ಗಜೇಂದ್ರಗಡ: ಸಮೀಪದ ಪುರ್ತಗೇರಿ ಕ್ರಾಸ್‌ನಲ್ಲಿದ್ದ ಬಸ್ ನಿಲ್ದಾಣವನ್ನು ಮರು ನಿರ್ಮಾಣ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ಸೋಮವಾರ ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಸದಸ್ಯರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಸಮೀಪದ ಪುರ್ತಗೇರಿ ಕ್ರಾಸ್‌ನಲ್ಲಿ ಈ ಹಿಂದೆ ಇದ್ದ ಬಸ್ ನಿಲ್ದಾಣವನ್ನು ಭಾನಾಪುರ-ಗದ್ದನಕೇರಿ ಕ್ರಾಸ್ ರಾಷ್ಟ್ರೀಯ ದ್ವಿಪಥ ಹೆದ್ದಾರಿ 367 ನಿರ್ಮಿಸುವ ಸಂದರ್ಭದಲ್ಲಿ ತೆರವುಗೊಳಿಸಲಾಗಿತ್ತು. ಆದರೆ ರಸ್ತೆ ನಿರ್ಮಿಸಿದ ಬಳಿಕವೂ ನಿಲ್ದಾಣ ಮರು ನಿರ್ಮಾಣ ಮಾಡಿಲ್ಲ. ಅಲ್ಲದೆ ನಿಲ್ದಾಣವಿದ್ದ ಜಾಗ ಹಾಗೂ ಅದರ ಸುತ್ತಲು ಹೋಟೆಲ್, ಪಾನ್‌ಶಾಪ್‌ಗಳು ನಿರ್ಮಾಣವಾಗಿದ್ದು, ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಬಸ್‌ಗಾಗಿ ರಸ್ತೆಯಲ್ಲಿಯೇ ನಿಂತು ಕಾಯುವಂತಾಗಿದೆ.
ಹೀಗಾಗಿ ಈ ಮೊದಲು ಇದ್ದ ಬಸ್ ನಿಲ್ದಾಣದ ಜಾಗದಲ್ಲಿ ಬಸ್ ನಿಲ್ದಾಣ ಸ್ಥಾಪಿಸಿ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದುʼ ಎಂದು ಸಂಘಟನೆ ಮುಖಂಡರು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬಳಿಕ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಪರಶುರಾಮ ಶಿಂಗ್ರಿ ಮನವಿ ಸ್ವೀಕರಿಸಿದರು. ಸಂಘಟನೆಯ ಹನಮಂತ ಗೌಡರ, ಅಂದಪ್ಪ ರಾಠೋಡ, ಪ್ರಕಾಶ ರಾಠೋಡ, ಗಿರೀಶ ರಾಠೋಡ, ಹನಮಂತ ಕಲ್ಲೊಡ್ಡರ, ಮಾರುತಿ ಗೋಂದಳೆ ಸೇರಿದಂತೆ ಇತರರು ಇದ್ದರು.