ಗದಗ: 14 ವರ್ಷಗಳ ನಂತರ ರೈತರ ಕೈಸೇರಿದ ವಿಮೆ ಪರಿಹಾರ.!

7
ವಿಮಾ ಕಂಪೆನಿ ವಿರುದ್ಧ ಜಿಲ್ಲಾ ಗ್ರಾಹಕರ ವಾಜ್ಯಗಳ ಪರಿಹಾರ ವೇದಿಕೆ ಮಹತ್ವದ ಆದೇಶ

ಗದಗ: 14 ವರ್ಷಗಳ ನಂತರ ರೈತರ ಕೈಸೇರಿದ ವಿಮೆ ಪರಿಹಾರ.!

Published:
Updated:
Deccan Herald

ಗದಗ: ಜಿಲ್ಲೆಯ ರೋಣ ತಾಲ್ಲೂಕಿನ ಮಾರನಬಸರಿ, ಹುಲ್ಲೂರು, ಸೋಮನಕಟ್ಟಿ, ಮುದೇನಗುಡಿ, ಹೊಳೆಹಡಗಲಿ ಸೇರಿದಂತೆ ವಿವಿಧ ಗ್ರಾಮಗಳ 185 ಮಂದಿ ರೈತರು, ಜಿಲ್ಲಾ ಗ್ರಾಹಕರ ವಾಜ್ಯಗಳ ಪರಿಹಾರ ವೇದಿಕೆಯ ಮೂಲಕ, 14 ವರ್ಷಗಳ ನಂತರ ಬೆಳೆ ವಿಮೆ ಪರಿಹಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

2003ರಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಈರುಳ್ಳಿ, ಮೆಕ್ಕೆಜೋಳ ಮತ್ತು ಸೂರ್ಯಕಾಂತಿ ಬೆಳೆಗಳಿಗೆ ಈ ರೈತರು ಭಾರತೀಯ ಕೃಷಿ ವಿಮಾ ಕಂಪನಿಗೆ ವಿಮಾ ಕಂತು ತುಂಬಿದ್ದರು. ಮಳೆ ಕೊರತೆಯಿಂದ ಆ ವರ್ಷ ಬೆಳೆಹಾನಿ ಆಗಿತ್ತು.ಆದರೆ, ಬೆಳೆಹಾನಿ ಆಗಿಲ್ಲ ಎಂದಿದ್ದ ಕಂಪೆನಿ, ವಿಮಾ ಮೊತ್ತ ಬಿಡುಗಡೆ ಮಾಡಲು ನಿರಾಕರಿಸಿತ್ತು.

ಇದರ ವಿರುದ್ಧ ರೈತರು 2005ರಲ್ಲಿ ಜಿಲ್ಲಾ ಗ್ರಾಹಕ ವಾಜ್ಯಗಳ ಪರಿಹಾರ ವೇದಿಕೆಯ ಮೊರೆ ಹೋಗಿದ್ದರು. ಆ ವರ್ಷದ ಬೆಳೆ ಕಟಾವು ವರದಿಯ ಆಧಾರ ಮೇಲೆ ಬೆಳೆ ಹಾನಿ ಆಗಿದೆ ಎನ್ನುವುದನ್ನು ದೃಢೀಕರಿಸಿದ್ದ ವೇದಿಕೆಯು, ವಿಮೆ ಮೊತ್ತ ಬಿಡುಗಡೆ ಮಾಡುವಂತೆ ಕಂಪೆನಿಗೆ ಸೂಚಿಸಿ 2006ರಲ್ಲೇ ಆದೇಶ ನೀಡಿತ್ತು. ಆದರೆ, ಇದರ ವಿರುದ್ಧ ಕಂಪನಿ ರಾಜ್ಯ ಗ್ರಾಹಕರ ವಾಜ್ಯಗಳ ಪರಿಹಾರ ವೇದಿಕೆಗೆ ಮೇಲ್ಮನವಿ ಸಲ್ಲಿಸಿತ್ತು. ಅಲ್ಲಿಯೂ ಕಂಪನಿ ವಿರುದ್ಧವಾಗಿ ಆದೇಶವಾಗಿತ್ತು. ಆಗಲೂ ರೈತರಿಗೆ ಪರಿಹಾರ ನೀಡಲು ಕಂಪೆನಿ ನಿರಾಕರಿಸಿತ್ತು. ಕೋರ್ಟ್‌ ಆದೇಶ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 2012ರಲ್ಲಿ ಕಂಪೆನಿ ವಾರೆಂಟ್ ಜಾರಿಯಾಗಿತ್ತು. ಇದನ್ನು ತೆರವುಗೊಳಿಸಲು ಮತ್ತೆ ಕಂಪನಿ ರಾಜ್ಯ ಗ್ರಾಹಕರ ವಾಜ್ಯಗಳ ಪರಿಹಾರ ವೇದಿಕೆಗೆ ಮೇಲ್ಮನವಿ ಸಲ್ಲಿಸಿತ್ತು. ಅಲ್ಲಿಂದ ಆರಂಭವಾದ ವಿಚಾರಣೆಯು 2018ರ ನ.12ರಂದು ಪೂರ್ಣಗೊಂಡಿದೆ.

ಅಂತಿಮವಾಗಿ ಕಂಪೆನಿ ಪ್ರತಿಯೊಬ್ಬ ರೈತರಿಗೆ ನ್ಯಾಯಾಲಯದ ಖರ್ಚಿನ ರೂಪದಲ್ಲಿ ₨2 ಸಾವಿರ, ಜತೆಗೆ ವಿಮಾ ಮೊತ್ತಕ್ಕೆ ಶೇ 6ರಷ್ಟು ಬಡ್ಡಿ ಸೇರಿಸಿ ಪಾವತಿಸಲು ಒಪ್ಪಿಕೊಂಡಿದೆ. ಇದಕ್ಕಾಗಿ ಜಿಲ್ಲಾ ಗ್ರಾಹಕರ ವಾಜ್ಯಗಳ ಪರಿಹಾರ ವೇದಿಕೆಯಲ್ಲಿ ₨30 ಲಕ್ಷ ಹಣ ಜಮಾ ಮಾಡಿದೆ.

‘ಈಗಾಗಲೇ 28 ಮಂದಿ ರೈತರಿಗೆ ವಿಮೆ ಪರಿಹಾರದ ಚೆಕ್‌ ನೀಡಲಾಗಿದೆ. ಉಳಿದ ರೈತರಿಗೆ ಹಂತ ಹಂತವಾಗಿ ಹಣವನ್ನು ಚೆಕ್ ಮೂಲಕ ನೀಡಲಾಗುವುದು’ ಎಂದು ಜಿಲ್ಲಾ ಗ್ರಾಹಕರ ವಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಸಿ.ಎಚ್. ಸಮಿಉನ್ನಿಸಾ ಹಾಗೂ ವೇದಿಕೆ ಸದಸ್ಯ ಬಸವರಾಜ ಕೆರಿ ತಿಳಿಸಿದರು.

‘ಒಂದೂವರೆ ದಶಕದ ನಂತರ ವಿಮಾ ಪರಿಹಾರ ಬಂದಿದೆ. ಬರಗಾಲದ ಸಂದರ್ಭದಲ್ಲಿ ಈ ಮೊತ್ತವು ಮರುಭೂಮಿಯಲ್ಲಿ ಓಯಾಸಿಸ್ ಕಂಡಂತಾಗಿದೆ’ಎಂದು ಪರಿಹಾರ ಪಡೆದುಕೊಂಡ ಮಾರನಬಸರಿಯ ರೈತ ಸಂಗಪ್ಪ ಹಡಪದ ಹೇಳಿದರು.

ಮಾರನಬಸರಿ ಗ್ರಾಮದ ವೀರಯ್ಯ ಶಾಂತಗೇರಿಮಠ, ಫಕೀರಪ್ಪ ತಳವಾರ, ಫಕೀರಸಾಬ ಮೋತೆಖಾನ, ರಾಮಪ್ಪ ಜಾಲಿಹಾಳ ಸೇರಿದಂತೆ 18 ಮಂದಿ ರೈತರು ಶುಕ್ರವಾರ  ಜಿಲ್ಲಾ ಗ್ರಾಹಕರ ವೇದಿಕೆಯಿಂದ ವಿಮಾ ಪರಿಹಾರದ ಚೆಕ್ ಪಡೆದುಕೊಂಡರು. ರೈತರ ಪರವಾಗಿ ವಕೀಲ ಸಿ.ಜೆ.ಮುದಿಯಪ್ಪನವರ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !