ಶುಕ್ರವಾರ, ಸೆಪ್ಟೆಂಬರ್ 20, 2019
27 °C
ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಶಾಸಕ, ಸಂಸದರ ಆಗ್ರಹ

ಶ್ರೀ ಬನ್ನಿಮಹಾಕಾಳಿ ಮೂರ್ತಿ ಭಗ್ನ

Published:
Updated:
Prajavani

ಗದಗ: ಗದಗ– ಬೆಟಗೇರಿ ಅವಳಿ ನಗರದ ಪುರಾತನವಾದ ಶ್ರೀ ಬನಶಂಕರಿ ದೇವಿ ದೇವಾಲಯದ ಆವರಣದಲ್ಲಿ ಇದ್ದ ಶ್ರೀ ಬನ್ನಿ ಮಹಾಕಾಳಿ ಮೂರ್ತಿ ಹಾಗೂ ನಾಗರ ಕಲ್ಲಿನ ಮೂರ್ತಿಗಳನ್ನು ದುಷ್ಕರ್ಮಿಗಳು ಭಗ್ನಗೊಳಿಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ. ಎಂದಿನಂತೆ ದೇವಾಲಯದ ಪೂಜಾರಿ ಸೋಮವಾರ ದೇವಾಲಯಕ್ಕೆ ಪೂಜೆಗೆ ಆಗಮಿಸಿದ ಸಂದರ್ಭದಲ್ಲಿ ಮೂರ್ತಿಗಳನ್ನು ಭಗ್ನಗೊಳಿಸಿರುವುದು ಬೆಳಕಿಗೆ ಬಂದಿದೆ.

ದೇವಾಲಯ ಟ್ರಸ್ಟ್ ಹಾಗೂ ದೇವಾಂಗ ಸಮಾಜದ ಬಾಂಧವರು ಮತ್ತು ಭಕ್ತರು ಘಟನೆಯನ್ನು ಖಂಡಿಸಿ, ದೇವರ ಮೂರ್ತಿ ಭಗ್ನಗೊಳಿಸಿರುವ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶ್ರೀರಾಮಸೇನೆ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ಅಂಬಾಭವಾನಿ ವೃತ್ತದಲ್ಲಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಸಂಸದ ಭೇಟಿ: ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದ ಸಂಸದ ಶಿವಕುಮಾರ ಉದಾಸಿ, ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಇಂತಹ ಘಟನೆಗಳಿಂದಾಗಿ ಸೌಹಾರ್ದ ಭಾವನೆಗಳಿಗೆ ದಕ್ಕೆ ಆಗುತ್ತದೆ. ಈ ಘಟನೆಗೆ ಕಾರಣರಾದವರನ್ನೂ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಟ್ರಸ್ಟ್‌ನ ರಾಜೇಂದ್ರ ಬರದ್ವಾಡ, ಪ್ರೇಮನಾಥ ಬಣ್ಣದ, ದಶರಥ ಕೊಳ್ಳಿ, ಶ್ರೀನಿವಾಸ ಹುಬ್ಬಳ್ಳಿ, ಮೋಹನ್ ಹೊನ್ನಳ್ಳಿ, ಅರವಿಂದ ಹುಲ್ಲುರ ಇದ್ದರು.

ಎಚ್.ಕೆ ಪಾಟೀಲ ಭೇಟಿ: ಘಟನಾ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ ಶಾಸಕ ಎಚ್‌.ಕೆ.ಪಾಟೀಲ, ದೇವರ ವಿಗ್ರಹಗಳನ್ನು ಭಗ್ನ ಮಾಡಿರುವರ ವಿರುದ್ಧ ಯಾವುದೇ ಮುಲಾಜಿಗೆ ಕ್ರಮಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸಿದರು.

ಮುಖಂಡರಾದ ಅಶೋಕ ಬಣ್ಣದ, ಅಶೋಕ ಹೊನ್ನಳ್ಳಿ, ಪ್ರಭು ನಿಲಗುಂದ, ವೀರಭದ್ರ ದೇವದರ, ಈರಣ್ಣ ಹುಳ್ಳಿ, ಚಿನ್ನಪ್ಪ ನೆಗಳೂರ, ರಾಜು ಕೊಚಿ, ವೀರಭದ್ರ ಗಂಜಿ, ಗುರು ಹೊನ್ನಳ್ಳಿ, ನವೀನ್ ಮೇಡಿ, ಸುಭಾಷ್ ಗಂಜಿ, ಈಶಣ್ಣ ಮಾಳಗೊಂಡ, ನಾರಾಯಣ ಕಂಗೂರಿ, ಕೊಟ್ರಪ್ಪ ಜುಜಗಾರ, ವಿನಾಯಕ ಕಂಗೂರಿ ಇದ್ದರು.

Post Comments (+)