ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ | ಶಾಲೆ ತಲುಪಲು 6 ಕಿ.ಮೀ ಕಾಲ್ನಡಿಗೆ..!

ಲಕ್ಷ್ಮೇಶ್ವರ ತಾಲ್ಲೂಕಿನ ಗೊಜನೂರಿನ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು
Last Updated 1 ಡಿಸೆಂಬರ್ 2019, 20:01 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ (ಗದಗ ಜಿಲ್ಲೆ): ಸಮೀಪದ ಚೆನ್ನಪಟ್ಟಣ ಗ್ರಾಮದಿಂದ ಪ್ರತಿನಿತ್ಯ 6 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿ ಗೊಜನೂರಿನ ಸರ್ಕಾರಿ ಪ್ರೌಢ ಶಾಲೆಗೆ ವಿದ್ಯಾರ್ಥಿಗಳು ಬರುತ್ತಾರೆ. ಶಿಕ್ಷಣ ಪಡೆಯಬೇಕು ಎಂಬ ಅದಮ್ಯ ಬಯಕೆ ಇರುವುದರಿಂದ ಈ ಮಕ್ಕಳಿಗೆ ಶಾಲೆಯ ಹಾದಿ ದೂರ ಎನಿಸಿಲ್ಲ.

ಚೆನ್ನಪಟ್ಟಣ ಮಾತ್ರವಲ್ಲ, ಅಕ್ಕಿಗುಂದ ಮತ್ತು ಅಕ್ಕಿಗುಂದ ತಾಂಡಾದಿಂದ ಈ ಶಾಲೆಗೆ ಬರುವ ಮಕ್ಕಳ ಸ್ಥಿತಿಯೂ ಇದೆ ಆಗಿದೆ. ಇವರು ಪ್ರತಿನಿತ್ಯ 4 ಕಿ.ಮೀ ನಡೆದುಕೊಂಡು ಶಾಲೆಗೆ ಬರುತ್ತಾರೆ. ಈ ಮೂರು ಗ್ರಾಮಗಳಿಂದ 40ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಬರುತ್ತಾರೆ.

ಚೆನ್ನಪಟ್ಟಣ, ಅಕ್ಕಿಗುಂದ ಮತ್ತು ಅಕ್ಕಿಗುಂದ ತಾಂಡಾದಿಂದ ಗೊಜನೂರುವರೆಗೆ ಬಸ್‌ ಸೌಲಭ್ಯ ಇದೆ. ಆದರೆ, ಶನಿವಾರ ಮಕ್ಕಳ ಶಾಲಾ ಸಮಯಕ್ಕೆ ಬಸ್‌ ಇಲ್ಲ. ಹೀಗಾಗಿ ನಡಿಗೆ ಅನಿವಾರ್ಯ. ಕೆಲವರು ಸೈಕಲ್ ಹಾಗೂ ಪಾಲಕರ ಬೈಕ್‌ಗಳಲ್ಲಿ ಶಾಲೆ ತಲುಪಿದರೆ, ಇನ್ನುಳಿದವರಿಗೆ ಕಾಲ್ನಡಿಗೆ ಅನಿವಾರ್ಯ. ಮಧ್ಯಾಹ್ನ ಶಾಲೆ ಬಿಟ್ಟ ನಂತರವೂ ಬಸ್‌ ಇಲ್ಲ. ಬಿಸಿಲಿನಲ್ಲಿ 3 ಗಂಟೆಯವರೆಗೆ ಕಾಯಬೇಕು. ಇಲ್ಲದಿದ್ದರೆ ಮತ್ತೆ ಮನೆಯತ್ತ ಹೆಜ್ಜೆ ಹಾಕಬೇಕು.

ಗೊಜನೂರಿನಿಂದ ಚೆನ್ನಪಟ್ಟಣದವರೆಗಿನ ರಸ್ತೆ ವರ್ಷಗಳ ಹಿಂದೆಯೇ ಹಾಳಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇದರ ದುರಸ್ತಿಯತ್ತ ಗಮನ ಹರಿಸಿಲ್ಲ. ಹೀಗಾಗಿ ಇಲ್ಲಿ ಬಸ್ ಸಂಚಾರವೂ ಅಷ್ಟಕಷ್ಟೆ. ಈ ಮಾರ್ಗ ಮಧ್ಯದಲ್ಲಿ ಬರುವ ಎರಡು–ಮೂರು ಹಳ್ಳಗಳು ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ಆಗ ಹಳ್ಳ ದಾಟುವುದು ದುಸ್ತರ.

‘ಸರ್ಕಾರ ಸೈಕಲ್ ನೀಡಿದೆ. ಆದರೆ, ನಮ್ಮೂರ ರಸ್ತೆಯೇ ಸರಿಯಿಲ್ಲದ ಕಾರಣ, ರಸ್ತೆಯಲ್ಲಿ ಸೈಕಲ್‌ ತುಳಿದುಕೊಂಡು ಹೋಗುವುದು ಕಷ್ಟ. ಹೀಗಾಗಿ ನಡೆದುಕೊಂಡೇ ಹೋಗುತ್ತೇವೆ’ ಎನ್ನುತ್ತಾರೆ ಚೆನ್ನಪಟ್ಟಣದ ವಿದ್ಯಾರ್ಥಿನಿಯರು.

‘ಗೊಜನೂರಿನಿಂದ ಚೆನ್ನಪಟ್ಟಣದವರೆಗಿನ ರಸ್ತೆಯನ್ನು ದುರಸ್ತಿ ಮಾಡಿಸಿದರೆ ಬಸ್ ಓಡಾಟಕ್ಕೆ ಅನುಕೂಲ ಆಗುತ್ತದೆ. ಆಗ ನಮ್ಮೂರಿನ ಮಕ್ಕಳು ಸುಲಭವಾಗಿ ಶಾಲೆಗೆ ಹೋಗಿ ಬರಬಹುದು. ಅಧಿಕಾರಿಗಳು ಆದಷ್ಟು ಬೇಗನೇ ರಸ್ತೆ ನಿರ್ಮಿಸಬೇಕು’ ಎಂದು ಅಕ್ಕಿಗುಂದ ತಾಂಡಾದ ನಿವಾಸಿ ಪರಮೇಶ ಲಮಾಣಿ ಆಗ್ರಹಿಸಿದರು.

‘ಶನಿವಾರ ಬಸ್ ಇದ್ದರೆ ಅನುಕೂಲ ಆಗುತ್ತದೆ. ಆವತ್ತೊಂದು ದಿನ ಸಾರಿಗೆ ಇಲಾಖೆ ನಮಗೆ ಅನುಕೂಲ ಮಾಡಿಕೊಡಬೇಕು’ ಎಂದು ವಿದ್ಯಾರ್ಥಿನಿ ಲಕ್ಷ್ಮವ್ವ ಬೇಡಿಕೆ ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT