ಬಿಗಿ ‘ಪಟ್ಟು’ ಹಾಕಿ ಬಂದಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಸಚಿವ ಸಿ.ಸಿ.ಪಾಟೀಲ ನಿಶ್ಯಬ್ದವಾಗಿದ್ದುಕೊಂಡು ಬೊಮ್ಮಾಯಿ ಸಂಪುಟದಲ್ಲಿ ಪ್ರಮುಖ ಖಾತೆಯೊಂದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಚಿವರ ‘ರಾಜಕೀಯ ಗುರು’ ಈ ಮೂಲಕ ತನ್ನ ಗೆಳೆಯನಿಗೆ ಅಚ್ಚರಿಯ ಉಡುಗೊರೆಯನ್ನೇ ನೀಡಿದ್ದಾರೆ!  

ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಇಂಧನ ಮತ್ತು ಲೋಕೋಪಯೋಗಿ ಇಲಾಖೆ ನೀಡುವಂತೆ ಸಿಎಂ ಎದುರು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ, ಈ ಬಾರಿ ಸಹ ಅವರಿಗೆ ಪ್ರವಾಸೋದ್ಯಮ ಖಾತೆ ಹಂಚಿಕೆಯಾಗಿದೆ. ‘ಕೇಳಿದ ಖಾತೆ ಸಿಗಲಿಲ್ಲ’ ಎಂಬ ಬೇಸರದಲ್ಲಿರುವ ಅವರು, ‘ಖಾತೆ ಬದಲಿಸದಿದ್ದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಸಕನಾಗಿಯೇ ಉಳಿಯುತ್ತೇನೆ’ ಎಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಚಿವ ಸಿ.ಸಿ.ಪಾಟೀಲ ಈ ಹಿಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ, ಗಣಿ ಮತ್ತು ಭೂ ವಿಜ್ಞಾನ ಖಾತೆ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಖಾತೆ, ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರಾಗಿ ತನ್ನದೇ ಛಾಫು ಮೂಡಿಸಿದ್ದಾರೆ. ಹೊಸದಾಗಿ ಸಿಕ್ಕಿರುವ ಖಾತೆಗೂ ಅವರು ನ್ಯಾಯ ಒದಗಿಸುತ್ತಾರೆ’ ಎಂದು ಗದಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಎರಡು ವರ್ಷಗಳಿಂದ ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಸಾಕಷ್ಟು ಹಾನಿ ಆಗಿದೆ. ಹಾಗಾಗಿ, ಅವರ ಮುಂದೆ ಸಾಕಷ್ಟು ಸವಾಲುಗಳಂತೂ ಇದ್ದೇ ಇವೆ. ಲೋಕೋಪಯೋಗಿ ಖಾತೆ ಸಚಿವರಾಗಿ ಸಿ.ಸಿ.ಪಾಟೀಲ ಗದಗ ಜಿಲ್ಲೆ ಅಭಿವೃದ್ಧಿಗೆ ಮಾತ್ರ ಸೀಮಿತರಾಗದೇ; ಇಡೀ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಾರೆ’ ಎಂಬ ಆಶಯವನ್ನೂ ಹೊರಹಾಕಿದ್ದಾರೆ.

*

ಎರಡು ವರ್ಷಗಳಿಂದ ಅತಿವೃಷ್ಟಿ ಕಾಡುತ್ತಿದೆ. ಹಾಗಾಗಿ, ಹೊಸ ಖಾತೆ ನಿರ್ವಹಣೆಯಲ್ಲಿ ಸವಾಲುಗಳು ಸಾಕಷ್ಟಿವೆ. ಸಚಿವ ಸಿ.ಸಿ.ಪಾಟೀಲರಿಗೆ ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಚಾಕಚಕ್ಯತೆ ಇದೆ.
-ಮೋಹನ ಮಾಳಶೆಟ್ಟಿ, ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.