ರಾಜಿ ಇಲ್ಲದ ಬದ್ಧತೆಯ ಗುರುಮಹಾಂತರು

7
ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ ಪೀಠಾಧಿಪತಿಯಾಗಿ ಇಂದಿಗೆ 14 ವರ್ಷ

ರಾಜಿ ಇಲ್ಲದ ಬದ್ಧತೆಯ ಗುರುಮಹಾಂತರು

Published:
Updated:
Deccan Herald

ಇಳಕಲ್‌ : ಇಲ್ಲಿನ ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನಮಠದ 20 ನೇ ಪೀಠಾಧಿಪತಿಯಾಗಿ ಗುರು ಮಹಾಂತ ಸ್ವಾಮೀಜಿ ದೀಕ್ಷೆ ಪಡೆದು ಇಂದಿಗೆ 14 ವರ್ಷಗಳಾದವು. 

‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎನ್ನುವ ನುಡಿಯನ್ನು ನಡೆಯಲ್ಲಿ ತೋರಿದ ಗುರು ಮಹಾಂತರು, ಸೇವೆ, ಸಹನೆ ಹಾಗೂ ವಿನಯಕ್ಕೆ ಮತ್ತೊಂದು ಹೆಸರು. 

ಚಿತ್ತರಗಿ ಪೀಠದ ಪೀಠಾಧಿಪತಿಯಾಗುವ ಮುಂಚೆ ಧಾರವಾಡದ ಮುರುಘಾಮಠ, ಮೈಸೂರಿನ ಮಹಾಲಿಂಗೇಶ್ವರ ಮಠ, ಚಿತ್ರದುರ್ಗದ ಮುರುಘಾರಾಜೇಂದ್ರ ಮಠದಲ್ಲಿದ್ದರು. ತಮ್ಮ ಉತ್ತರಾಧಿಕಾರಿಯ ಹುಡುಕಾಟದಲ್ಲಿ ಇದ್ದ ಮಹಾಂತ ಸ್ವಾಮೀಜಿ ಅರ್ಹ ಹಾಗೂ ಯೋಗ್ಯ ಎನಿಸಿದ ಸಿದ್ಧರಾಮ ದೇವರನ್ನು (ಪೂರ್ವದ ಹೆಸರು) ಮಠಕ್ಕೆ ಕರೆ ತಂದರು. 

2004 ಸೆ.12 ರಂದು ನಡೆದ ಸಮಾಜ ಸೇವಾ ದೀಕ್ಷಾ ಸಮಾರಂಭಕ್ಕೂ ಮುಂಚೆ ಈ ಪೀಠ ಅಲಂಕರಿಸಲಿರುವ ಸಿದ್ಧರಾಮ ದೇವರು ಜಂಗಮರಲ್ಲ ಎನ್ನುವ ಕಾರಣಕ್ಕೆ ಹಲವರು ವಿರೋಧಿಸಿದ್ದರು. ಆದರೆ ಗುರು ಮಹಾಂತರು ತಮ್ಮ ನಡೆ–ನುಡಿಯ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ಅಂದು ಹಲ್ಲೆ, ನಿಂದೆ ಮಾಡಿದವರೂ ಸಹ ಗುರುಮಹಾಂತರ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದಾರೆ.  

ಡಾ.ಮಹಾಂತ ಶ್ರೀಗಳನ್ನು ಮಗುವಿನಂತೆ ಆರೈಕೆ ಮಾಡಿ, ಅವರ ವೃದ್ಯಾಪ್ಯ ಸಹನೀಯಗೊಳ್ಳಲು ಗುರುಮಹಾಂತರ ಸೇವೆಯೇ ಕಾರಣ. ಡಾ.ಮಹಾಂತಪ್ಪಗಳಂತೆ ಇವರೂ ಸಹ ಬಸವತತ್ವದಲ್ಲಿ ರಾಜಿ ಇಲ್ಲದ ಬದ್ಧತೆ ಹೊಂದಿದ್ದಾರೆ.

ಶ್ರೀಮಠದ ಮಾಸಿಕ ಶಿವಾನುಭವ ಕಾರ್ಯಕ್ರಮಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಹೆಚ್ಚಿಸಿದರು. ಶ್ರಾವಣ ಮಾಸದ ಶರಣ ಸಂಸ್ಕೃತಿ ಮಹೋತ್ಸವವು ಬಸವ ದರ್ಶನದ ಮಹೋತ್ಸವವಾಯಿತು. ‘ಮಹಾಂತ ಜೋಳಿಗೆ’ಯನ್ನು ಮನೆ–ಮನೆಗೆ ಒಯ್ದುರು. ಸ್ವಚ್ಛತೆ ಹಾಗೂ ನೈರ್ಮಲ್ಯದ ಪ್ರಜ್ಞೆ ಬೆಳೆಸಲು ‘ನಗರ ನಿರ್ಮಲ ವೇದಿಕೆ’ ಕಟ್ಟಿದರು.

‘ಮಹಾಂತ ಕಲಾಲೋಕ’ ಸಾಂಸ್ಕೃತಿಕ ತಂಡ ಕಟ್ಟಿ ರೂಪಕಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಇಷ್ಟಲಿಂಗ ದೀಕ್ಷೆ, ಶರಣ ತತ್ವದ ವಿವಾಹ ಮಹೋತ್ಸವ, ಶರಣ ಸಿದ್ಧಾಂತ ವಿದ್ಯಾಪೀಠದ ಉಪನ್ಯಾಸಗಳು, ಲಿಂಗವಂತ ಧರ್ಮಗ್ರಂಥ ಬಹುಮಾನ ಸ್ಪರ್ಧೆ, ಬಸವ ಬೆಳಗು ಪತ್ರಿಕೆಯ ಪ್ರಕಟಣೆಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿ, ಮುಂದುವರೆಸಿದ್ದಾರೆ. 

2011 ರಲ್ಲಿ ನಡೆದ ವಿಜಯ ಮಹಾಂತ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಸಮಾರಂಭದಲ್ಲಿ ನಾಡಿನ 200 ಕ್ಕೂ ಹೆಚ್ಚು ವಿವಿಧ ಧರ್ಮಗಳ ಗುರುಗಳನ್ನು ಕರೆಸಿ, ಅವರ ತಲೆ ಮೇಲೆ ಸಂವಿಧಾನ ಇಟ್ಟು ‘ಧರ್ಮಕ್ಕಿಂತ ಸಂವಿಧಾನ ದೊಡ್ಡದು. ಸಂವಿಧಾನದ ಆಶಯದಂತೆ ಸಮಾನತೆಯೇ ನಮ್ಮ ಗುರಿ’ ಎಂದು ಪ್ರತಿಜ್ಞೆ ಮಾಡಿಸಿದರು.  
                                    
                                     

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !