ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಳಂಬರಹಿತ ಪ್ರಗತಿ ಸಾಧನೆಯೇ ಸರ್ಕಾರದ ಗುರಿ

₹141.78 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ
Last Updated 14 ಮಾರ್ಚ್ 2023, 4:21 IST
ಅಕ್ಷರ ಗಾತ್ರ

ರೋಣ: ‘ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಸಮಯ ಮತ್ತು ಅಭಿವೃದ್ಧಿ ಎರಡೂ ಒಟ್ಟಿಗೆ ಸಾಗಬೇಕು. ಕಾಲಮಿತಿಯಲ್ಲೇ ಕೆಲಸಗಳು ಆಗಬೇಕು. ವಿಳಂಬರಹಿತ ಪ್ರಗತಿ ಸಾಧಿಸುವುದೇ ನಮ್ಮ ಸರ್ಕಾರದ ಗುರಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿ ಸೋಮವಾರ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಮತ್ತು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

‘ಮೂರು ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರು ಪ್ರತಿ ಮನೆಗೆ ಕುಡಿಯುವ ನೀರು ಕೊಡುವುದಾಗಿ ಘೋಷಿಸಿದ್ದರು‌. ಈ ಮೂರು ವರ್ಷದಲ್ಲಿ 12 ಕೋಟಿ ಮನೆಗಳಿಗೆ ಹೊಸದಾಗಿ ನೀರು ಕೊಟ್ಟಿದ್ದಾರೆ. 75 ವರ್ಷಗಳಲ್ಲಿ ರಾಜ್ಯದಲ್ಲಿ ಕೇವಲ 25 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ನೀಡಿದ್ದರು. ನಮ್ಮ ಸರ್ಕಾರ ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ನೀರು ಸಂಪರ್ಕ ಕಲ್ಪಿಸಿದೆ. ಇದು ಡಬಲ್ ಎಂಜಿನ್ ಸರ್ಕಾರದ ತಾಕತ್ತು’ ಎಂದರು.

‘ಮೂಲಸೌಲಭ್ಯಗಳನ್ನು ಕಲ್ಪಿಸಲು ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಜಗತ್ತಿನ ಯಾವುದೇ ಶಕ್ತಿ ಬಂದರೂ ಜನರಿಗೆ ನೀರು ಕೊಡುವುದನ್ನು ತಡೆಯಲು ಸಾಧ್ಯವಿಲ್ಲ. ಜನ ಶಕ್ತಿ ಮುಂದೆ ಯಾವುದೇ ಶಕ್ತಿ ನಡೆಯುವುದಿಲ್ಲ. ಯಾವಾಗಲೂ ಜನರ ಇಚ್ಛಾಶಕ್ತಿ ಗೆದ್ದಿದೆ. ಜನತೆಗೆ ಶುದ್ಧ ನೀರು ಕೊಡಲು ಅಡಚಣೆ ಮಾಡುತ್ತಿರುವವರಿಗೆ ನೀರು ಕುಡಿಸಿ’ ಎಂದು ಹೇಳಿದರು.

‘ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಲಾಗಿದೆ. ಸಂವಿಧಾನದ 9ನೇ ಶೆಡ್ಯೂಲ್‌ಗೆ ಈ ಹೆಚ್ಚಳವನ್ನು ಸೇರಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಜನರ ಸಮಸ್ಯೆಗಳನ್ನು ನಿವಾರಿಸುವ ಸ್ಪಂದನಾಶೀಲ ಸರ್ಕಾರ ನಮ್ಮದಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಡಯಾಲಿಸಿಸ್ ಸೈಕಲ್ ಹೆಚ್ಚಳ, ಕಿಮೋಥೆರಪಿ ಕೇಂದ್ರ ಹೆಚ್ಚಿಸಲಾಗಿದೆ. ಕಿವುಡರಿಗೆ ಶ್ರವಣ ಸಾಧನ ಸಹಾಯಕ್ಕೆ ₹500 ಕೋಟಿ ಮೀಸಲಿಡಲಾಗಿದೆ’ ಎಂದು ಹೇಳಿದರು.

‘250 ಕೋಟಿ ವೆಚ್ಚದಲ್ಲಿ ಹಿಂದುಳಿದ ವರ್ಗದ ಹಾಸ್ಟೆಲ್‌ಗಳ ಸಾಮರ್ಥ್ಯ ಹೆಚ್ಚಿಸಿ, 30 ಸಾವಿರ ಒಬಿಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ನೇಕಾರರಿಗೆ ವಿದ್ಯುತ್ ಸಬ್ಸಿಡಿ, ₹2 ಲಕ್ಷದವರೆಗೆ ಸಾಲಸೌಲಭ್ಯ, ಸಹಾಯಧನ, ₹350 ಕೋಟಿ ವೆಚ್ಚದಲ್ಲಿ ಕುರಿಗಾಹಿಗಳ ಸಂಘಕ್ಕೆ 20 ಕುರಿ, 1 ಮೇಕೆ ನೀಡಲಾಗುತ್ತಿದೆ. ಸರ್ಕಾರದ ಸೌಲಭ್ಯಗಳ ಬಗ್ಗೆ ಬೆಳಕು ಚೆಲ್ಲಿ, ಇನ್ನಷ್ಟು ಜನರು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕೆನ್ನುವ ಉದ್ದೇಶದಿಂದ ಫಲಾನುಭವಿಗಳ ಸಮ್ಮೇಳನ ಏರ್ಪಡಿಸಲಾಗುತ್ತಿದೆ’ ಎಂದರು.

ಸಚಿವರಾದ ಬಿ.ಎ.ಬಸವರಾಜ, ಸಿ.ಸಿ.ಪಾಟೀಲ, ಶಾಸಕ ಕಳಕಪ್ಪ ಬಂಡಿ, ರೋಣ ಪುರಸಭೆ ಅಧ್ಯಕ್ಷೆ ರಂಗಮ್ಮ ಸುರೇಶ ಭಜಂತ್ರಿ, ವಿಧಾನ ‍ಪರಿಷತ್‌ ಸದಸ್ಯ ಎಸ್.ವಿ.ಸಂಕನೂರ ಇದ್ದರು.

2000 ಶಾಲಾ ಬಸ್ ಸೇವೆ

ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಶಾಲೆಗೆ ತೆರಳಲು 2000 ಶಾಲಾ ಬಸ್ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಹೆಣ್ಣುಮಕ್ಕಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗುವುದು. ಐಟಿಐ, ಪಿಯುಸಿಯಲ್ಲಿ ಅನುತ್ತೀರ್ಣರಾದ ಯುವಕರಿಗೆ 6 ತಿಂಗಳ ಕಾಲ ತರಬೇತಿ ನೀಡಿ, ಉದ್ಯೋಗವಕಾಶ ಕಲ್ಪಿಸಲಾಗುವುದು. ಈ ಅವಧಿಯಲ್ಲಿ ₹1,500 ಸ್ಟೈಫಂಡ್‌ ನೀಡಲಾಗುವುದು ಎಂದು ತಿಳಿಸಿದರು.

3 ಲಕ್ಷ ಕುಟುಂಬಗಳಿಗೆ ‘ಬೆಳಕು’

‘ಗದಗ ಜಿಲ್ಲೆಯಲ್ಲಿ ವಿದ್ಯುತ್ ಸೌಲಭ್ಯವಿಲ್ಲದ 8,092 ಕುಟುಂಬಗಳಿಗೆ ಹಾಗೂ ಇಡೀ ರಾಜ್ಯದಲ್ಲಿ ಸುಮಾರು 3 ಲಕ್ಷ ಕುಟುಂಬಗಳಿಗೆ ಬೆಳಕು ನೀಡುವ ಕಾರ್ಯಕ್ರಮವನ್ನು ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

‘ಸ್ತ್ರೀ ಸಾಮರ್ಥ್ಯ ಯೋಜನೆಯಡಿ 10 ಸಾವಿರ ಮಹಿಳಾ ಸಂಘಗಳಿಗೆ ತಲಾ ₹1 ಲಕ್ಷದಂತೆ ಡಿಬಿಟಿ ಮಾಡಲಾಗಿದ್ದು, ಗ್ರಾಮದ ತಲಾ ಎರಡು ಸ್ತೀಶಕ್ತಿ ಸಂಘಗಳಿಗೆ ಒಟ್ಟು ₹5 ಲಕ್ಷ ಆರ್ಥಿಕ ನೆರವು ನೀಡಲಾಗುತ್ತದೆ. ಎರಡನೇ ಹಂತದ ಯೋಜನೆಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನೂ ಸರ್ಕಾರ ಜಾರಿಗೊಳಿಸಿದ್ದು, ಮಹಿಳೆಯರು ಹಾಗೂ ಯುವಕರ ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕನ್ನು ಬದುಕಬೇಕೆನ್ನುವುದು ಸರ್ಕಾರದ ಆಶಯ. ಕೃಷಿ ಕಾರ್ಮಿಕ ಮಹಿಳೆಯರಿಗೆ ₹1 ಸಾವಿರ ಆರ್ಥಿಕ ಸಹಾಯ ನೀಡುವ ಯೋಜನೆ ರೂಪಿಸಲಾಗಿದೆ’ ಎಂದರು.

ರೋಣ, ಗಜೇಂದ್ರಗಡ ಹಾಗೂ ನರೇಗಲ್ ಪಟ್ಟಣಗಳಿಗೆ ಫ್ಲೋರೈಡ್ ಮುಕ್ತ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆ 2009ರಲ್ಲಿ ಪ್ರಾರಂಭವಾದರೂ, ಮುಂದುವರಿಯಲಿಲ್ಲ. ಕಾಮಗಾರಿ ಆಗಲೇ ಮುಗಿದಿದ್ದರೆ ಫ್ಲೋರೈಡ್‌ ನೀರು ಕುಡಿಯುವ ಪರಿಸ್ಥಿತಿ ಇರುತ್ತಿರಲಿಲ್ಲ
ಬಸವರಾಜ ಬೊಮ್ಮಾಯಿ, ಸಿಎಂ

ಅಧಿಕಾರದಲ್ಲಿದ್ದಾಗ ಕೆರೆಯಲ್ಲಿನ ಒಂದಿಂಚು ಹೂಳು ಎತ್ತಿಸಲಿಲ್ಲ. ಈಗ ಮಲಪ್ರಭೆ ನೀರು ಕೊಡುತ್ತೇವೆ ಅಂದರೆ ರೋಣ ಬಂದ್‌ ಮಾಡಿಸುತ್ತಾರೆ. ಇಂತಹ ಬೆದರಿಕೆಗಳಿಗೆ ಬಿಜೆಪಿ ಬಗ್ಗುವುದಿಲ್ಲ
ಸಿ.ಸಿ.ಪಾಟೀಲ, ಸಚಿವ

ಎಲ್ಲರೂ ಮೂಲಸೌಕರ್ಯಗಳಿಗಾಗಿ ಬೇಡಿಕೆ ಇಟ್ಟರೆ; ಕಾಂಗ್ರೆಸ್‌ ನಾಯಕರು ರಸ್ತೆ, ನೀರು ಕೊಡಬೇಡಿ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ವಿಪರ್ಯಾಸ
ಕಳಕಪ್ಪ ಬಂಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT