ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮ ಜಯಂತಿ ವಿಳಂಬ: ಪ್ರತಿಭಟನೆ

ಕಣ್ಣೀರು ಸುರಿಸಿದ ಮುಂಡರಗಿ ತಹಶೀಲ್ದಾರ್ ಭ್ರಮರಾಂಬಾ ಗುಬ್ಬಿಶೆಟ್ಟಿ
Last Updated 23 ಅಕ್ಟೋಬರ್ 2018, 11:13 IST
ಅಕ್ಷರ ಗಾತ್ರ

ಮುಂಡರಗಿ: ತಾಲ್ಲೂಕು ಆಡಳಿತದಿಂದ ನಡೆಯಬೇಕಿದ್ದ ಕಿತ್ತೂರು ಚನ್ನಮ್ಮ ಜಯಂತಿಯು, ನಿಗದಿಪಡಿಸಿದ್ದ ಸಮಯಕ್ಕೆ ಉದ್ಘಾಟನೆಗೊಳ್ಳದ ಕಾರಣ, ಆಕ್ರೋಶಗೊಂಡ ಪಂಚಮಸಾಲಿ ಸಮಾಜದ ಸದಸ್ಯರು ಮಂಗಳವಾರ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

ಅ.23ರಂದು ಬೆಳಿಗ್ಗೆ 10ಗಂಟೆಗೆ ಚನ್ನಮ್ಮ ಜಯಂತಿ ನಿಗದಿಯಾಗಿತ್ತು. 9ಗಂಟೆಗೆ ಪಂಚಮಸಾಲಿ ಸಮಾಜದ ನೂರಾರು ಜನರು ತಹಶೀಲ್ದಾರ್ ಕಾರ್ಯಾಲಯದ ಮುಂದೆ ಜಮಾಯಿಸಿದ್ದರು. ಆದರೆ, 11ಗಂಟೆಯಾದರೂ ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಯಾವ ತಯಾರಿಯನ್ನೂ ಮಾಡಿಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ತಹಶೀಲ್ದಾರ್ ಭ್ರಮರಾಂಬಾ ಗುಬ್ಬಿಶೆಟ್ಟಿ ಅವರು ಕಚೇರಿ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದರು. ಮಂಗಳವಾರ ಬೆಳಿಗ್ಗೆ ಪಟ್ಟಣಕ್ಕೆ ಬಂದ ಅವರು, 11.15ಕ್ಕೆ ಕಚೇರಿಗೆ ಬಂದಿದ್ದಾರೆ. ತಕ್ಷಣ ಅವರು ಚನ್ನಮ್ಮ ಜಯಂತಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.ಆದರೆ, ಕಚೇರಿಯ ಉಳಿದ ಸಿಬ್ಬಂದಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರಿಂದ ಯಾರೂ ಇತ್ತ ಗಮನ ಹರಿಸಿರಲಿಲ್ಲ. ಕಾನ್ಫರೆನ್ಸ್‌ ಮುಗಿದ ನಂತರ ಚನ್ನಮ್ಮಳ ಜಯಂತಿ ಆಚರಿಸಿದರಾಯಿತು ಎಂದು ಸುಮ್ಮನಿದ್ದಾರೆ.ಇದು ಜನರ ಅಸಮಾಧಾನಕ್ಕೆ ಕಾರಣವಾಯಿತು.ತಹಶೀಲ್ದಾರ್‌ ಮನವೊಲಿಕೆಗೆ ಮಣಿಯದೆ ಪ್ರತಿಭಟನೆ ಪ್ರಾರಂಭಿಸಿದರು.

‘ಎಲ್ಲ ಜಯಂತಿಗಳನ್ನು ಅದ್ಧೂರಿಯಿಂದ ಹಾಗೂ ಅಚ್ಚುಕಟ್ಟಾಗಿ ಆಚರಿಸುವ ತಾಲ್ಲೂಕು ಆಡಳಿತವು ಚನ್ನಮ್ಮ ಜಯಂತಿಯನ್ನು ಮಾತ್ರ ನಿರ್ಲಕ್ಷ್ಯಿಸುತ್ತಿದೆ. ತಾಲ್ಲೂಕು ಆಡಳಿತವು ಪಂಚಮಸಾಲಿ ಸಮಾಜವನ್ನು ಅವಮಾನಿಸಿದ್ದು, ತಕ್ಷಣ ತಹಶೀಲ್ದಾರ್ ಅವರನ್ನು ಬೇರೆಡೆಗೆ ವರ್ಗಾಯಿಸಬೇಕು‌’ಎಂದು ಸಮಾಜದ ಅಧ್ಯಕ್ಷ ಎಸ್.ವಿ.ಪಾಟೀಲ ಹಾಗೂ ಮುಖಂಡರು ಒತ್ತಾಯಿಸಿದರು.

ನಂತರ ಪಂಚಮಸಾಲಿ ಸಮಾಜದ ಮುಖಂಡರೊಂದಿಗೆ ತಹಶೀಲ್ದಾರ್ ಹಾಗೂ ಸಿಪಿಐ ಶ್ರೀನಿವಾಸ ಮೇಟಿ ಅವರು ಪ್ರತ್ಯೇಕ ಸಭೆ ನಡೆಸಿದರು. ಬೆಂಗಳೂರಿಗೆ ತೆರಳಿದ್ದರಿಂದ ಕಚೇರಿಗೆ ಬರಲು ತಡವಾಯಿತು, ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ’ ಎಂದು ತಹಶೀಲ್ದಾರ್‌ ಭ್ರಮರಾಂಬಾ ಗುಬ್ಬಿಶೆಟ್ಟಿ ಕಣ್ಣಿರು ಹಾಕುತ್ತಾ ಮುಖಂಡರಲ್ಲಿ ಮನವಿ ಮಾಡಿಕೊಂಡರು.

ಅವರ ಮನವಿಯನ್ನು ಕಿವಿಗೆ ಹಾಕಿಕೊಳ್ಳದ ಪ್ರತಿಭಟನಾಕಾರರು, ನಾವು ಪ್ರತ್ಯೇಕವಾಗಿ ಚನ್ನಮ್ಮಳ ಜಯಂತಿಯನ್ನು ಆಚರಿಸುತ್ತೇವೆ ಎಂದು ತಹಶೀಲ್ದಾರ ವಿರುದ್ಧ ಘೋಷಣೆ ಕೂಗುತ್ತಾ ಹೊರ ನಡೆದರು. ನಂತರ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಚನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಸ್ತೆಯಲ್ಲಿ ಚನ್ನಮ್ಮಳ ಜಯಂತಿಯನ್ನು ಆಚರಿಸಿದರು.

ಮುಖಂಡರಾದ ಮುದ್ಲಿಂಗಪ್ಪ ಕೊರ್ಲಹಳ್ಳಿ, ದೇವಪ್ಪ ಇಟಗಿ, ನಾಗರಾಜ ಮುರುಡಿ, ಮಂಜುನಾಥ ಮುಧೋಳ, ಬಸವರಾಜ ದೇಸಾಯಿ, ಬಸವರಾಜ ನವಲಗುಂದ, ಶಿವಾನಂದ ನವಲಗುಂದ, ಅಶೋಕ ಹಂದ್ರಾಳ, ಸಿದ್ದು ದೇಸಾಯಿ, ಸುರೇಶ ಮಾಳೊಕೊಪ್ಪ, ಮಂಜುಳಾ ಇಟಗಿ, ಶೋಭಾ ಪಾಟೀಲ, ನೇತ್ರಾ ಬಾವಿಹಳ್ಳಿ, ರೇಣುಕಾ ಮುದ್ದಿ, ಶಾರದಾ ಲಿಂಗಶೆಟ್ಟರ, ವಿಜಯಲಕ್ಷ್ಮಿ ಪೊಲೀಸಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT