ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ದ್ವಿಶತಕದ ಗಡಿ ದಾಟಿದ ಸೋಂಕಿತರು

ಭಾನುವಾರ ಸಂಪೂರ್ಣ ಲಾಕ್‌ಡೌನ್‌: ಶನಿವಾರವೇ ಖರೀದಿ ಭರಾಟೆ
Last Updated 4 ಜುಲೈ 2020, 15:31 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದ್ವಿಶತಕದ ಗಡಿ ದಾಟಿದ್ದು, ಶನಿವಾರ ಹೊಸದಾಗಿ 4 ಪಾಸಿಟಿವ್‌ ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 203ಕ್ಕೆ ಏರಿಕೆಯಾಗಿದೆ.

ಶನಿವಾರ ಸೋಂಕು ದೃಢಪಟ್ಟವರಲ್ಲಿ 1 ವರ್ಷದ ಹೆಣ್ಣುಮಗು (ಪಿ–19886), 4 ವರ್ಷದ ಬಾಲಕಿಯೂ (ಪಿ–19887) ಸೇರಿದ್ದು, ಇವರಿಗೆ ನರಗುಂದ ಗಾಡಿ ಓಣಿ ನಿವಾಸಿ 39 ವರ್ಷದ ಸೋಂಕಿನ ಪುರುಷನ (ಪಿ-15320) ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.

ಹಾವೇರಿ ಜಿಲ್ಲೆಯಿಂದ ಜೂನ್ 26 ರಂದು ಜಿಲ್ಲೆಗೆ ಬಂದ ರೋಣ ತಾಲ್ಲೂಕಿನ ಬೆಳವಣಕಿ ಗ್ರಾಮದ 38 ವರ್ಷದ ಪುರುಷನಿಗೆ (ಪಿ-19888) ಸೋಂಕು ದೃಢಪಟ್ಟಿದೆ.

ಗದಗ-ಬೆಟಗೇರಿಯ ನರಸಾಪುರದ ರಂಗಪ್ಪಜ್ಜನ ಮಠದ ಹತ್ತಿರದ ನಿವಾಸಿ 60 ವರ್ಷದ ಸೋಂಕಿತ ಮಹಿಳೆಯ (ಪಿ-18271) ಸಂಪರ್ಕದಿಂದ ಅದೇ ಪ್ರದೇಶದ 73 ವರ್ಷದ ಪುರುಷನಿಗೆ (ಪಿ-19886) ಸೋಂಕು ದೃಢಪಟ್ಟಿದೆ.

ಇಲ್ಲಿನ ಕೋವಿಡ್‌ ಆಸ್ಪತ್ರೆಯಿಂದ ಗುಣಮುಖರಾಗಿ ಮೂವರು ಶನಿವಾರ ಬಿಡುಗಡೆಗೊಂಡಿದ್ದು, ಮನೆಗೆ ಮರಳಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ. ಇದುವರೆಗೆ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ. ಸದ್ಯ 115 ಸಕ್ರಿಯ ಪ್ರಕರಣಗಳಿವೆ.

ಖರೀದಿ ಭರಾಟೆ: ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರುವುದರಿಂದ ಶನಿವಾರವೇ ಗದಗ ಸೇರಿದಂತೆ ಜಿಲ್ಲೆಯಾದ್ಯಂತ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು.

ಜನರು ದಿನಸಿ, ಮೀನು, ಮಾಂಸ, ಹಣ್ಣು ತರಕಾರಿ ಖರೀದಿಸಲು ಮಾರುಕಟ್ಟೆಗೆ ಮುಗಿಬಿದ್ದಿದ್ದರಿಂದ ದಟ್ಟಣೆ ಉಂಟಾಗಿತ್ತು. ಹೆಚ್ಚಿನವರು ಮಾಸ್ಕ್‌ ಧರಿಸಿರಲಿಲ್ಲ. ಅಂತರ ಪಾಲಿಸುವುದನ್ನು ಮರೆತು ಜನರು ಖರೀದಿಯಲ್ಲಿ ಮುಳುಗಿದ್ದರು. ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ಅಂಗಡಿಗಳ ಮುಂದೆ ಅಂತರ ಪಾಲಿಸಲು ಚೌಕಾಕಾರದಲ್ಲಿ ಗುರುತು ಮಾಡಲಾಗಿತ್ತು. ಆದರೆ, ಈಗ ಆ ಗುರುತೂ ಮಾಯವಾಗಿದೆ.

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಜನರು ಮುಂಜಾಗ್ರತಾ ಕ್ರಮಗಳನ್ನು ಪಾಲಿಸದಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಮನೆಗಳಿಂದ ಹೊರಗೆ ಬಂದು ಓಡಾಡುತ್ತಿರುವುದು ಕೂಡ ಆತಂಕ ಹೆಚ್ಚಿಸಿದೆ. ಜುಲೈ.1ರವರೆಗೆ ಜಿಲ್ಲಾಡಳಿತವು ಒಟ್ಟು 57 ಪ್ರದೇಶಗಳನ್ನು ಕಂಟೈನ್ಮೆಂಟ್‌ ವಲಯಗಳಾಗಿ ಘೋಷಿಸಿದೆ. ಜು.3ರವರೆಗೆ ಜಿಲ್ಲೆಯಲ್ಲಿ ಒಟ್ಟು 199 ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT