ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕರ್ಫ್ಯೂ: ಜನತೆಗೆ ವಿವಿ ‘ನೆರವು’

ಆಪ್ತಸಮಾಲೋಚನೆ, ರಕ್ತದಾನಕ್ಕೆ ಪ್ರೋತ್ಸಾಹ, ನಿತ್ಯವೂ ಅನ್ನದಾನದ ಸಂಕಲ್ಪ
Last Updated 30 ಏಪ್ರಿಲ್ 2021, 3:23 IST
ಅಕ್ಷರ ಗಾತ್ರ

ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯವು ಕೋವಿಡ್‌ ಕರ್ಫ್ಯೂ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡುವ ಉದ್ದೇಶದಿಂದ ‘ನೆರವು’ ಯೋಜನೆ ಪ್ರಾರಂಭಿಸಿದ್ದು, ಒಂದೇ ಸೂರಿನಡಿ ಹಲವು ಸೇವೆಗಳನ್ನು ಒದಗಿಸಲು ಸಜ್ಜಾಗಿದೆ.

ಆಪ್ತಸಮಾಲೋಚನೆ ಸೌಲಭ್ಯ, ಅವಶ್ಯಕತೆ ಇರುವವರಿಗೆ ಆಹಾರ ಪೂರೈಕೆ ಜತೆಗೆ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡುವಂತೆ ಪ್ರೋತ್ಸಾಹ, ಪ್ಲಾಸ್ಮ ದಾನ ಕುರಿತು ಜಾಗೃತಿ ಮೂಡಿಸಲಿದೆ. ಇವೆಲ್ಲದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ‘ನೆರವು’ ಸಹಾಯಕೇಂದ್ರ ನೆರವಾಗಲಿದೆ.

‘ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಇತರೆ ವಿವಿಗಳಿಗಿಂತ ಭಿನ್ನವಾಗಿದ್ದು, ಕೋವಿಡ್‌–19ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮೂಕಪ್ರೇಕ್ಷಕನಂತೆ ಕೂರಲು ಸಾಧ್ಯವಿಲ್ಲ. ಕಠಿಣ ಸಂದರ್ಭದಲ್ಲೂ ಸೇವೆಗೆ ಧುಮುಕಬೇಕು ಎಂಬ ಉದ್ದೇಶದಿಂದ ವಿಶ್ವವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳೆಲ್ಲರೂ ಸೇರಿ ನಿರ್ಧಾರ ಮಾಡಿದಾಗ ಹುಟ್ಟಿಕೊಂಡ ಪರಿಕಲ್ಪನೆಯೇ ‘ನೆರವು’’ ಎಂದು ಕುಲಪತಿ ಪ್ರೊ.ವಿಷ್ಣುಕಾಂತ ಎಸ್‌.ಚಟಪಲ್ಲಿ ತಿಳಿಸಿದರು.

‘ಮೇ1ರಿಂದ 18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವವರು ಇದೇ ವಯಸ್ಸಿನವರು. ವೈದ್ಯಕೀಯ ವಿಶ್ಲೇಷಣೆ ಪ್ರಕಾರ ಲಸಿಕೆ ಪಡೆದ ಎರಡು ತಿಂಗಳವರೆಗೆ ರಕ್ತದಾನ ಮಾಡುವಂತಿಲ್ಲ. ಈ ಸಂದರ್ಭದಲ್ಲಿ ರಕ್ತದ ಕೊರತೆ ಉಂಟಾಗಲಿದೆ. ಹಾಗಾಗಿ, ರಕ್ತದಾನ ಮಾಡಿದ ನಂತರ ಲಸಿಕೆ ಪಡೆಯುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅದಕ್ಕಾಗಿಯೇ ಗೂಗಲ್‌ ಫಾರ್ಮ್ಯಾಟ್‌ ಮಾಡಿ ಎಲ್ಲ ಕಡೆಗಳಲ್ಲಿ ಹಂಚಿದ್ದೇವೆ. ಆಸಕ್ತರು ಹೆಸರು ನೋಂದಾಯಿಸಬಹುದು. ಜತೆಗೆ ಕೋವಿಡ್‌ನಿಂದ ಗುಣಮುಖರಾಗಿರುವವರ ಬಳಿ ಪ್ಲಾಸ್ಮಾ ದಾನ ಮಾಡುವಂತೆಯೂ ವಿನಂತಿಸಲಾಗುವುದು’ ಎಂದು ಅವರು ಹೇಳಿದರು.

ಕೋವಿಡ್‌ ಕರ್ಫ್ಯೂ ಸಂದರ್ಭದಲ್ಲಿ ಅವಶ್ಯಕತೆ ಇರುವವರಿಗೆ ಇಂದಿನಿಂದ ನಿತ್ಯವೂ ಅನ್ನದಾನ ಮಾಡುವ ಯೋಜನೆಯನ್ನು ವಿಶ್ವವಿದ್ಯಾಲಯ ಹಾಕಿಕೊಂಡಿದೆ. ಸೋಂಕು ತಗುಲಿ ಜಿಲ್ಲಾ ಆಸ್ಪತ್ರೆಗೆ ಸೇರಿದವರಿಗೆ ಆಹಾರದ ಸಮಸ್ಯೆ ಇರುವುದಿಲ್ಲ. ಆದರೆ, ಅವರನ್ನು ನೋಡಿಕೊಳ್ಳಲು ಬರುವವರಿಗೆ ಊಟ ಸಿಗುವುದಿಲ್ಲ. ಈ ಕಾರಣದಿಂದ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಒಟ್ಟು 800 ಊಟ, ತಿಂಡಿಯನ್ನು ವಿವಿ ಪೂರೈಸಲಿದೆ. ಕೋವಿಡ್‌ ಕರ್ಫ್ಯೂ ಮುಂದುವರಿದರೆ ಈ ಯೋಜನೆ ಕೂಡ ಮುಂದುವರಿಯಲಿದೆ. ಇದಕ್ಕೆ ದಾನಿಗಳು ಕೂಡ ಕೈ ಜೋಡಿಸಬಹುದು. ಹಣ ಹೊರತು ಪಡಿಸಿ ದಿನಸಿ ರೂಪದಲ್ಲಿ ಸಹಾಯ ಮಾಡಬಹುದು.

ಲಾಕ್‌ಡೌನ್‌ ಅವಧಿಯಲ್ಲಿ ಮನುಷ್ಯರ ಕಷ್ಟಗಳಿಗೆ ಸ್ಪಂದಿಸುವುದರ ಜತೆಗೆ ಜಾನುವಾರುಗಳಿಗೂ ಮೇವು ಒದಗಿಸುವ ಸಂಕಲ್ಪವನ್ನು ವಿವಿ ಹೊಂದಿದ್ದು, ಅದಕ್ಕಾಗಿ ಮೇವು ಬ್ಯಾಂಕ್‌ ಕೂಡ ನಿರ್ಮಿಸಿದೆ.

ಸಹಾಯವಾಣಿ: 7795100729, 7975202206

ಕೋವಿಡ್‌ ಕರ್ಫ್ಯೂ ಅವಧಿಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುವುದು ನಮ್ಮ ಕರ್ತವ್ಯ. ಸಾಮಾಜಿಕ ಜವಾಬ್ದಾರಿಯಿಂದ ವಿಶ್ವವಿದ್ಯಾಲಯ ಅಳಿಲು ಸೇವೆಗೆ ಮುಂದಾಗಿದೆ.

- ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ, ಕುಲಪತಿ

***

ಇದೇನು ದೊಡ್ಡ ಕೆಲಸವಲ್ಲ. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ತೋರುತ್ತಿರುವ ಜನಪರ ಕಾಳಜಿಯಿಂದ ಇತರರು ಸ್ಫೂರ್ತಿಗೊಂಡರೆ ನಮ್ಮ ಸೇವೆಗೂ ಸಾರ್ಥಕ್ಯ

- ಡಾ. ಬಿ.ಎಲ್‌.ಲಕ್ಕಣ್ಣನವರ, ಕುಲಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT