ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲು ಮುನ್ನವೇ ಕೊಳೆತ ಗೋವಿನಜೋಳ

ಕೊರೊನಾ ಹೊಡೆತಕ್ಕೆ ನಲುಗಿದ ಅನ್ನದಾತ, ಲಕ್ಷಾಂತರ ಮೌಲ್ಯದ ಬೆಳೆ ಹಾನಿ
Last Updated 1 ಡಿಸೆಂಬರ್ 2020, 3:45 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಕಷ್ಟಪಟ್ಟು ಬೆಳೆದ ಗೋವಿನಜೋಳದ ರಾಶಿ ಇಟ್ಟಲ್ಲಿಯೇ ಕೊಳೆತು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ ಪರಿಸ್ಥಿತಿ ಸಮೀಪದ ಉಂಡೇನಹಳ್ಳಿ ಗ್ರಾಮದಲ್ಲಿ ಉಂಟಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಮಳೆ ಮತ್ತು ನೀರಾವರಿ ಆಶ್ರಿತ ಭೂಮಿಯಲ್ಲಿ ಬೆಳೆದಿದ್ದ ಗೋವಿನಜೋಳದ ಒಕ್ಕಲಿಗೆ ರೈತರು ತಯಾರಿ ನಡೆಸಿದ್ದರು. ಅಷ್ಟರೊಳಗಾಗಿ ಕೋವಿಡ್‌ ದಾಂಗುಡಿ ಇಟ್ಟಿದ್ದರಿಂದ ದೇಶದಾದ್ಯಂತ ಲಾಕ್‍ಡೌನ್ ಘೋಷಣೆಯೊಂದಿಗೆ ರೈಲ್ವೆ ಸಂಚಾರವೂ ಬಂದ್ ಆಯಿತು.

ತಾಲ್ಲೂಕಿನಲ್ಲಿ ಬೆಳೆಯುವ ಗೋವಿನಜೋಳ ಹೆಚ್ಚಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ರಫ್ತು ಆಗುತ್ತಿತ್ತು. ಆದರೆ, ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದರಿಂದ ಖರೀದಿದಾರರೂ ಮುಂದೆ ಬರಲಿಲ್ಲ. ಹೀಗಾಗಿ ಬೆಲೆ ದಿಢೀರನೆ ಪಾತಾಳಕ್ಕೆ ಕುಸಿಯಿತು. ಇದರಿಂದಾಗಿ ಕಂಗೆಟ್ಟ ರೈತರು ಉತ್ತಮ ದರ ಬಂದಾಗ ಮಾರಾಟ ಮಾಡಲು ನಿರ್ಧರಿಸಿ ಕಟಾವು ಮಾಡಿದ ಬೆಳೆಯನ್ನು ಹೊಲದಲ್ಲಿಯೇ ರಾಶಿ ಹಾಕಿ ತಾಡಪತ್ರಿಯಿಂದ ಮುಚ್ಚಿಟ್ಟರು.

ಏಪ್ರಿಲ್‌ನಿಂದ ಆರಂಭವಾದ ಮಳೆ ಅಕ್ಟೋಬರ್‌ವರೆಗೆ ಸುರಿದಿದ್ದರಿಂದ ಒಕ್ಕಲಿಗೆ ಅವಕಾಶವನ್ನೇ ಕೊಡಲಿಲ್ಲ. ಅಲ್ಲದೆ ಹಕ್ಕಿ ಜ್ವರದ ಭಯವೂ ಹಬ್ಬಿದ್ದರಿಂದ ಗೋವಿನಜೋಳದ ರಫ್ತು ನೆಲಕಚ್ಚಿ ಅದನ್ನು ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಯಿತು.

ಇದೀಗ ಒಳ್ಳೆ ಬೆಲೆ ಬಂದಿದ್ದು ಮುಚ್ಚಿದ ರಾಶಿಯನ್ನು ರೈತರಾದ ಸುರೇಶ ಹುಲಕೋಟಿ, ಅಜಯ ಕರಿಗೌಡರ, ಆನಂದ ಕತ್ತೇಬೆನ್ನೂರ, ಮಂಜುನಾಥ ಕರಿಗೌಡ್ರ ತೆಗೆದು ನೋಡಿದಾಗ ಅವರಿಗೆ ಆಘಾತ ಕಾದಿತ್ತು. ಇಡೀ ರಾಶಿಯೇ ಕೊಳೆತು ಹಾಳಾಗಿದುದ್ದನ್ನು ನೋಡಿ ಕಣ್ಣೀರು ಸುರಿಸಿದರು.

ನಿರಂತರ ಮಳೆಗೆ ರಾಶಿಯೊಳಗೆ ನೀರು ಹೊಕ್ಕು ಸುರೇಶ ಅವರಿಗೆ ಸೇರಿದ 25 ಎಕರೆಯಲ್ಲಿನ ಫಸಲು ಸಂಪೂರ್ಣ ಕೊಳೆತು ಅಂದಾಜು ₹8 ಲಕ್ಷ ಹಾನಿ ಉಂಟಾಗಿದೆ. ಅಜಯ ಕರಿಗೌಡ್ರ ಅವರ ಏಳು ಎಕರೆ ಮತ್ತು ಮಂಜುನಾಥ ಕರಿಗೌಡ್ರ ಅವರಿಗೆ ಸೇರಿದ ಹತ್ತು ಎಕರೆಯಲ್ಲಿನ ಗೋವಿನಜೋಳವೂ ನಾಶವಾಗಿದ್ದು ಒಟ್ಟು ₹10ರಿಂದ ₹12 ಲಕ್ಷ ನಷ್ಟ ಉಂಟಾಗಿದೆ.

‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗ್ವಾನಜ್ವಾಳ ಬಿಳದಿದ್ವಿ. ಆದರ ಕೋವಿಡ್‌ ನಮ್ಮ ಜೀವನವನ್ನೇ ಹಾಳು ಮಾಡಿತು. ಧಾರಣಿ ಕಡಿಮಿ ಆಗಿದ್ದಲ್ಲದೆ ಸತತ ಮಳಿಗೆ ಪೀಕು ಕೊಳೆತು ಭಾಳ ಲುಕ್ಷಾನ ಆಗೇತ್ರಿ. ಸರ್ಕಾರ ನಮಗೆ ಸಹಾಯ ಮಾಡಬೇಕು’ ಎಂದು ರೈತರು ಮನವಿ ಮಾಡುತ್ತಿದ್ದಾರೆ.

ಪರಿಹಾರಕ್ಕೆ ಆಗ್ರಹ

‘ಸತತ ಮಳಿಗೆ ಒಕ್ಕಲಿ ಮಾಡಲು ಸಾಧ್ಯವಾಗದೆ ನಮ್ಮೂರಿನ ರೈತರ ಗೋವಿನಜೋಳದ ಫಸಲು ಹಾಳಾಗಿ ಲಕ್ಷಾಂತರ ರೂಪಾಯಿ ಹಾನಿ ಆಗಿದೆ. ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು’ ಎಂದು ಗ್ರಾಮದ ಪ್ರಕಾಶ ಹುಲಕೋಟಿ, ಪುಂಡಲೀಕ ಲಮಾಣಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT