ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನೋಪಂತರ ಕ್ರಿಕೆಟ್ ಅಕಾಡೆಮಿಗೆ ಪ್ರಶಸ್ತಿ

16 ವರ್ಷದೊಳಗಿನ ಕಿರಿಯರ ತ್ರಿಕೋನ ಸರಣಿ
Last Updated 13 ಜನವರಿ 2021, 2:55 IST
ಅಕ್ಷರ ಗಾತ್ರ

ಗದಗ: ಲಯನ್ಸ್ ಸ್ಕೂಲ್ ಮೈದಾನದಲ್ಲಿ ನಡೆದ ಕಿರಿಯರ (16 ವರ್ಷದ ಒಳಗಿನ) ತ್ರಿಕೋನ ಸರಣಿಯನ್ನು ಜಾನೋಪಂತರ ಕ್ರಿಕೆಟ್ ಅಕಾಡೆಮಿ ತಂಡವು ಗೆದ್ದು, ಪ್ರಶಸ್ತಿ ತನ್ನದಾಗಿಸಿಕೊಂಡಿತು.

ನಗರದ ಜಾನೋಪಂತರ ಕ್ರಿಕೆಟ್ ಅಕಾಡೆಮಿ, ಗದಗ ಕ್ರಿಕೆಟರ್ಸ್‌ ಕ್ಲಬ್ ಹಾಗೂ ಲಕ್ಷ್ಮೇಶ್ವರ ಕ್ರಿಕೆಟ್ ಅಕಾಡೆಮಿಯ ಕಿರಿಯರ ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಅಂತಿಮ ಹಣಾಹಣಿಯು ಗದಗ ಕ್ರಿಕೆಟರ್ಸ್‌ ಕ್ಲಬ್ ಹಾಗೂ ಜಾನೋಪಂತರ ಕ್ರಿಕೆಟ್ ಅಕಾಡೆಮಿ ತಂಡಗಳ ಮಧ್ಯ ನಡೆಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಗದಗ ಕ್ರಿಕೆಟರ್ಸ್‌ ಕ್ಲಬ್‍ನ ಕಿರಿಯರ ತಂಡದ ಆಟಗಾರರು ಜಾನೋಪಂತರ ಕ್ರಿಕೆಟ್ ಅಕಾಡೆಮಿಯ ಬೌಲಿಂಗ್‌ ದಾಳಿಗೆ ರನ್‍ ಗಳಿಸಲು ಪರದಾಡಿದರು. ಮಧ್ಯಮ ವೇಗಿ ಪವನ ತೊಂಡಿಹಾಳ ಪ್ರಾರಂಭದಲ್ಲಿ ಉತ್ತಮ ಬೌಲಿಂಗ್‌ ದಾಳಿ ನಡೆಸಿ 16ಕ್ಕೆ 3 ವಿಕೆಟ್ ಪಡೆದು ಎದುರಾಳಿ ತಂಡದ ಮೇಲೆ ಒತ್ತಡ ಹೇರಿದರು.

ಲೆಗ್‍ ಸ್ಪಿನ್ನರ್ ಧೀರಜ್ ಢವಳಿ 13ಕ್ಕೆ 2 ವಿಕೆಟ್ ಪಡೆದು ಮಧ್ಯಮ ಕ್ರಮಾಂಕದ ಆಟಗಾರರನ್ನು ಕಟ್ಟಿಹಾಕಿದರು. ಶ್ರೀಧರ ಲಮಾಣಿ ಹಾಗೂ ಹುಜೈಫಾ ದಫೇದಾರ ತಲಾ ಒಂದು ವಿಕೆಟ್ ಪಡೆದಿದ್ದರಿಂದಾಗಿ ಗದಗ ಕ್ರಿಕೆಟರ್ಸ್‌ ಕ್ಲಬ್‍ನವರು ನಿಗದಿತ 25 ಓವರ್‌ಗಳಲ್ಲಿ 104 ರನ್‍ಗಳಿಸಿ ಆಲೌಟ್‍ ಆದರು.

ಗೆಲುವಿಗಾಗಿ 105 ರನ್‍ಗಳ ಗುರಿಯೊಂದಿಗೆ ಬ್ಯಾಟಿಂಗ್ ಪ್ರಾರಂಭಿಸಿದ ಜಾನೋಪಂತರ ಕ್ರಿಕೆಟ್ ಅಕಾಡೆಮಿಯ ಬ್ಯಾಟ್ಸ್‌ಮನ್‍ಗಳಾದ ಧೀರಜ ಢವಳಿ (46 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ ಔಟಾಗದೇ 74 ರನ್) ಹಾಗೂ ಹರ್ಷ ರಂಗ್ರೇಜ್‍ರ (27 ರನ್) ಬಿರುಸಿನ ಬ್ಯಾಟಿಂಗ್‍ನಿಂದಾಗಿ ಜಾನೋಪಂತರ ಅಕಾಡೆಮಿಯು ಕೇವಲ 1 ವಿಕೆಟ್ ಕಳೆದುಕೊಂಡು 14.1 ಓವರ್‌ಗಳಲ್ಲಿ ವಿಜಯದ ರನ್ ಬಾರಿಸಿ, 9 ವಿಕೆಟ್‍ಗಳ ಸುಲಭ ಜಯ ಸಾಧಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು.

ಧೀರಜ ಹಾಗೂ ಹರ್ಷಾ ಮೊದಲ ವಿಕೆಟ್‍ಗೆ 95 ರನ್‍ಗಳ ಜೊತೆಯಾಟ ಪಂದ್ಯದ ಆಕರ್ಷಣೆಯಾಗಿತ್ತು.

ಇದಕ್ಕೂ ಮೊದಲು ನಡೆದ ಮತ್ತೊಂದು ಪಂದ್ಯದಲ್ಲಿ ಗದಗಕ್ರಿಕೆಟರ್ಸ್‌ ಕ್ಲಬ್ ಹಾಗೂ ಲಕ್ಷ್ಮೇಶ್ವರ ಕ್ರಿಕೆಟ್ ಅಕಾಡೆಮಿ ನಡುವೆ ನಡೆದ ಪಂದ್ಯದಲ್ಲಿ ಗದಗ ಕ್ರಿಕೆಟರ್ಸ್‌ ಕ್ಲಬ್ 5 ವಿಕೆಟ್‍ಗಳ ಜಯ ಸಾಧಿಸಿ ಅಂತಿಮ ಹಂತ ಪ್ರವೇಶಿಸಿತು.

ಫೈನಲ್ ಪಂದ್ಯದ ನಂತರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿ ಸರ್ಕಲ್ ಇನ್‌ಸ್ಪೆಕ್ಟರ್‌ ಸಿದ್ದು ಪಾಟೀಲ, ಜಾನೋಪಂತರ ಅಕಾಡೆಮಿ ತಂಡಕ್ಕೆ ಟ್ರೋಫಿ ವಿತರಿಸಿದರು. ಅತಿಥಿಗಳಾಗಿ ಅನಿಲ ಮಂಗಳವೇಡೆಕರ, ಪ್ರಶಾಂತ ಪತ್ತಾರ, ನಾರಾಯಣ ಲದ್ವಾ ಹಾಗೂ ಲಕ್ಷ್ಮೇಶ್ವರ ಅಕಾಡೆಮಿಯ ಸಂಗಮೇಶ ಶೆಟ್ಟರ್ ವೇದಿಕೆಯ ಮೇಲೆ ಉಪಸ್ಥಿತರಿದ್ದು ವೈಯಕ್ತಿಕ ಬಹುಮಾನಗಳನ್ನು ವಿತರಿಸಿದರು.

ಜಾನೋಪಂತರ ಅಕಾಡೆಮಿಯ ಧೀರಜ ಡವಳಿ ಹಾಗೂ ಗದಗ ಕ್ರಿಕೆಟರ್ಸ್‌ ಕ್ಲಬ್‍ನ ಯೂಸೂಫ್‌ ಪಂದ್ಯ ಪುರುಷ ಪ್ರಶಸ್ತಿ ಪಡೆದರು. ತರಬೇತುದಾರರಾದ ವೀರಣ್ಣ ಜಾನೋಪಂತರ ಹಾಗೂ ಮಲ್ಲಿಕಾರ್ಜುನ ಭೂಪಾನಿ ಮಾರ್ಗದರ್ಶನದಲ್ಲಿ ಈ ಟೂರ್ನಿಯು ಯಶಸ್ವಿಯಾಗಿ ನಡೆಯಿತು. ಪರಶುರಾಮ ಕಟ್ಟಿಮನಿ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT