ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಂದಿನಂತೆ ಅವಕಾಶ ಕೈ ಚೆಲ್ಲದಿರಿ’

ಉದ್ಯಮಿಗಳ ಸಮಸ್ಯೆ ಬಗೆಹರಿಸಲು ಕೈಗಾರಿಕಾ ಅದಾಲತ್‌
Last Updated 26 ಸೆಪ್ಟೆಂಬರ್ 2021, 3:57 IST
ಅಕ್ಷರ ಗಾತ್ರ

ಗದಗ: ‘ಉದ್ದಿಮೆದಾರರ ಸಮಸ್ಯೆಗಳನ್ನು ಬಗೆಹರಿಸಲು ಕೈಗಾರಿಕಾ ಅದಾಲತ್‌ ನಡೆಸುವ ಚಿಂತನೆ ಇದ್ದು, ಹಿರಿಯ ಅಧಿಕಾರಿಗಳು ಉದ್ದಿಮೆದಾರರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಿಕೊಡಲಿದ್ದಾರೆ’ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನದಲ್ಲಿ ಅವರು ಮಾತನಾಡಿ, ‘ಈ ಸಂಬಂಧ ಈಗಾಗಲೇ ದಿನಾಂಕ ಘೋಷಣೆ ಮಾಡಿದ್ದು ಅ. 11ರಂದು ಬೆಂಗಳೂರು, ಅ.25ರಂದು ಕಲುಬುರ್ಗಿ, ನ.11ರಂದು ಮೈಸೂರು, ನ.25 ಬೆಳಗಾವಿ, ಡಿ.3ರಂದು ಮಂಗಳೂರು ಡಿ.28ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕಾ ಅದಾಲತ್‌ ನಡೆಯಲಿವೆ’ ಎಂದು ಹೇಳಿದರು.

‘2022ರ ನವೆಂಬರ್‌ನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು. ಈ ಸಂದರ್ಭದಲ್ಲಿ ಗದಗ ಜಿಲ್ಲೆಗೆ ದೊಡ್ಡ ಕೈಗಾರಿಕೆಯನ್ನು ಕೊಟ್ಟೇ ಕೊಡುತ್ತೇವೆ. ಆದರೆ, ಹಿಂದಿನಂತೆ ಮುಂದಿನ ಬಾರಿಯೂ ಅವಕಾಶ ಕಳೆದುಕೊಳ್ಳಬೇಡಿ. ಜಿಲ್ಲೆಗೆ ಕೈಗಾರಿಕೆಗಳು ಬೇಕು ಎಂಬ ಧ್ವನಿ ನಿಮ್ಮಿಂದ ಬರಬೇಕು. ಕೈಗಾರಿಕೆಗಳ ಬೆಳವಣಿಗೆಗೆ ಅಗತ್ಯವಿರುವ ಭೂಮಿ ಬೆಲೆ ಶೇ 20ಕ್ಕಿಂತ ಹೆಚ್ಚಿಗೆ ಆಗದಂತೆ ಕ್ರಮವಹಿಸಲಾಗುವುದು. ಜತೆಗೆ ನಿಯಮಗಳನ್ನು ಸರಳೀಕರಣ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕ ಜಗದೀಶ್‌ ಶೆಟ್ಟರ್‌ ಮಾತನಾಡಿ, ‘ವಾಣಿಜ್ಯೋದ್ಯಮಿಗಳ ಸಮ್ಮೇಳನ ಆಯೋಜನೆಯಿಂದ ಉದ್ದಿಮೆದಾರರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಅವುಗಳನ್ನು ಈಡೇರಿಸಿಕೊಳ್ಳಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಹೊಸ ಕೈಗಾರಿಕಾ ನೀತಿಯಿಂದ ಬೆಂಗಳೂರು ಹೊರತು ಪಡಿಸಿ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ಲಭ್ಯವಾಗಿದೆ. ಇನ್ವೆಸ್ಟ್‌ ಹುಬ್ಬಳ್ಳಿ ಸಮಾವೇಶ ಹಾಗೂ ಹೈದರಾಬಾದ್‌ ಮತ್ತು ಮುಂಬೈನಲ್ಲಿ ನಡೆಸಿದ ರೋಡ್‌ ಶೋಗಳಿಂದ ಸಾಕಷ್ಟು ಉದ್ದಿಮೆದಾರರು ಕರ್ನಾಟಕದಲ್ಲಿ ಹೂಡಿಕೆ ಮಾಡಿದ್ದಾರೆ. ಮೂಲಸೌಕರ್ಯಗಳ ಅಭಿವೃದ್ಧಿಯಿಂದಷ್ಟೇ ಕೈಗಾರಿಕಾಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ’ ಎಂದು ಹೇಳಿದರು.

ಗದಗ ಶಾಸಕ ಎಚ್‌.ಕೆ.ಪಾಟೀಲ ಮಾತನಾಡಿ, ‘ಗದಗ ಜಿಲ್ಲೆಯಲ್ಲಿ ವಿಂಡ್‌ ಎನರ್ಜಿ ಮತ್ತು ಸೌರಶಕ್ತಿ ಉದ್ದಿಮೆಗಳ ಬೆಳವಣಿಗೆಗೆ ಜತೆಗೆ ಜವಳಿ, ಪ್ರಿಂಟಿಂಗ್‌, ಆಹಾರ ಸಂಸ್ಕರಣೆ, ಕಲ್ಲು ಗಣಿಗಾರಿಕೆಯಲ್ಲೂ ಹೆಚ್ಚಿನ ಅವಕಾಶಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೊಡ್ಡ ದೊಡ್ಡ ಉದ್ದಿಮೆಯವರಿಗೆ ನೀಡುವಷ್ಟೇ ರಿಯಾಯಿತಿಯನ್ನು ಸಣ್ಣ ಕೈಗಾರಿಕೆಗಳಿಗೂ ನೀಡಬೇಕು’ ಎಂದು ಆಗ್ರಹಿಸಿದರು.

ಉತ್ತಮ ಕರ್ನಾಟಕ ಜಿಲ್ಲೆಗಳ ಶ್ರೇಷ್ಠ ವರ್ತಕ ಹಾಗೂ ಶ್ರೇಷ್ಠ ಉದ್ಯಮಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

‘ಪರಿಸರ ಸ್ನೇಹಿ ಕೈಗಾರಿಕೆಗಳು ನಮ್ಮ ಆದ್ಯತೆ’

‘ಉದ್ಯಮಗಳು ಬರುವುದರಿಂದ ನಮ್ಮ ಬದುಕಿಗೆ ಒಳ್ಳೆಯದಾಗಬೇಕು. ಯಾರೋ ಒಬ್ಬ ಉದ್ಯಮಿ ಶ್ರೀಮಂತ ಆಗುವುದಕ್ಕೆ ನಮಗೆ ಕೈಗಾರಿಕೆಗಳು ಬೇಡ. ಕೈಗಾರಿಕೆಗಳ ಆರಂಭದಿಂದ ನಮ್ಮವರಿಗೆ ಉದ್ಯೋಗ ಸಿಗಬೇಕು. ನಮ್ಮ ನೆಲ, ಜಲ, ಕಪ್ಪತಗುಡ್ಡ ಉಳಿಯಬೇಕು. ಇದು ನಮ್ಮ ಅಭಿವೃದ್ಧಿಯ ಕಲ್ಪನೆ ಆಗಿರಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

‘ದೊಡ್ಡ ಸ್ಟೀಲ್‌ ಕಂಪನಿ ಹೋದರೇನಂತೆ? ಗದಗ ಅಥವಾ ಉತ್ತರ ಕರ್ನಾಟಕ ಭಾಗಕ್ಕೆ ಐಟಿ ಕಂಪನಿಗಳನ್ನು ತರಲು ಯಾಕೆ ಸಾಧ್ಯವಾಗಲಿಲ್ಲ? ಗದಗ ಜಿಲ್ಲೆಗೆ ಯಾವ ಉದ್ಯಮಗಳು ಸೂಕ್ತ ಎಂಬುದನ್ನು ಯೋಚಿಸಬೇಕು. ಸೋಲಾರ್‌ ಮತ್ತು ವಿಂಡ್‌ ಎನರ್ಜಿಗೆ ಸಂಬಂಧಿಸಿದ ಕೈಗಾರಿಕೆಗಳ ಅಭಿವೃದ್ಧಿಗೆ ಇಲ್ಲಿ ವಿಪುಲ ಅವಕಾಶಗಳಿವೆ. ಈ ಕ್ಷೇತ್ರಗಳಲ್ಲಿ ರೈತನನ್ನೂ ಪಾಲುದಾರರನ್ನಾಗಿ ಮಾಡಿಕೊಂಡರೆ ಮಾತ್ರ ಅಲ್ಲಿಂದ ಪರಿವರ್ತನೆ ಸಾಧ್ಯ. ರೈತರಿಗೆ ಅಂತಹ ಸಾಮರ್ಥ್ಯವನ್ನು ಬೆಳೆಸಲು ಸರ್ಕಾರ ಶ್ರಮಿಸಬೇಕು’ ಎಂದು ಹೇಳಿದರು.

ಕೈಗಾರಿಕೆಗಳ ಅಭಿವೃದ್ಧಿಯಿಂದಲೇ ರಾಜ್ಯ, ದೇಶದ ಬೆಳವಣಿಗೆ ಸಾಧ್ಯ. ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಸರ್ಕಾರ ಮತ್ತು ವಾಣಿಜ್ಯೋದ್ಯಮಿಗಳ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುವೆ

ಸಿ.ಸಿ.ಪಾಟೀಲ, ಲೋಕೋಪಯೋಗಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT