ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಲಾಕ್‌ಡೌನ್‌ ಸಡಿಲಿಕೆ; ಹೆಚ್ಚಿದ ಜನರ ಓಡಾಟ

10 ದಿನಗಳಿಂದ ಹೊಸ ಪ್ರಕರಣ ಇಲ್ಲ; ಸಾರ್ವಜನಿಕರು ತುಸು ನಿರಾಳ
Last Updated 7 ಮೇ 2020, 14:12 IST
ಅಕ್ಷರ ಗಾತ್ರ

ಗದಗ: ಲಾಕ್‌ಡೌನ್‌ ಸಡಿಲಿಕೆಯಾದ ಬೆನ್ನಲ್ಲೇ ಜಿಲ್ಲೆಯಾದ್ಯಂತ ವಾಹನ ಮತ್ತು ಜನರ ಸಂಚಾರ ಹೆಚ್ಚಿದೆ. ದಿನಸಿ, ತರಕಾರಿ ಸೇರಿದಂತೆ ಅಗತ್ಯವಸ್ತುಗಳ ಖರೀದಿ ಸಂದರ್ಭದಲ್ಲಿ ಜನರು ಅಂತರ ಪಾಲಿಸುವುದನ್ನು ನಿರ್ಲಕ್ಷ್ಯಿಸುತ್ತಿದ್ದಾರೆ.

ಜಿಲ್ಲಾಕೇಂದ್ರದಲ್ಲಿ ಕಂಟೈನ್‌ಮೆಂಟ್‌ ಪ್ರದೇಶ ಹೊರತುಪಡಿಸಿ ಉಳಿದೆಡೆ ಸಾರ್ವಜನಿಕರ ಮುಕ್ತ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಹೊರ ಜಿಲ್ಲೆ, ರಾಜ್ಯಗಳಿಂದ ಜಿಲ್ಲೆಗೆ ಬರುತ್ತಿರುವ ಕಾರ್ಮಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ, ನಂತರ, ಮನೆಯಲ್ಲೇ ಪ್ರತ್ಯೇಕ ನಿಗಾ ವ್ಯವಸ್ಥೆಯಲ್ಲಿರುವಂತ ಸೂಚಿಸಿ ಗ್ರಾಮಗಳಿಗೆ ಕಳುಹಿಸಲಾಗುತ್ತಿದೆ.
ನಗರದ ಒಳಗೆ ಪ್ರಮುಖ ವೃತ್ತಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವು ಮಾಡಲಾಗಿದ್ದು, ಅಲ್ಲಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಜಿಲ್ಲೆಯ ಗಡಿಯಲ್ಲಿನ ಚೆಕ್‌ಪೋಸ್ಟ್‌ಗಳನ್ನು ಹೊರತುಪಡಿಸಿ, ಉಳಿದೆಡೆ ವಾಹನ ತಪಾಸಣೆ ಕಡಿಮೆಯಾಗಿದೆ. ಮಾಸ್ಕ್‌ ಹಾಕದೆ ರಸ್ತೆಗಿಳಿಯುವವರಿಗೆ ನಗರಸಭೆ ಸಿಬ್ಬಂದಿ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.

ಸದ್ಯ ಜಿಲ್ಲೆ ‘ಕಿತ್ತಳೆ ವಲಯ’ದಲ್ಲಿದ್ದು, ಲಾಕ್‌ಡೌನ್‌ ಸಡಿಲಿಕೆ ನೀಡಲಾಗಿದ್ದರೂ, ಜಿಲ್ಲೆಯ ಒಳಗೆ ಮತ್ತು ಅಂತರ ಜಿಲ್ಲೆ ಬಸ್‌ ಸಂಚಾರವನ್ನು ನಿರ್ಬಂಧಿಸಲಾಗಿದೆ. ರೆಸ್ಟೊರೆಂಟ್‌, ಬಾರ್ ಸೇರಿ ಆತಿಥ್ಯ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಮೆರವಣಿಗೆ, ಸಭೆ, ಸಮಾರಂಭ, ಸಂತೆ, ಜಾತ್ರೆ, ಸಮ್ಮೇಳನ, ಸಮಾವೇಶ, ಧಾರ್ಮಿಕ ಉತ್ಸವ, ಉರುಸು, ಕ್ರೀಡಾಕೂಟ, ಬೇಸಿಗೆ ಶಿಬಿರ ಸೇರಿದಂತೆ ಜನರು ಸೇರುವ ಎಲ್ಲ ಸಮಾವೇಶಗಳಿಗೆ ನಿರ್ಬಂಧ ಹೇರಲಾಗಿದೆ.

10 ದಿನಗಳಿಂದ ಹೊಸ ಪ್ರಕರಣ ಇಲ್ಲ

ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಹೊಸ ಕೊರೊನಾ ಪಾಸಿಟಿವ್‌ ಪ್ರಕರಣ ವರದಿಯಾಗದಿರುವುದು ಜಿಲ್ಲಾಡಳಿತ ಮತ್ತು ಸಾರ್ವಜನಿಕರಲ್ಲಿ ತುಸು ಸಮಾಧಾನ ತಂದಿದೆ. ಗದುಗಿನ 75 ವರ್ಷದ ವೃದ್ಧರೊಬ್ಬರಿಗೆ (ಪಿ-514) ಏ.28ರಂದು ಸೋಂಕು ದೃಢಪಟ್ಟಿತ್ತು. ಆ ನಂತರ ಯಾವುದೇ ಪಾಸಿಟಿವ್‌ ಪ್ರಕರಣ ವರದಿಯಾಗಿಲ್ಲ.

ಇದುವರೆಗೆ ಜಿಲ್ಲೆಯಲ್ಲಿ ಒಟ್ಟು ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಲ್ಲಿ ಏ. 6ರಂದು 80 ವರ್ಷದ ವೃದ್ಧೆಗೆ (ಪಿ–166) ಮೊದಲ ಬಾರಿ ಸೋಂಕು ದೃಢಪಟ್ಟಿತ್ತು. ಏ.8ರಂದು ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದಾಗಿ 8 ದಿನಗಳು ಕಳೆದ ನಂತರ, ಅವರ ಸಂಪರ್ಕಕ್ಕೆ ಬಂದ 59 ವರ್ಷದ ಮಹಿಳೆಗೆ (ಪಿ–304) ಸೋಂಕು ಇರುವುದು ದೃಢಪಟ್ಟಿತ್ತು. ಇವರ ದ್ವಿತೀಯ ಸಂಪರ್ಕಕ್ಕೆ ಬಂದ 42 ವರ್ಷದ ಪುರುಷನಿಗೆ (ಪಿ–370) ಏ. 18ರಂದು ಸೋಂಕು ದೃಢಪಟ್ಟಿತ್ತು. ಇವರ ದ್ವಿತೀಯ ಸಂಪರ್ಕಕ್ಕೆ ಬಂದ 24 ವರ್ಷದ ಯುವಕನಿಗೆ (ಪಿ–396) ಏ. 20ರಂದು ಸೋಂಕು ದೃಢಪಟ್ಟಿದೆ. ಇದಾಗಿ 8 ದಿನಗಳ ಬಳಿಕ 75 ವರ್ಷದ ವೃದ್ಧರಿಗೆ (ಪಿ-514) ಸೋಂಕು ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT