ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಸರ್ಕಾರಿ ಕಚೇರಿಗಳಲ್ಲೂ ಕಾಣದ ಸ್ವಚ್ಛತೆ!

ಕಚೇರಿ ಆವರಣದಲ್ಲೂ ಕಸದ ರಾಶಿ; ಗಬ್ಬೆದ್ದು ನಾರುವ ಶೌಚಾಲಯಗಳು
Last Updated 6 ಫೆಬ್ರುವರಿ 2023, 6:18 IST
ಅಕ್ಷರ ಗಾತ್ರ

ಗದಗ: ಕೇಂದ್ರ ಸರ್ಕಾರ ಸ್ವಚ್ಛ ಭಾರತ್‌ ಮಿಷನ್‌ ಮೂಲಕ ಪರಿಸರದ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿದೆ. ಆದರೆ, ರಾಜ್ಯ ಸರ್ಕಾರ ನಗರ ಹಾಗೂ ಪಟ್ಟಣಗಳ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಿಲ್ಲ. ಗದಗ ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಉತ್ತಮ ಪರಿಸರವನ್ನು ಅಪೇಕ್ಷಿಸುವುದು ಇಲ್ಲಿ ಸಾಧ್ಯವಿಲ್ಲದ ಮಾತು. ಬಸ್‌ ನಿಲ್ದಾಣದ ಗೋಡೆಗಳು ಗುಟ್ಕಾ ಜಗಿದು ಉಗಿದ ಕಲೆಗಳಿಂದ ರಾರಾಜಿಸುತ್ತಿವೆ. ರಸ್ತೆಬದಿಯಲ್ಲಿ ಕಸ ಎಲ್ಲೆಂದರಲ್ಲಿ ಎಸೆದು ಅನೈರ್ಮಲ್ಯ ಉಂಟು ಮಾಡಲಾಗಿದೆ. ಇವೆಲ್ಲದರ ಹೊರತಾಗಿ ಸರ್ಕಾರಿ ಕಚೇರಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳಲ್ಲೂ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಈ ವಿಚಾರದಲ್ಲಿ ಇಲಾಖೆಯ ಮುಖ್ಯಸ್ಥರ ನಿರ್ಲಕ್ಷ್ಯ, ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಕಾರಣದಿಂದಾಗಿ ಸ್ವಚ್ಛತೆ ಮಾಯವಾಗಿದೆ.

ಗದಗ ಜಿಲ್ಲಾಧಿಕಾರಿ ಕಚೇರಿ ಆವರಣ ಹೆಚ್ಚುಕಡಿಮೆ ಸ್ವಚ್ಛವಾಗಿದೆ. ಮುಂಭಾಗದಲ್ಲಿರುವ ಉದ್ಯಾನವನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಹಿಂಬದಿಯಲ್ಲಿ ಈ ಮಟ್ಟದ ಸ್ವಚ್ಛತೆಯನ್ನು ಕಾಣಲು ಸಾಧ್ಯವಾಗದು. ಅಲ್ಲಲ್ಲಿ ಚದುರಿ ಬಿದ್ದಿರುವ ಕಸಕಡ್ಡಿಗಳು, ಕಟ್ಟಡ ತ್ಯಾಜ್ಯ, ಗಿಡಗಂಟಿಗಳು ಸಾರ್ವಜನಿಕರಲ್ಲಿ ಅಸಹನೆ ಮೂಡಿಸುತ್ತಿವೆ.

ಆವರಣದಿಂದ ಒಳ ನಡೆದರೆ ಗ್ರೌಂಡ್‌ ಫ್ಲೋರ್‌ನಲ್ಲಿ ತಕ್ಕಮಟ್ಟಿಗಿನ ಸ್ವಚ್ಛತೆ ಕಾಣಬಹುದು. ಆದರೆ, ಇಲ್ಲಿರುವ ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ ಮಾತ್ರ ಇನ್ನಷ್ಟು ಸುಧಾರಿಸಬೇಕಿದೆ. ಮೊದಲ ಮಹಡಿ ಮತ್ತು ಎರಡನೇ ಮಹಡಿಯಲ್ಲಿ ಸ್ವಚ್ಛತೆಗೆ ಇನ್ನಷ್ಟು ಗಮನ ಹರಿಸಬೇಕಿದೆ. ಜಿಲ್ಲಾಧಿಕಾರಿ ಕಟ್ಟಡದ ಒಳಭಾಗದಲ್ಲಿಯೇ ಗುಟ್ಕಾ, ತಂಬಾಕು ಜಗಿದು ಉಗಿದಿರುವ ಕಲೆಗಳು ಗೋಡೆಗಳ ಮೇಲೆ, ಗಿಡಗಳ ಮೇಲೆ ಕಾಣಿಸುತ್ತದೆ. ಇದಕ್ಕೆ ಕಡಿವಾಣ ಬೀಳಬೇಕಿದೆ.

ಇ‌ನ್ನು ಗದಗ ಬೆಟಗೇರಿ ನಗರಸಭೆ ಆವರಣ ಹೊರನೋಟಕ್ಕೆ ಚೆನ್ನಾಗಿಯೇ ಕಾಣುತ್ತದೆ. ಆದರೆ, ಅಲ್ಲೂ ಸ್ವಚ್ಛತೆ ಸ್ಥಿತಿಗತಿ ಹೀನಾಯವಾಗಿದೆ. ಇಲ್ಲಿನ ಸಾರ್ವಜನಿಕ ಶೌಚಾಲಯಗಳ ಸ್ಥಿತಿಯಂತೂ ಹೇಳಿತೀರದಷ್ಟು ಕೆಟ್ಟದಾಗಿದೆ.

ಗದಗ ತಹಶೀಲ್ದಾರ್‌ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಇಲ್ಲೆಲ್ಲಾ ಸ್ವಚ್ಛತೆಗೆ ಹೆಚ್ಚಿನ ನಿಗಾವಹಿಸಬೇಕಿದೆ. ತಮ್ಮ ಕಚೇರಿಗಳನ್ನೇ ಸ್ವಚ್ಛವಾಗಿಟ್ಟುಕೊಳ್ಳದ ಅಧಿಕಾರಿಗಳ ಊರ ಸ್ವಚ್ಛತೆಯನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಜಾಗೃತಿ ಮೂಡಿಸುವ ಕಚೇರಿಗಳ ಆವರಣದಲ್ಲಿಯೇ ಸ್ವಚ್ಛತೆ ಮಾಯ

ಗಜೇಂದ್ರಗಡ: ಸ್ವಚ್ಛ ಭಾರತ್ ಯೋಜನೆ ಸಾಕಾರಗೊಳಿಸಲು ಶ್ರಮಿಸುತ್ತಿರುವ ಹಾಗೂ ಜಾಗೃತಿ ಮೂಡಿಸುತ್ತಿರುವ ಪಟ್ಟಣದ ಪುರಸಭ ತಹಶೀಲ್ದಾರ್ ಕಚೇರಿಗಳ ಆವರಣದಲ್ಲಿಯೇ ಸ್ವಚ್ಛತೆ ಇಲ್ಲದಿರುವುದು ಅಣಕ ಮಾಡುವಂತಿದೆ.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಜನರು, ಅಧಿಕಾರಿಗಳು ಓಡಾಡುವ ಜಾಗದಲ್ಲಿ ಮಾತ್ರ ಸ್ವಚ್ಛತೆ ಇದೆ. ಕಚೇರಿಗಳ ಹಿಂದೆ, ಅಕ್ಕ-ಪಕ್ಕದಲ್ಲಿ ಗಿಡ-ಗಂಟಿಗಳು ಬೆಳೆದು ಕಸದಿಂದ ತುಂಬಿದೆ. ಅದರಂತೆ ಪುರಸಭೆ ಆವರಣವೂ ಇದಕ್ಕೆ ಹೊರತಾಗಿಲ್ಲ. ಪುರಸಭೆ ಹಿಂದೆ, ಮಳಿಗೆಗಳ ಸುತ್ತ ಮುಳ್ಳು ಕಂಠಿಗಳು ಬೆಳೆದಿದ್ದು, ಬಯಲು ಶೌಚಾಲಯವಾಗಿದೆ. ಆವರಣದಲ್ಲಿರುವ ಮೂತ್ರಾಲಯ ಗಬ್ಬೆದ್ದು ನಾರುತ್ತಿವೆ. ಹೀಗಾಗಿ ಜನರು ಮೂತ್ರ ವಿಸರ್ಜನೆಗೆ ಬಯಲನ್ನೇ ಅವಲಂಬಿಸಿದ್ದಾರೆ.

‘ಗಜೇಂದ್ರಗಡ ನೂತನ ತಾಲ್ಲೂಕು ಕೇಂದ್ರವಾಗಿದ್ದು, ತಹಶೀಲ್ದಾರ್ ಕಚೇರಿಗೆ ಸ್ವಂತ ಕಟ್ಟಡ ಇಲ್ಲ. ಸದ್ಯ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ನಡೆಸುತ್ತಿದ್ದೇವೆ. ಸ್ವಂತ ಕಟ್ಟಡ ನಿರ್ಮಾಣವಾದರೆ ಇಲಾಖೆ ಅನುದಾನ ಬಳಸಿಕೊಂಡು ಸ್ವಚ್ಛತೆಗೆ ಆದ್ಯತೆ ನೀಡಬಹುದು. ಹೀಗಿದ್ದರೂ ಸಹ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು’ ಎಂದು ಗಜೇಂದ್ರಗಡ ತಹಶೀಲ್ದಾರ್ ರಜನಿಕಾಂತ್ ಕೆಂಗೇರಿ ತಿಳಿಸಿದರು.

ಮಹಿಳಾ ಶೌಚಾಲಯ ಇಲ್ಲ

ನರೇಗಲ್: ಸ್ಥಳೀಯ ಪಟ್ಟಣ ಪಂಚಾಯ್ತಿಯಲ್ಲಿ ಇಂದಿಗೂ ಮಹಿಳಾ ಶೌಚಾಲಯದ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಹಿಳಾ ಸಿಬ್ಬಂದಿ, ಮಹಿಳಾ ಚುನಾಯಿತ ಸದಸ್ಯರು ಪರದಾಡುತ್ತಿದ್ದಾರೆ.

ಪಟ್ಟಣ ಪಂಚಾಯ್ತಿ ಸುತ್ತಲೂ ಸ್ವಚ್ಛತೆ ಮಾಯವಾಗಿದೆ. ಉಪತಹಶೀಲ್ದಾರ್‌ ಕಚೇರಿ, ಪಟ್ಟಣ ಪಂಚಾಯ್ತಿ ಕಾರ್ಯಾಲಯ, ಕೃಷಿ ಕೇಂದ್ರದ ಹಿಂದೆಯೇ ಜನರು ಬಯಲು ಮೂತ್ರ ವಿಸರ್ಜನೆಗೆ ಮುಂದಾಗುತ್ತಾರೆ. ಅಷ್ಟೇ ಅಲ್ಲದೆ ಕಚೇರಿಯಲ್ಲಿ ಗುಟ್ಕಾ, ತಂಬಾಕು ಜಗಿಯುವ ಹಾಗೂ ಅಲ್ಲಲ್ಲಿ ಉಗಿದಿರುವ ದೃಶ್ಯಗಳು ಕಂಡು ಬರುತ್ತವೆ.

ಕಾಗದಕ್ಕೆ ಮಾತ್ರ ಸಿಮಿತವಾಗಿರುವ ಸ್ವಚ್ಛತೆ

ಮುಂಡರಗಿ: ಪಟ್ಟಣದ ತಹಶೀಲ್ದಾರ್ ಕಾರ್ಯಾಲಯ ಸೇರಿದಂತೆ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಸರ್ಕಾರಿ ಕಚೇರಿಗಳ ಶೌಚಾಲಯಗಳು ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಲಿವೆ.

ಶೌಚಾಲಯಗಳು ಗಬ್ಬೆದ್ದು ನಾರುತ್ತವೆ ಮತ್ತು ಸ್ಚಚ್ಛತೆಯಿಂದ ದೂರವಿವೆ ಎಂಬ ಕಾರಣದಿಂದ ಸಾರ್ವಜನಿಕರು ಶೌಚಾಲಯಗಳ ಪಕ್ಕದಲ್ಲಿಯೇ ಮೂತ್ರ ವಿಸರ್ಜಿಸುತ್ತಾರೆ. ಹೀಗಾಗಿ ಶೌಚಾಲಯಗಳು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವು ಸಂಪೂರ್ಣವಾಗಿ ಕಲುಷಿತಗೊಳ್ಳುವಂತಾಗಿದೆ.

ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಸಾರ್ವಜನಿಕ ಮೂತ್ರಾಲಯವಿದ್ದು, ಅದನ್ನು ಸಾರ್ವಜನಿಕರು ಮಾತ್ರ ಬಳಸುತ್ತಾರೆ. ಅದು ಸ್ವಚ್ಛವಿಲ್ಲವಾದ್ದರಿಂದ ಜನರು ಮೂತ್ರಾಲಯದ ಹೊರಗೋಡೆಗಳ ಪಕ್ಕದಲ್ಲಿ ಮೂತ್ರ ವಿಸರ್ಜಿಸುತ್ತಾರೆ. ಕಚೇರಿಯ ಒಳಗೆ ಸಿಬ್ಬಂದಿಗಾಗಿ ಪ್ರತ್ಯೇಕ ಶೌಚಾಲಯವಿದ್ದು, ಅದು ಸಹ ಸ್ವಚ್ಛತೆಯಿಂದ ದೂರವಿದೆ.

ಪುರಸಭೆಯ ಆವರಣದಲ್ಲಿ ಕಿರಿದಾದ ಶೌಚಾಲಯವಿದ್ದು, ಅದರ ಸುತ್ತಮುತ್ತಲಿನ ಪ್ರದೇಶ ಗಲೀಜಿನಿಂದ ಕೂಡಿದೆ. ತಾಲ್ಲೂಕು ಪಂಚಾಯ್ತಿ ಆವರಣದಲ್ಲಿರುವ ಶೌಚಾಲಯಗಳಲ್ಲಿ ನೀರು, ವಿದ್ಯುತ್ ಹಾಗೂ ಮತ್ತಿತರ ಮೂಲ ಸೌಲಭ್ಯಗಳೇ ಇಲ್ಲ. ಅಲ್ಲಿಗೆ ತೆರಳುವ ಜನರು ಶೌಚಕ್ಕೆ ಪರದಾಡುವಂತಾಗಿದೆ.

ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ಶೌಚಾಲಯಗಳೇ ಇಲ್ಲ. ಇದ್ದರೂ ಮೂಲ ಸೌಲಭ್ಯಗಳಿಲ್ಲ. ಹೀಗಾಗಿ ಸರ್ಕಾರ ಘೋಷಣೆ ಮಾಡಿರುವ ಸ್ವಚ್ಛ ಭಾರತ, ಶೌಚಮುಕ್ತ ಭಾರತ ಮೊದಲಾದ ಯೋಜನೆಗಳು ಕಾಗದಕ್ಕೆ ಮಾತ್ರ ಸೀಮಿತವಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಶೌಚಾಲಯ ಕೊರತೆ

ಶಿರಹಟ್ಟಿ: ತಾಲ್ಲೂಕಿನ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಶೌಚಾಲಯವೇ ಇಲ್ಲ. ಒಂದು ವೇಳೆ ಇದ್ದರೂ ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದೇ ಇರುವುದರಿಂದ ಅವು ಗಬ್ಬೆದ್ದು ನಾರುತ್ತಿವೆ.

ಕೆಲಸದ ನಿಮಿತ್ಯ ಸರ್ಕಾರಿ ಕಚೇರಿಗೆ ಬರುವ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರು ಶೌಚಾಲಯ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಚೇರಿಗಳ ಆವರಣಗಳನ್ನು ನಿತ್ಯ ಸ್ವಚ್ಛಗೊಳಿಸುತ್ತಿದ್ದು, ಆದರೆ ಶೌಚಾಲಯ ನಿರ್ವಹಣೆ ಮಾತ್ರ ಮಾಡುತ್ತಿಲ್ಲ. ತಹಶೀಲ್ದಾರ್‌ ಕಚೇರಿಯಲ್ಲಿ ಇರುವ ಶೌಚಾಲಯ ನಿಯಮಿತವಾಗಿ ಸ್ವಚ್ಛಗೊಳಿಸದೆ ಗಬ್ಬೆದ್ದು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಮೂತ್ರ ಮಾಡುವ ದುಸ್ಥಿತಿ ಎದುರಾಗಿದೆ.

ಬಹುತೇಕ ಸರ್ಕಾರಿ ಕಚೇರಿಗಳ ಪರಿಸ್ಥಿತಿ ಇದೇ ಆಗಿದೆ. ಅಲ್ಲದೇ ಬಹುತೇಕ ಕಚೇರಿಗಳಲ್ಲಿ ಪ್ರತ್ಯೇಕ ಮಹಿಳಾ ಶೌಚಾಲಯಗಳೇ ಇಲ್ಲ. ಇದರಿಂದ ಮಹಿಳೆಯರು ಅನುಭವಿಸುವ ತೊಂದರೆ ಅಷ್ಟಿಷ್ಟಲ್ಲ.

ಶೌಚಾಲಯ ನಿರ್ಮಾಣ ಹಾಗೂ ನಿರ್ವಹಣೆಗೆ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿದೆ. ಕಚೇರಿಗಳಲ್ಲಿ ಸಹ ಅದರ ನಿರ್ವಣೆಗೆ ನಿಯಮಿತವಾಗಿ ಖರ್ಚು ಆಗುತ್ತಿದ್ದರೂ ಕೆಲಸ ಮಾತ್ರ ಆಗುತ್ತಿಲ್ಲ. ಶೌಚಾಲಯ ಇಲ್ಲದ ತಾಲ್ಲೂಕು ಮಟ್ಟದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕೂಡಲೇ ಶೌಚಾಲಯ ನಿರ್ಮಾಣ ಮಾಡಬೇಕಿದ್ದು, ಈಗಾಗಲೇ ಶೌಚಾಲಯ ಹೊಂದಿದ ಕಚೇರಿಗಳು ಅವುಗಳ ನಿಯಮಿತ ನಿರ್ವಹಣೆ ಮಾಡಬೇಕೆಂಬುದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಎಲ್ಲೆಂದರಲ್ಲಿ ಕಸದ ರಾಶಿ

ರೋಣ: ತಾಲ್ಲೂಕು ತಹಶೀಲ್ದಾರ್ ಕಚೇರಿಯ ಹೊರಗಡೆ ಒಣ ಕಸದ ರಾಶಿ ಬಿದ್ದಿದ್ದರೆ; ಆವರಣದೊಳಗೆ ಮೂಲೆ ಮೂಲೆಯಲ್ಲಿ ಕಸದ ರಾಶಿಯ ಜೊತೆಗೆ ಗುಟ್ಕಾ ಚೀಟುಗಳು ಕಾಣಸಿಗುತ್ತವೆ. ಇದು ಸಭ್ಯ ನಾಗಕರಿಗೆ ಮುಜುಗರ ತರುವ ವಿಷಯವಾಗಿದೆ.

ಕಚೇರಿ ಆವರಣದಲ್ಲಿ ಹಾಗೂ ಒಳಗಡೆ ಗುಟ್ಕಾ ತಿನ್ನವವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ಫಲಕವನ್ನು ಗೋಡೆಗೆ ಅಂಟಿಸಿದ್ದರೂ ಯಾರೂ ಅದಕ್ಕೆ ಕಿಮ್ಮತ್ತು ಕೊಡುತ್ತಿಲ್ಲ. ಕಚೇರಿಯಲ್ಲಿ ಕಣ್ಗಾವಲು ಕ್ಯಾಮೆರಾ ಇದ್ದರೂ ಕೂಡ ಅಧಿಕಾರಿಗಳು, ಸಿಬ್ಬಂದಿ ತಂಬಾಕು, ಗುಟ್ಕಾ, ಎಲೆ ಅಡಿಕೆ ಹಾಕಿಕೊಂಡು ಗೋಡೆಗಳಿಗೆ ಉಗಿದ ಕೆಂಪು ಕೆಲೆಗಳು ಅಲ್ಲಲ್ಲಿ ಕಾಣಸಿಗುತ್ತವೆ. ಇವರಿಗೆ ದಂಡ ಹಾಕಿದ ಉದಾಹರಣೆಗಳೇ ಇಲ್ಲ ಎಂದು ದೂರುತ್ತಾರೆ ಸ್ಥಳೀಯ ನಿವಾಸಿಗಳಾದ ಮೌನೇಶ ಹಾದಿಮನಿ, ಶರಣು ದೊಡ್ಡಮನಿ, ಸೋಮು ನಾಗರಾಜ.

ತಾಲ್ಲೂಕು ಆಡಳಿತ ಕಚೇರಿಯೇ ಈ ರೀತಿಯ ಕಸದ ರಾಶಿ, ಅಸ್ವಚ್ಛತೆಯಿಂದ ಕೂಡಿದ್ದರೆ ಇನ್ನುಳಿದ ಕಚೇರಿಗಳ ವ್ಯವಸ್ಥೆ ಹೇಗಿರಬೇಕು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಒಟ್ಟಾರೆಯಾಗಿ ತಾಲ್ಲೂಕಿನಾದ್ಯಂತ ಕೆಲವು ಕಚೇರಿಗಳ ಆವರಣದಲ್ಲಿ ಕಸದ ರಾಶಿಗೆ ಬರವೇ ಇಲ್ಲದಂತಾಗಿದೆ.
ಕೊನೆಯ ಪಕ್ಷ ಹಬ್ಬ ಹುಣ್ಣಿಮೆಗೆ ಒಮ್ಮೆಯಾದರೂ ಕಸವನ್ನು ಸ್ವಚ್ಛಗೊಳಿಸಿ ಕಚೇರಿ ಆವರಣದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸ್ಥಳೀಯರಾದ ಮುನ್ನಾ ಮುಲ್ಲಾ, ಅರ್ಜುನ ಕೊಪ್ಪಳ ಆಗ್ರಹಿಸಿದ್ದಾರೆ.

ಪುರಸಭೆ ಆವರಣಕ್ಕೆ ಗೇಟ್ ದುರಸ್ತಿಯಲ್ಲಿರುವುದರಿಂದ ಕೆಲವರು ಪುರಸಭೆ ಆವರಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಸ್ವಚ್ಛತೆ ಕುರಿತು ಕ್ರಮ ಕೈಗೊಳ್ಳಲಾಗುವುದು
ಮಹಾಂತೇಶ ಬೀಳಗಿ, ಪುರಸಭೆ ಮುಖ್ಯಾಧಿಕಾರಿ, ಗಜೇಂದ್ರಗಡ

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಶ್ರೀಶೈಲ ಎಂ. ಕುಂಬಾರ, ಚಂದ್ರು ಎಂ.ರಾಥೋಡ್‌, ನಿಂಗರಾಜ ಹಮ್ಮಿಗಿ, ಕಾಶೀನಾಥ ಬಿಳಿಮಗ್ಗದ, ಪ್ರಕಾಶ್‌ ಗುದ್ನೆಪ್ಪನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT