ಗುರುವಾರ , ನವೆಂಬರ್ 21, 2019
23 °C
ನಾಲವಾರ ವಲಯದಲ್ಲಿ ದಾಖಲೆ 3250 ಹೆಕ್ಟೇರ್ ಹತ್ತಿ ಬಿತ್ತನೆ

ಹತ್ತಿಗೆ ರೋಗ; ಇಳುವರಿ ಕುಸಿತ ಭೀತಿ

Published:
Updated:
Prajavani

ವಾಡಿ: ನಾಲವಾರ ವಲಯದಲ್ಲಿ ಹತ್ತಿ ಬೆಳೆಗೆ ನಿರಂತರವಾಗಿ ರೋಗ ಬಾಧೆ ಕಾಡುತ್ತಿದ್ದು, ರೈತರಿಗೆ ಇಳುವರಿ ಕುಸಿತದ ಭೀತಿ ಎದುರಾಗಿದೆ.

ಉತ್ತಮ ಲಾಭದ ನಿರೀಕ್ಷೆಯೊಂದಿಗೆ ದೀರ್ಘಾವಧಿಯ ವಾಣಿಜ್ಯ ಬೆಳೆ ಹತ್ತಿಯ ಬೆನ್ನು ಹತ್ತಿದ ರೈತರು ಈಗ ನಷ್ಟದೆಡೆ ಮುಖ ಮಾಡಿದ್ದಾರೆ.

ಹತ್ತಿ ಬೆಳೆಗೆ ಎಲೆ ಚುಕ್ಕಿ ರೋಗ ಹಾಗೂ ತಾಮ್ರ ರೋಗ ಕಾಣಿಸಿಕೊಂಡಿದೆ. ರೋಗ ನಿಯಂತ್ರಣಕ್ಕೆ ದುಬಾರಿ ಔಷಧದ ಬೆನ್ನು ಹತ್ತಿದ್ದ ರೈತರ ಜೇಬು ಖಾಲಿಯಾಯಿತೇ ಹೊರತು ರೋಗ ನಿಯಂತ್ರಣವಾಗಲಿಲ್ಲ.

ನೂರಾರು ಕಾಯಿಗಳನ್ನು ಹೊತ್ತು ಹಚ್ಚ ಹಸುರಾಗಿ ನಳನಳಿಸಬೇಕಾಗಿದ್ದ ಹತ್ತಿ ಗಿಡಗಳು ರೋಗಕ್ಕೆ ಸಿಲುಕಿ ಸೊರಗಿ ಹೋಗುತ್ತಿವೆ. ಚಿಕ್ಕ ಗಾತ್ರದ ಹಿಚುಗಾಯಿಗಳು ರೋಗಕ್ಕೆ ಸಿಲುಕಿ ಅವಧಿಗೂ ಮೊದಲೇ ಒಡೆದು ಹೋಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಚಿತ್ತಾಪುರ ತಾಲ್ಲೂಕಿನಲ್ಲಿ ಈ ಬಾರಿ 8750 ಹೆಕ್ಟೆರ್ ಪ್ರದೇಶದಲ್ಲಿ ಹೈಬ್ರಿಡ್ ಹತ್ತಿ ಬಿತ್ತಲಾಗಿದೆ. ಅದರಲ್ಲಿ ನಾಲವಾರ ವಲಯದಲ್ಲೇ ನಿರೀಕ್ಷೆಗೂ ಮೀರಿ 3250 ಹೆಕ್ಟೆರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಕಪ್ಪು ಹಾಗೂ ಮಸಾರಿ ಪ್ರದೇಶಗಳ ನೀರಾವರಿ ಆಶ್ರಿತ ರೈತರು ಹೈಬ್ರಿಡ್ ಹತ್ತಿ ಮೊರೆ ಹೋಗಿದ್ದರು. ಕೊಲ್ಲೂರು, ತರಕಸಪೇಠ, ಉಳಂಡಿಗೇರಾ, ಯಾಗಾಪೂರ, ನಾಲವಾರ, ರಾಂಪೂರಹಳ್ಳಿ, ಲಾಡ್ಲಾಪುರ, ಹಲಕರ್ಟಿ, ಕಮರವಾಡಿ, ಇಂಗಳಗಿ, ರಾವೂರು ಸೇರಿದಂತೆ ಹಲವರು ಗ್ರಾಮಗಳ ಸಾವಿರಾರು ರೈತರು ಹತ್ತಿ ಬಿತ್ತನೆಗೆ ಮುಂದಾಗಿ ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ.

ಸತತ ರೋಗ ಬಾಧೆ ಹಾಗೂ ಮಂಜು ಕವಿದ ವಾತಾವರಣದಿಂದ ಗಿಡಗಳಲ್ಲಿನ ಎಲೆ, ಮೊಗ್ಗು, ಹೂವು ಮತ್ತು ಕಾಯಿಗಳು ಉದುರಲಾರಂಭಿಸಿವೆ. ಇರುವ ಅಲ್ಪ ಕಾಯಿಗಳು ಬಿರಿದು ಹತ್ತಿ ಬಿಡಿಸಿಕೊಂಡರೆ ಹತ್ತಿ ಗಿಡಗಳ ಕತೆ ಮುಗಿದಂತೆ ಎನ್ನುವಂತಾಗಿದೆ.

ಹೆಚ್ಚಿನ ಪ್ರಮಾಣದಲ್ಲಿ ಔಷಧಿ ಸಿಂಪಡಿಸಿ ಹಣ ಖರ್ಚು ಮಾಡಿಕೊಂಡು ಕೈ ಸುಟ್ಟುಕೊಂಡಿದ್ದಾರೆ. ಬೇರೆ ಬೆಳೆ ಬಿತ್ತಿದ್ದರೆ ತಂಟೆಯೇ ಇರಲಿಲ್ಲ ಎಂದು ನೊಂದುಕೊಳ್ಳುತ್ತಿದ್ದಾರೆ. ಹತ್ತಿ ಬೆಳೆಗೆ ನಾಲ್ಕೈದು ಬಾರಿ ದುಬಾರಿ ಔಷಧಿ ಸಿಂಪಡಿಸಿ ವಿಪರೀತ ಖರ್ಚು ಮಾಡಿ ಸೋತಿದ್ದೇವೆ. ಹೊಲದಲ್ಲಿ ಹೂವು, ಮೊಗ್ಗು ನೆಲಕ್ಕುದುರಿ ನಷ್ಟ ಹೆಗಲೇರಿದೆ. ಇಳುವರಿ ಬಾರದಿದ್ದರೆ ಪರಿಸ್ಥಿತಿ ಗಂಭೀರವಾಗುತ್ತದೆ' ಎಂದು ಹಲಬುತ್ತಿದ್ದಾರೆ.

*
ದುಬಾರಿ ಬೀಜ ತಂದು ಬಿತ್ತನೆ ಮಾಡಿದ್ದೇನೆ. ರಸಗೊಬ್ಬರ, ಕೀಟನಾಶಕದ ಹೆಸರಿನಲ್ಲಿ ಹಣ ಸುರಿದಿದ್ದೇನೆ. ಆದರೆ ಸಮರ್ಪಕ ಬೆಳೆಯಿಲ್ಲದೇ ನಷ್ಟವಾಗುವ ಭೀತಿ ಎದುರಾಗಿದೆ.
-ಅನೀಲಗೌಡ, ಬೆನಕನಳ್ಳಿ ರೈತ.

ಪ್ರತಿಕ್ರಿಯಿಸಿ (+)