ಬುಧವಾರ, ಮೇ 25, 2022
29 °C
ಕೇಂದ್ರ, ರಾಜ್ಯ ಸರ್ಕಾರ ಜನವಿರೋಧಿ ನೀತಿಗೆ ಕಾಂಗ್ರೆಸ್‌ ಖಂಡನೆ

ಗದಗ: ಫೆ. 20ರಿಂದ ಬೃಹತ್‌ ರ‍್ಯಾಲಿಗೆ ಕಾಂಗ್ರೆಸ್ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ, ಗದಗ ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ಫೆ. 20ರಿಂದ 23ರವರೆಗೆ ಜಿಲ್ಲೆಯ ವಿವಿಧೆಡೆ ಬೃಹತ್‌ ಟ್ರ್ಯಾಕ್ಟರ್‌ ಹಾಗೂ ಬೈಕ್‌ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್‌. ಪಾಟೀಲ ತಿಳಿಸಿದರು.

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳು ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿರುವುದರ ವಿರುದ್ಧ ಅನ್ನದಾತರು ಪ್ರತಿಭಟನೆ ನಡೆಸಿದರೂ ಅವುಗಳನ್ನು ಹಿಂಪಡೆಯಲು ಮುಂದಾಗುತ್ತಿಲ್ಲ. ಕೊರೆಯುವ ಚಳಿ, ಮಳೆ, ಬಿಸಿಲನ್ನು ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನಮಂತ್ರಿ ಮೋದಿ ಸೌಜನ್ಯಕ್ಕೂ ರೈತರನ್ನು ಭೇಟಿ ಮಾಡಿಲ್ಲ. ಇದು ಅವರಿಗೆ ರೈತರ ಮೇಲೆ ಇರುವ ಮನೋಭಾವ ಎಂತಹದು ಎಂಬುದನ್ನು ತೋರಿಸುತ್ತದೆ’ ಎಂದು ಕಿಡಿಕಾರಿದರು.

‘ರೈತರ ಹೋರಾಟಕ್ಕೆ ಕಾಂಗ್ರೆಸ್‌ ಬೆಂಬಲವಿದೆ. ಅವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ಮತ್ತು ರ‍್ಯಾಲಿ ನಡೆಸಲಾಗುವುದು. ಫೆ. 20ರಂದು ಗಜೇಂದ್ರಗಡದಲ್ಲಿ ಬೃಹತ್‌ ಟ್ರ್ಯಾಕ್ಟರ್‌ ರ‍್ಯಾಲಿ ಮತ್ತು ಪ್ರತಿಭಟನೆ ನಡೆಯಲಿದೆ. ಅದೇದಿನ, ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಬೈಕ್‌ ರ‍್ಯಾಲಿ ಮತ್ತು ಪ್ರತಿಭಟನೆ ನಡೆಯಲಿದೆ’ ಎಂದು ತಿಳಿಸಿದರು.

‘22ರಂದು ರೋಣ ಮತ್ತು ಮುಂಡರಗಿ ಹಾಗೂ 23ರಂದು ನರಗುಂದ ತಾಲ್ಲೂಕಿನಲ್ಲಿ ಟ್ರ್ಯಾಕ್ಟರ್‌, ಬೈಕ್‌ ರ‍್ಯಾಲಿ ಹಾಗೂ ಪ್ರತಿಭಟನೆ ನಡೆಯಲಿದೆ. 23ರಂದು ಶಿರಹಟ್ಟಿ ಮತ್ತು ಡಂಬಳದಲ್ಲಿ ಬೃಹತ್‌ ಪಾದಯಾತ್ರೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಪ್ರತಿದಿನ ವಿರೋಧ, ಪ್ರತಿಭಟನೆಗಳು ನಡೆಯುತ್ತಿದ್ದರೂ ಕೂಡ ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡಿಸೇಲ್‌ ದರವನ್ನು ಹೆಚ್ಚಿಸುತ್ತಲೇ ಇದೆ. ಕೆಲವೆಡೆ ಪೆಟ್ರೋಲ್‌ ಬೆಲೆ ₹100 ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ’ ಎಂದು ಹೇಳಿದರು.

‘ಪ್ರಧಾನಿ ಮೋದಿ ಅವರಿಗೆ ರೈತರು, ಬಡವರ ಬಗ್ಗೆ ಕಾಳಜಿ ಇಲ್ಲ. ಪಡಿತರ ಅಕ್ಕಿ ವಿತರಣೆಯನ್ನು ಕಡಿಮೆಗೊಳಿಸಲಾಗಿದೆ. ವೃದ್ಧರು, ಅಸಹಾಯಕರಿಗೆ ಮಾಸಾಶನ, ಪಿಂಚಣಿ ಸೌಲಭ್ಯ ದೊರೆಯುತ್ತಿಲ್ಲ. ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು‌’ ಎಂದು ಆಗ್ರಹಿಸಿದರು.

ಮಾಜಿ ಶಾಸಕ ಯಾವಗಲ್‌ ಮಾತನಾಡಿ, ‘ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ ಕೇಂದ್ರ ಸರ್ಕಾರ ಕೃಷಿಕ ಸಮುದಾಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ, ದೇಶದ ಆರ್ಥಿಕ ಪ್ರಗತಿಗೆ ಕೊನೆ ಮೊಳೆ ಹೊಡೆಯುವ ಪ್ರಯತ್ನಕ್ಕೆ ಮುಂದಾಗಿದೆ’ ಎಂದು ಆರೋಪ ಮಾಡಿದರು.

ಕಾಂಗ್ರೆಸ್‌ ಮುಖಂಡ ಅಶೋಕ ಮಂದಾಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು