ಶನಿವಾರ, ಅಕ್ಟೋಬರ್ 16, 2021
29 °C
ಲಖಿಂಪುರ-ಖೇರಿ ಘಟನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಗಜೇಂದ್ರಗಡ: ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಜೇಂದ್ರಗಡ: ಉತ್ತರ ಪ್ರದೇಶದ ಲಖಿಂಪುರ-ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರ ಮಗ ವಾಹನ ಹರಿಸಿದ ಪ್ರಕರಣ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

'ರೈತ ವಿರೋಧಿ ಕೃಷಿ ಕಾಯ್ದಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರೊಬ್ಬರ ಮಗ ವಾಹನ ಹರಿಸಿರುವುದು ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಹೀಗಿರುವಾಗ ರೈತರು ರೈತರಿಗೆ ಮಾರಕವಾಗಿರುವ, ಬಂಡವಾಳ ಶಾಹಿಗಳಿಗೆ ಅನುಕೂಲಕರವಾದ ಕಾಯ್ದೆಗಳನ್ನು ರದ್ದುಗೊಳಿಸಿ ರೈತರ ಹಿತ ಕಾಯಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾಗ ವಾಹನ ನುಗ್ಗಿಸಿ ರೈತರನ್ನು ಕೊಂದಿದ್ದು ಅಮಾನವೀಯ ಘಟನೆ. ಇದು ಪ್ರತಿಭಟನೆ ಹತ್ತಿಕ್ಕುವ ಹುನ್ನಾರವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಂತ್ರಸ್ತ ರೈತರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಬಂದಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ತಡೆದು ಗೃಹ ಬಂಧನದಲ್ಲಿಟ್ಟಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ. ಕೂಡಲೇ ಕೊಲೆ ಆರೋಪಿಗಳನ್ನು ಬಂಧಿಸಿ, ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.

ನಂತರ ತಹಶಿಲ್ದಾರ್ ರಜನಿಕಾಂತ ಕೆಂಗೇರಿ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಪಟ್ಟಣದ ಜೋಡು ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಜಾಥಾ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಕಾಲಕಾಲೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಿವರಾಜ ಘೋರ್ಪಡೆ, ಅಶೋಕ ಬಾಗಮಾರ, ಬಸವರಾಜ ಶೀಲವಂತರ, ಎಚ್.ಎಸ್.ಸೋಂಪೂರ, ಶಶಿಧರ ಹೂಗಾರ, ಅಪ್ಪು ಮತ್ತಿಕಟ್ಟಿ, ಬಸವರಾಜ ಚನ್ನಿ, ಉಮೇಶ ರಾಠೋಡ, ರಾಜು ಸಾಂಗ್ಲಿಕರ, ವೆಂಕಟೇಶ ಮುದಗಲ್, ಬಸವರಾಜ ಬಂಕದ, ಪ್ರಶಾಂತ ರಾಠೋಡ, ಯಲ್ಲಪ್ಪ ಬಂಕದ, ಶಿವು ಚವ್ಹಾಣ, ಸಿದ್ದು ಗೊಂಗಡಶೇಟ್ಟಿಮಠ, ಮುತ್ತಣ್ಣ ಮ್ಯಾಗೇರಿ, ಶರಣಪ್ಪ ಚಳಗೇರಿ, ಬಾಷೆಸಾಬ ಮುದಗಲ್, ಶರಣು ಸೊಬರದ, ಸುರೇಶ ಪಾಟೀಲ, ದುಗ್ಗಪ್ಪ ಕಂಬಳಿ, ಶಾರದಾ ರಾಠೋಡ, ಸುಮಂಗಲಾ ಇಟಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.