ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರ ಓಡಾಟಕ್ಕೆ ಬೇಕಿದೆ ತಡೆ

ಲಾಕ್‌ಡೌನ್‌’ಇನ್ನೂ ಗಂಭೀರವಾಗಿ ಪರಿಗಣಿಸದ ಜನರು; ಜಿಲ್ಲಾಡಳಿತ ಕ್ರಮ
Last Updated 29 ಮಾರ್ಚ್ 2020, 15:35 IST
ಅಕ್ಷರ ಗಾತ್ರ

ಗದಗ: ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್‌ ಇಲಾಖೆ ಕೈಗೊಂಡ ಕಠಿಣ ಕ್ರಮಗಳಿಂದ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಘೋಷಿಸಲಾಗಿರುವ ‘ಲಾಕ್‌ಡೌನ್‌’ಗೆ ಜಿಲ್ಲೆಯ ಜನರಿಂದ ನಿಧಾನವಾಗಿ ಸ್ಪಂದನೆ ವ್ಯಕ್ತವಾಗುತ್ತಿದೆ.

ಎಷ್ಟೇ ಬಿಗಿ ಕ್ರಮ ಕೈಗೊಂಡರೂ, ನೆಪಗಳನ್ನು ಹೇಳಿಕೊಂಡು ರಸ್ತೆಗಿಳಿಯುವವರ ಸಂಖ್ಯೆ ಹೆಚ್ಚುತ್ತಿರುವುದು, ಈ ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ.

ಶುಕ್ರವಾರ ಮತ್ತು ಶನಿವಾರಕ್ಕೆ ಹೋಲಿಸಿದರೆ, ಭಾನುವಾರ ಜಿಲ್ಲೆಯಲ್ಲಿ ಜನರ ಓಡಾಟ ಕಡಿಮೆ ಇತ್ತು. ಆದರೆ, ತರಕಾರಿ ಖರೀದಿಗಾಗಿ ಬೆಳಿಗ್ಗೆ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಜನರು ಮುಗಿಬಿದ್ದಿದ್ದರು. ವ್ಯಾಪಾರಿಗಳು ಮನೆ ಬಾಗಿಲಿಗೆ ಬಂದು ತರಕಾರಿ ಮಾರಾಟ ಮಾಡುವ ಸೌಲಭ್ಯವನ್ನು ಜಿಲ್ಲಾಡಳಿತ ಕಲ್ಪಿಸಿದರೂ, ಸಾರ್ವಜನಿಕರು ಅಷ್ಟೊಂದು ಆಸಕ್ತಿ ತೋರಿಸುತ್ತಿಲ್ಲ.

ಲಾಕ್‌ಡೌನ್‌ ಉಲ್ಲಂಘಿಸಿ ಭಾನುವಾರ ತರಕಾರಿ ಖರೀದಿಸಲು ಎಪಿಎಂಸಿಗೆ ಬಂದ ಸಾರ್ವಜನಿಕರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಬಿರಿಯಾಣಿ ಪಾರ್ಸೆಲ್‌ ತೆಗೆದುಕೊಳ್ಳಲು ಹೊರಗಡೆ ಬಂದಿದ್ದೇನೆ ಎಂದು ಸಬೂಬು ಹೇಳಿದ ಯುವಕನಿಗೆ ಲಾಠಿ ಬಿಸಿ ಜೋರಾಗಿಯೇ ತಟ್ಟಿತು.

ಸೋಮವಾರದಿಂದ ಎಪಿಎಂಸಿ ಮಾರುಕಟ್ಟೆಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಇಲ್ಲಿಂದ ತರಕಾರಿ ಖರೀದಿಸಿ, ಅದನ್ನು ನಗರದ ವಾರ್ಡ್‌ಗಳಲ್ಲಿ ತಳ್ಳುಗಾಡಿಯಲ್ಲಿ, ಆಟೊಗಳಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡುವಂತೆ ಚಿಲ್ಲರೆ ವ್ಯಾಪಾರಿಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ತರಕಾರಿ ಮತ್ತು ದಿನಸಿ ಖರೀದಿಗಾಗಿ ಬೆಳಿಗ್ಗೆ 7ರಿಂದ 10 ಗಂಟೆಯವರೆಗೆ ಸಮಯ ನೀಡಲಾಗಿತ್ತು. ಆದರೆ, ಹೆಚ್ಚಿನವರು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ಮತ್ತು ಸಾಮಾಜಿಕ ಅಂತರವನ್ನೂ ಪಾಲಿಸುತ್ತಿಲ್ಲವಾದ್ದರಿಂದ, ಸೋಮವಾರದಿಂದ ಈ ಸಮಯದಲ್ಲಿ ಬದಲಾವಣೆ ತಂದು, ಇನ್ನಷ್ಟು ಬಿಗಿ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳುವ ನಿರೀಕ್ಷೆ ಇದೆ.

ಜನರ ಓಡಾಟಕ್ಕೆ ತಡೆ ಹಾಕಲು ಪೊಲೀಸ್‌ ಸಿಬ್ಬಂದಿ, ನಗರದ ಪ್ರಮುಖ ವೃತ್ತಗಳಲ್ಲಿ ಹೆಚ್ಚುವರಿ ಬ್ಯಾರಿಕೇಡ್‌ ಹಾಕಿ ತಪಾಸಣೆಯನ್ನು ಚುರುಕುಗೊಳಿದ್ದಾರೆ. ಇದರಿಂದ ಭಾನುವಾರ ಜನರ ಅನಗತ್ಯ ಸಂಚಾರಕ್ಕೆ ತಡೆಬಿತ್ತು. ಮಧ್ಯಾಹ್ನದ ನಂತರ ರಸ್ತೆಗಿಳಿಯುವವರ ಸಂಖ್ಯೆ ಕಡಿಮೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT