ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ತಂಡದಿಂದ ಹಾನಿ ಪರಿಶೀಲನೆ

ಜಿಲ್ಲೆಯ ವಿವಿಧೆಡೆಗೆ ಭೇಟಿ;ಅಧ್ಯಯನ ತಂಡಕ್ಕೆ ಮಾಹಿತಿ ಒದಗಿಸಿದ ಜಿಲ್ಲಾಡಳಿತ
Last Updated 9 ಸೆಪ್ಟೆಂಬರ್ 2022, 4:17 IST
ಅಕ್ಷರ ಗಾತ್ರ

ಗದಗ: ಅತಿವೃಷ್ಟಿಯಿಂದಾದ ಹಾನಿ ಅಧ್ಯಯನಕ್ಕೆ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಗುರುವಾರ ಜಿಲ್ಲೆಯ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಕೇಂದ್ರ ಜಲಶಕ್ತಿ ಸಚಿವಾಲಯದ ಅಶೋಕ್‌ ಕುಮಾರ್‌, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯದ ಅಧೀಕ್ಷಕ ಎಂಜಿನಿಯರ್‌ ವಿ.ವಿ.ಶಾಸ್ತ್ರಿ ಹಾನಿ ಪ್ರದೇಶಗಳ ವೀಕ್ಷಣೆ ನಡೆಸಿದರು. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ. ಜಿ.ಎಸ್.ಶ್ರೀನಿವಾಸ ರೆಡ್ಡಿ ಕೂಡ ಇದ್ದರು.

ಅಧ್ಯಯನ ತಂಡವು ಗದಗ ತಾಲ್ಲೂಕಿನ ಹೊಂಬಳದ ಹೊರವಲಯದಲ್ಲಿನ ಅಣ್ಣಪ್ಪ ಕಬ್ಬಿಣದ ಅವರ ಸೂರ್ಯಕಾಂತಿ, ಮೆಕ್ಕೆಜೋಳ ಹಾಗೂ ಶೇಂಗಾ ಕೃಷಿ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿತು.

ಬಳಿಕ, ಅತಿಯಾದ ಮಳೆಯಿಂದಾಗಿ ಹಾನಿಗೊಳಗಾದ ಹೊಂಬಳ ಹಿರೇಹಂದಿಗೋಳ ಸಂಪರ್ಕ ರಸ್ತೆ ಹಾಗೂ ಬೆಳೆ ಹಾನಿ ವೀಕ್ಷಿಸಿದರು. ಗದಗ ನಗರದ ಬಸವೇಶ್ವರ ವೃತ್ತದಲ್ಲಿ ಅಂಗಡಿ, ಮನೆಗಳಿಗೆ ಮಳೆ ನೀರು ನುಗ್ಗಿ ಆದ ಅನಾಹುತ ವೀಕ್ಷಿಸಿದರು. ಕಳಸಾಪುರ, ನಾಗಾವಿ, ಮಾಗಡಿ ಹಾಗೂ ಶೆಟ್ಟಿಕೇರಿಯಲ್ಲಿ ಮಳೆಯಿಂದಾಗಿ ಹಾನಿಗೀಡಾದ ರಸ್ತೆ, ನಾಗಾವಿಯಲ್ಲಿ ಕೃಷಿ, ತೋಟಗಾರಿಕೆ ಬೆಳೆ, ರಸ್ತೆ, ಶಾಲೆ, ಅಂಗನವಾಡಿ ಕಟ್ಟಡ ಮತ್ತು ಮನೆ ಹಾನಿ ಪರಿಶೀಲಿಸಿದರು.

ಗೊಜನೂರ ಯತ್ನಳ್ಳಿ ಮಾರ್ಗ ಮಧ್ಯೆ ಬೆಳೆ ಹಾಗೂ ಸೇತುವೆ ಹಾನಿಗೊಳಗಾದ ಬಗ್ಗೆ ವೀಕ್ಷಿಸಿದರು. ನಂತರ ಲಕ್ಷ್ಮೇಶ್ವರದಲ್ಲಿ ರಸ್ತೆ, ಶಾಲಾ ಕಟ್ಟಡ ಹಾನಿ ಕುರಿತು ಪರೀಶಿಲನೆ ಕೈಗೊಂಡರು. ಈ ವೇಳೆ ಸ್ಥಳೀಯ ಅಧಿಕಾರಿಗಳು ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುಶೀಲಾ ಬಿ. ಅವರು ಜಿಲ್ಲೆಯಲ್ಲಾದ ಅತಿವೃಷ್ಟಿ ಹಾನಿ ಕುರಿತು ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ಒದಗಿಸಿದರು. ಪ್ರಭಾರ ಎಡಿಸಿ ಅನ್ನಪೂರ್ಣ, ತಹಶೀಲ್ದಾರ್‌ ಕಿಶನ್ ಕಲಾಲ್‌, ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ., ತೋಟಗಾರಿಕೆ ಉಪ ನಿರ್ದೇಶಕ ಶಶಿಕಾಂತ ಕೋಟಿಮನಿ, ಕೃಷಿ ಇಲಾಖೆ ಉಪ ನಿರ್ದೇಶಕ ಕರಿಯಲ್ಲಪ್ಪ ಕೊರಚರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಹತ್ತು ದಿನದ ಒಳಗೆ ಕೇಂದ್ರಕ್ಕೆ ವರದಿ ಸಲ್ಲಿಕೆ

‘ಮಳೆಯಿಂದ ಹಾನಿಯಾದ ಮನೆ, ಬೆಳೆ, ರಸ್ತೆ ಹಾನಿ ಕುರಿತು ಈಗಾಗಲೇ ಜಿಲ್ಲಾಡಳಿತ ವರದಿ ಸಲ್ಲಿಸಿದೆ. ಎರಡು-ಮೂರು ದಿನಗಳಲ್ಲಿ ಆದ ಅತಿಯಾದ ಮಳೆಯಿಂದ ಮತ್ತಷ್ಟು ಹಾನಿ ಸಂಭವಿಸಿದ್ದು, ಹಾನಿಯ ಸಮೀಕ್ಷೆ ನಡೆಸಿ ಜಿಲ್ಲಾಡಳಿತ ಮತ್ತೇ ವರದಿ ಸಲ್ಲಿಸಲಿದೆ. ಹಾನಿ ಅಧ್ಯಯನದ ವರದಿಯನ್ನು ಮುಂದಿನ ಹತ್ತು ದಿನಗಳ ಒಳಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ತಂಡದ ಸದಸ್ಯರು ತಿಳಿಸಿದರು.

ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಎಕರೆಗೆ ₹50 ಸಾವಿರದಷ್ಟು ಖರ್ಚಾಗಿತ್ತು, ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕು

ರೈತ, ಹೊಂಬಳ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT