ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಫ್ಯೂ: ಊರಿಗೆ ಮರಳಿದ ವಲಸಿಗರು

14 ದಿನಗಳ ಕಾಲ ಲಾಕ್‌ಡೌನ್ ಜಾರಿ; ಬೆಂಗಳೂರು ಬಿಡುತ್ತಿರುವ ಜನರು
Last Updated 28 ಏಪ್ರಿಲ್ 2021, 5:10 IST
ಅಕ್ಷರ ಗಾತ್ರ

ಗದಗ: ಕೋವಿಡ್‌ ಕರ್ಫ್ಯೂ ಜಾರಿಯಿಂದಾಗಿ ಇಂದಿನಿಂದ ಬಸ್‌ ಸಂಚಾರ ಸ್ಥಗಿತಗೊಂಡಿದ್ದು, ಕೆಲಸದ ಸಲುವಾಗಿ ಬೆಂಗಳೂರಿಗೆ ವಲಸೆ ಹೋಗಿದ್ದ ಅನೇಕರು ಮಂಗಳವಾರ ರಾತ್ರಿ ವೇಳೆಗೆ ಸ್ವಂತ ಊರಿಗೆ ಬಂದಿದ್ದಾರೆ. ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಅಲ್ಲಿಂದ ಊರಿಗೆ ಮರಳಿರುವವರ ಬಗ್ಗೆ ಸ್ಥಳೀಯರು ಆತಂಕಗೊಂಡಿದ್ದಾರೆ.

ಖಾಸಗಿ ಬಸ್‌ಗಳನ್ನು ಹೊರತು ಪಡಿಸಿ ಗದಗ ವಿಭಾಗದಿಂದ ಮಂಗಳವಾರ ಬೆಂಗಳೂರಿಗೆ 60 ಸರ್ಕಾರಿ ಬಸ್‌ಗಳು ತೆರಳಿದ್ದವು. ಬಸ್‌ನಲ್ಲಿ ಪ್ರಯಾಣಿಸಲು ಕೋವಿಡ್‌–19 ವರದಿ ಕಡ್ಡಾಯ ಮಾಡಿಲ್ಲದ ಕಾರಣ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ದೇಹದ ತಾಪಮಾನ ಮಾತ್ರ ಪರೀಕ್ಷಿಸಿ, ಅವರಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

‘ಬೆಂಗಳೂರಿನಿಂದ ಗದಗ ಜಿಲ್ಲೆಗೆ ಬರಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಒಟ್ಟು 60 ಬಸ್‌ಗಳನ್ನು ಓಡಿಸಲಾಗಿದೆ. ಮುಂಡರಗಿ ಮತ್ತು ರೋಣದಿಂದ ತಲಾ ಮೂರು ಬಸ್‌ಗಳನ್ನು ಹೆಚ್ಚುವರಿಯಾಗಿ ಕಳಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ತಪಾಸಣೆ ನಡೆಸಿ, ಪ್ರಯಾಣಿಸಲು ಅನುಮತಿ ನೀಡುತ್ತಿದ್ದಾರೆ ಎಂದು ಬಸ್‌ನ ಚಾಲಕ, ನಿರ್ವಾಹಕರು ತಿಳಿಸಿದ್ದಾರೆ. ಬಸ್‌ ಪ್ರಯಾಣಕ್ಕೆ ಕೋವಿಡ್‌–19 ವರದಿ ಕಡ್ಡಾಯ ಮಾಡಿಲ್ಲ’ ಎಂದು ಗದಗ ವಿಭಾಗದ ಸಂಚಾರ ನಿಯಂತ್ರಣ ಅಧಿಕಾರಿ ಜಿ.ಐ.ಬಸವಂತಪುರ ತಿಳಿಸಿದರು.

‘ಸರ್ಕಾರದ ಮಾರ್ಗಸೂಚಿ ಅನ್ವಯ ಬಸ್‌ನಲ್ಲಿರುವ ಸೀಟುಗಳ ಸಂಖ್ಯೆಯಲ್ಲಿ ಶೇ 50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಮೂರು ಆಸನಗಳಿರುವಲ್ಲಿ ಇಬ್ಬರಿಗೆ, ಎರಡು ಆಸನಗಳಿರುವಲ್ಲಿ ಒಬ್ಬರು ಪ್ರಯಾಣಿಸಲು ಅವಕಾಶವಿದೆ. ಪ್ರಯಾಣಿಕರಿಂದ ನಿಗದಿತ ದರವನ್ನಷ್ಟೇ ಪಡೆಯಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಸರ್ಕಾರದ ನಿರ್ದೇಶನದಂತೆ ಪರ ಊರುಗಳಿಂದ ಬರುವವರ ಮೇಲೆ ನಿಗಾ ಇರಿಸುವಂತೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಯಾರಿಗಾದರೂ ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ’ ಎಂದು ಡಿಎಚ್‌ಒ ಡಾ. ಸತೀಶ್‌ ಬಸರಿಗಿಡದ ಅವರು ತಿಳಿಸಿದ್ದಾರೆ.

‘ಪರ ಊರುಗಳಿಂದ ಬರುವವರ ತಪಾಸಣೆಗೆ ಚೆಕ್‌ ಪೋಸ್ಟ್‌ಗಳನ್ನು ಮಾಡಿಲ್ಲ. ಅಲ್ಲದೇ ಬಸ್‌ನಲ್ಲಿ ಪ್ರಯಾಣಿಸಲು ಕೋವಿಡ್‌ ವರದಿ ಕಡ್ಡಾಯವಾಗಿ ಇರಬೇಕು ಎಂದು ಸರ್ಕಾರ ಸುತ್ತೋಲೆ ಕೂಡ ಹೊರಡಿಸಿಲ್ಲ. ಆದ ಕಾರಣ, ಬೆಂಗಳೂರಿನಿಂದ ಊರಿಗೆ ವಾಪಸಾಗುವವರ ಮೇಲೆ ನಿಗಾ ಇಡಲು ಕಳೆದ ಬಾರಿಯಂತೆ ಈ ಸಲ ಕೂಡ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

ಮನೆಯಲ್ಲೇ ಇರಿ: ಡಿಎಚ್‌ಒ ಸೂಚನೆ

ಕೋವಿಡ್‌–19 ಪಾಸಿಟಿವ್‌ ಇರುವ ಜಿಲ್ಲೆಯ 400 ಮಂದಿ ಹೋಂ ಐಸೋಲೇಷನ್‌ನಲ್ಲಿ ಇದ್ದು, ಅವರಲ್ಲಿ ಕೆಲವರು ಹೊರಗೆ ಅಡ್ಡಾಡುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.

‘ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ ಕಳೆದಬಾರಿಯಂತೆ ಸೀಲ್‌ ಅಥವಾ ಬ್ಯಾಂಡ್‌ ಹಾಕಿಲ್ಲ. ಇದರಿಂದಾಗಿ ಕೆಲವು ರೋಗಿಗಳು ಹೊರಗೆ ಅಡ್ಡಾಡುತ್ತಿದ್ದಾರೆ. ಇದು ಸೋಂಕು ಹೆಚ್ಚಲು ಕಾರಣವಾಗುತ್ತಿದೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಹೋಂ ಐಸೋಲೇಷನ್‌ನಲ್ಲಿ ಇರುವವರಿಗೆ ಮನೆಯಲ್ಲೇ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸಿ ಹೊರಗೆ ಅಡ್ಡಾಡಿದ್ದು ಕಂಡುಬಂದರೆ ಸಾರ್ವಜನಿಕರು ತಹಶೀಲ್ದಾರ್‌ ಅಥವಾ ಪೊಲೀಸರಿಗೆ ಮಾಹಿತಿ ನೀಡಿದರೆ ಮುಂದಿನ ಕ್ರಮ ವಹಿಸಲಾಗುವುದು’ ಎಂದು ಡಿಎಚ್ಒ ಡಾ. ಸತೀಶ್‌ ಬಸರಿಗಿಡದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT