ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಲ್:‌ ಅಂಗಡಿ ತೆರೆಯೋಕೆ ಅವಕಾಶ ಕೊಡ್ರೀ

ನಾಲ್ಕು ಲಕ್ಷ ಸಾಲ ಐತಿ; ಮನ್ಯಾಗ 6 ಜನ ಅದಿವಿ
ಅಕ್ಷರ ಗಾತ್ರ

ನರೇಗಲ್:‌ ‘ನಾಲ್ಕು ಲಕ್ಷ ಸಾಲ ಐತಿ, ಮನ್ಯಾಗ ಆರು ಜನ; ಬೇಕರಿ ಅಂಗಡಿ ವ್ಯಾಪರದ ಮ್ಯಾಗ ನಂಬಿ ಜೀವನ ನಡೆಸ್ತಾ ಇದಿವಿ. ಕೈಮುಗಿದು ಕೇಳ್ತಿನಿ ನಮ್ಗ ಅಂಗಡಿ ತೆರೆಯೋಕೆ ಅವಕಾಶ ಮಾಡಿಕೊಡ್ರೀʼ ಎಂದು ಗದಗ ಜಿಲ್ಲೆಯ ನರೇಗಲ್‌ ಪಟ್ಟಣದ ಬೇಕರಿ ಅಂಗಡಿ ವ್ಯಾಪರಸ್ಥ ಶಿವಕುಮಾರ ನಾಗಪ್ಪ ಮುಳಗುಂದ ಅಧಿಕಾರಿಗಳಿಗೆ ಶನಿವಾರ ಮನವಿ ಮಾಡಿಕೊಂಡರು.

ಕದಾ ಹಾಕಿದ್ದ ಬೇಕರಿ ಅಂಗಡಿಯ ಮುಂದೆ ಬ್ರೆಡ್‌ ಹಾಗೂ ಇತರೇ ಬೇಕರಿ ತಿನಸುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಅವರು ಕಣ್ಣೀರು ಹಾಕುವ ಮೂಲಕ ಅಳಲು ತೋಡಿಕೊಂಡರು. 25 ವರ್ಷಗಳಿಂದ ಬೇಕರಿ ವ್ಯಾಪರದ ಮೇಲೆ ಅವಲಂಬನೆಯಾಗಿ ಪೂರ್ಣ ಕುಟುಂಬ ಜೀವನ ನಡೆಸುತ್ತಿದ್ದೇವೆ. ದುಪ್ಪಟ್ಟಾಗಿರುವ ಅಂಗಡಿ ಬಾಡಿಗೆ ಕಟ್ಟುತ್ತಿರುವೆ, ಮನೆ ಕಟ್ಟಿಸಲು ನಾಲ್ಕು ಲಕ್ಷ ಸಾಲ ಮಾಡಿರುವೆ ಅದರ ಕಂತುಗಳನ್ನು ಕಟ್ಟುವುದು ಹಾಗೂ ಬೆಲೆ ಏರಿಕೆಯ ನಡುವೆ ಮನೆಯ ಆಗುಹೋಗುಗಳ ನಿರ್ವಹಣೆ ಮಾಡುವುದು ಕಷ್ಟದ ಕೆಲಸವಾಗಿದೆ ಎಂದರು.

ವಾರಂತ್ಯದಲ್ಲಿ ಬೇರೆ-ಬೇರೆ ಊರುಗಳಿಗೆ ಪ್ರಯಾಣ ಮಾಡುವ ಜನರಿಂದ ವ್ಯಾಪರ ಆಗುತ್ತದೆ. ಅದರ ಜೊತೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ಜನರು ಬ್ರೆಡ್‌ ತೆಗೆದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಅಂಗಡಿಗೆ ಬರುತ್ತಾರೆ. ಆದರೆ ನಮಗೆ ವ್ಯಾಪಾರ ಮಾಡಲು ಅವಕಾಶ ನೀಡದೇ ಇರುವುದರಿಂದ ಬದುಕಿನ ಮೇಲೆ ಬರೆ ಎಳೆದಂತಾಗಿದೆ ಎಂದರು.

ಬೇಕರಿಯಲ್ಲಿ ಕೆಲವೊಂದು ತಿನಿಸುಗಳನ್ನು ಬಹಳ ದಿನಗಳ ವರೆಗೆ ಇಟ್ಟುಕೊಳ್ಳಲು ಆಗುವುದಿಲ್ಲ. ತಿನಿಸುಗಳನ್ನು ಸಿದ್ಧಪಡಿಸಲು ತಂದಿರುವ ವಸ್ತುಗಳು ಸಹ ಸಂಗ್ರಹಿಸಿ ಇಟ್ಟುಕೊಳ್ಳಲು ಆಗುವುದಿಲ್ಲ. ನಿಗದಿತ ಅವಧಿಯ ಒಳಗೆ ಮಾರಾಟ ಮಾಡದೇ ಇದ್ದರೆ ನಷ್ಟವಾಗುತ್ತದೆ ಎಂದರು.

ಅಧಿಕಾರಿಗಳಿಗೆ ವ್ಯಾಪಾರಕ್ಕೆ ಅನಕೂಲ ಮಾಡಿಕೊಡಿ ಎಂದು ಕೇಳಿದರೆ, ನಾವು ಸರ್ಕಾರದ ಆದೇಶದಂತೆ ನಡೆದುಕೊಳ್ಳುತ್ತೇವೆ. ಒತ್ತುವ ಬಂಡಿ ಮೂಲಕ ವ್ಯಾಪಾರ ಮಾಡಿ ಎಂದು ಸಲಹೆ ನೀಡುತ್ತಾರೆ. ಆದರೆ ಬೇಕರಿ ತಿನಿಸುಗಳನ್ನು ಒತ್ತುವ ಗಾಡಿಯಲ್ಲಿ ಬಿಸಿಲಿಗೆ ತೆಗೆದುಕೊಂಡು ಹೋದರೆ ಸಂಪೂರ್ಣವಾಗಿ ಕರಗಿ ಹೋಗುತ್ತವೆ, ಕೆಲವೊಂದು ಗುಣಮಟ್ಟವನ್ನು ಕಳೆದುಕೊಳ್ಳುತ್ತವೆ ಆದಕಾರಣ ಅಂಗಡಿಯಲ್ಲಿಯೇ ಇದ್ದುಕೊಂಡು ವ್ಯಾಪರ ಮಾಡಲು ನಮಗೆ ಅನಕೂಲ ಮಾಡಿಕೊಡಲು ಸರ್ಕಾರ ಹಾಗೂ ಅಧಿಕಾರಿಗಳು ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT