ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಚೆಕ್‌ಪೋಸ್ಟ್‌ಗಳಲ್ಲಿ 108 ಸಿಸಿಟಿವಿ ಕ್ಯಾಮೆರಾ ಅಳವಡಿಕೆ

24 ಗಂಟೆಯೂ ಸಿಬ್ಬಂದಿ ನಿಗಾ
Last Updated 27 ಮಾರ್ಚ್ 2019, 11:04 IST
ಅಕ್ಷರ ಗಾತ್ರ

ಗದಗ: ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ಪಕ್ಷಗಳು ಖರ್ಚು ಮಾಡುವ ಹಣದ ಮೇಲೆ ನಿರಂತರ ನಿಗಾ ವಹಿಸಲು ಮತ್ತು ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಜಿಲ್ಲೆಯ ಆಯಕಟ್ಟಿನ 18 ಸ್ಥಳಗಳಲ್ಲಿ ಜಿಲ್ಲಾಡಳಿತವು ಚೆಕ್‌ಪೋಸ್ಟ್‌ ತೆರೆದಿದೆ. ಪೊಲೀಸ್‌ ಇಲಾಖೆಯು ಈ ಚೆಕ್‌ಪೋಸ್ಟ್‌ಗಳಲ್ಲಿ ಒಟ್ಟು 108 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಹಣ ಹರಿದಾಡಬಹುದಾದ ಸಾಧ್ಯತೆಗಳಿರುವ ಸೂಕ್ಷ್ಮ ವಿಧಾನಾಸಭಾ ಕ್ಷೇತ್ರಗಳ (ಇಎಸ್‌ಸಿ) ಪಟ್ಟಿಯಲ್ಲಿ ಗದಗ ಮತಕ್ಷೇತ್ರವೂ ಸೇರಿತ್ತು. ಹೀಗಾಗಿ ಈ ಕ್ಷೇತ್ರದಲ್ಲಿ ಹೆಚ್ಚಿನ ಭದ್ರತೆಗಳನ್ನು ಕೈಗೊಳ್ಳಲಾಗಿತ್ತು.

ಈ ಬಾರಿಯೂ ಹಾವೇರಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಜಿಲ್ಲೆಯ ಗದಗ, ಶಿರಹಟ್ಟಿ ಮತ್ತು ರೋಣ ಮತ್ತು ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಸೇರಿರುವ ನರಗುಂದ ವಿಧಾನಸಭಾ ಕ್ಷೇತ್ರಗಳಲ್ಲಿ ಪೊಲೀಸ್‌ ಇಲಾಖೆ ನಿರಂತರ ನಿಗಾ ವಹಿಸಿದೆ. ಈ ನಾಲ್ಕು ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 959ಮತಗಟ್ಟೆಗಳಿದ್ದು, ಇವುಗಳಲ್ಲಿ 188 ಮತಗಟ್ಟೆಗಳನ್ನು ಕ್ರಿಟಿಕಲ್‌ ಮತಗಟ್ಟೆಗಳೆಂದು ಗುರುತಿಸಲಾಗಿದೆ.

ಚೆಕ್‌ಪೋಸ್ಟ್‌ಗಳಲ್ಲಿ 3 ಪಾಳಿಗಳಲ್ಲಿ ದಿನದ 24 ಗಂಟೆಯೂ ಸಿಬ್ಬಂದಿ ನಿಗಾ ವಹಿಸುತ್ತಿದ್ದಾರೆ.ಗದಗ–ಬೆಟಗೇರಿ ನಗರ ವ್ಯಾಪ್ತಿಯಲ್ಲೇ ಒಟ್ಟು 46 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಗರದ ಹೊರವಲಯದ ಮುಂಡರಗಿ ರಸ್ತೆಯ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಬಳಿ, ಮುಳಗುಂದ ರಸ್ತೆ, ರೋಣದ ರಸ್ತೆ, ದುಂದೂರ ಕ್ರಾಸ್ ಸೇರಿ ಜಿಲ್ಲೆಯಲ್ಲಿ ಹಲವೆಡೆ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಪೊಲೀಸ್‌ ಸಿಬ್ಬಂದಿ ಜತೆಗೆ ಹೆಚ್ಚುವರಿಯಾಗಿ ಗೃಹರಕ್ಷಕ ದಳ, ಅರಣ್ಯ ಇಲಾಖೆ ಸಿಬ್ಬಂದಿ, ವಿಚಕ್ಷಣಾ ದಳದ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ಲ ವಾಹನಗಳನ್ನೂ ತಡೆದು ಸಮಗ್ರ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

ಈಗಾಗಲೇ ಪೊಲೀಸ್‌ ಇಲಾಖೆಯು ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ತೊಂದರೆ ಎದುರಾಗಬಹುದಾದ ಸ್ಥಳ, ವ್ಯಕ್ತಿ ಮತ್ತು ಗುಂಪನ್ನು ಗುರುತಿಸಿದ್ದು, ಕಾನೂನು ಕ್ರಮಗಳನ್ನು ಕೈಗೊಂಡಿದೆ. ಮತದಾನಕ್ಕೆ ತೊಂದರೆ ಉಂಟು ಮಾಡಬಹುದಾದ 1,200 ಮಂದಿಯನ್ನು ಗುರುತಿಸಿ,ಅವರ ವಿರುದ್ಧ ಕ್ರಮ ಕೈಗೊಂಡಿದೆ.ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಮಾ.21ರವರೆಗೆ ಜಿಲ್ಲೆಯಲ್ಲಿ ₹1.44 ಕೋಟಿ ಮೌಲ್ಯದ 32,274 ಲೀಟರ್‌ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಚೆಕ್‌ಪೋಸ್ಟ್‌ನಲ್ಲಿಸಿಸಿಟಿವಿಕ್ಯಾಮೆರಾದೃಶ್ಯಗಳನ್ನು ಪರಿಶೀಲಿಸುತ್ತಿರುವ ಸಿಬ್ಬಂದಿ​
ಚೆಕ್‌ಪೋಸ್ಟ್‌ನಲ್ಲಿಸಿಸಿಟಿವಿಕ್ಯಾಮೆರಾದೃಶ್ಯಗಳನ್ನು ಪರಿಶೀಲಿಸುತ್ತಿರುವ ಸಿಬ್ಬಂದಿ​

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT