ಸೋಮವಾರ, ಜನವರಿ 17, 2022
19 °C

ಗದಗ | ಕರ್ಫ್ಯೂ ಉಲ್ಲಂಘನೆ: ‘ದಂಡ’ ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡರಗಿ: ಕೋವಿಡ್‌ ಮೂರನೆ ಅಲೆ ನಿಯಂತ್ರಿಸಲು ಸರ್ಕಾರ ವಾರಾಂತ್ಯದ ಕರ್ಫ್ಯೂಗೆ ಜಾರಿ ಮಾಡಿದ ಕಾರಣ ಅಗತ್ಯ ವಸ್ತುಗಳ ಸೇವೆ ಬಿಟ್ಟು ಉಳಿದ ಅಂಗಡಿಗಳು ಬಂದ್ ಆಗಿದ್ದವು.

ಪಟ್ಟಣದ ಹಳೆ ಎಪಿಎಂಸಿ ಹಾಗೂ ಮುಖ್ಯ ಮಾರುಕಟ್ಟೆಯಲ್ಲಿರುವ ಎರಡು ತರಕಾರಿ ಮಾರುಕಟ್ಟೆಯಲ್ಲಿ ವಾರಾಂತ್ಯದ ವ್ಯಾಪಾರ ಜೋರಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು, ಕೆಲವು ಖಾಸಗಿ ವಾಹನಗಳು ಸಂಚರಿಸಿದವು. ದ್ವಿಚಕ್ರ ವಾಹನ ಸಂಚಾರವೂ ಇತ್ತು.

ಪೊಲೀಸ್, ಪುರಸಭೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ತಂಡವು ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚರಿಸಿ ಮಾಸ್ಕ್ ಧರಿಸದವರಿಗೆ ಸ್ಥಳದಲ್ಲಿಯೇ ದಂಡ ಹಾಕಿದರು. ಚಲಿಸುತ್ತಿದ್ದ ಬಸ್ಸುಗಳನ್ನೇರಿ ಮಾಸ್ಕ್ ಧರಿಸದ ಪ್ರಯಾಣಿಕರಿಗೆ ಬಸ್ಸಿನಲ್ಲಿಯೇ ದಂಡ ಹಾಕಿದರು.

ಸರ್ಕಾರದ ನಿಯಮವನ್ನು ಧಿಕ್ಕರಿಸಿ ತೆರೆದಿದ್ದ ಅನಗತ್ಯ ವಸ್ತುಗಳ ಕೆಲವು ಅಂಗಡಿಗಳ ಮಾಲೀಕರಿಗೆ ನೋಟೀಸ್ ನೀಡಿ, ಸ್ಥಳದಲ್ಲಿಯೇ ದಂಡ ಹಾಕಿದರು. ಹೋಟೆಲ್ ಒಳಗಡೆ ಗ್ರಾಹಕರಿಗೆ ತಿಂಡಿ ತಿನಿಸು ಪೂರೈಸುತ್ತಿದ್ದ ಹೋಟೆಲ್‌ ಗಳನ್ನು ಮುಚ್ಚಿಸಿದರು.

ಗಜೇಂದ್ರಗಡ ವರದಿ: ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯದ ಕರ್ಪ್ಯೂ ಪರಿಣಾಮ ಬೀರಲಿಲ್ಲ. ಜನರು ಎಂದಿನಂತೆ ಓಡಾಡುತ್ತಿರುವುದು ಕಂಡು ಬಂತು.

ಪಟ್ಟಣದಲ್ಲಿ ಸರ್ಕಾರದ ನಿಯಮಗಳನ್ನು ಜನರು ಪಾಲಿಸಲಿಲ್ಲ. ಎಂದಿನಂತೆ ಜನರು ಮಾಸ್ಕ್ ಧರಿಸದೆ ಪರಸ್ಪರ ಅಂತರ ಮರೆತು ಓಡಾಡುತ್ತಿರುವುದು, ವಾಹನಗಳಲ್ಲಿ ಅನಗತ್ಯವಾಗಿ ಓಡಾಡುತ್ತಿರುವುದು ಕಂಡುಬಂತು. ಪುರಸಭೆ ಸಿಬ್ಬಂದಿ ಕಸ ತುಂಬುವ ವಾಹನಗಳಲ್ಲಿ ಧ್ವನಿವರ್ಧಕಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಆದರೆ ಇದ್ಯಾವುದಕ್ಕೂ ತಲೆ ಕಡೆಸಿಕೊಳ್ಳದ ಜನರು ಎಂದಿನಂತೆ ಓಡಾಡುತ್ತಿರುವುದು ಕಂಡು ಬಂತು.

ನರೇಗಲ್ ವರದಿ:‌ ‘ನಾಲ್ಕು ಲಕ್ಷ ಸಾಲ ಐತಿ, ಮನ್ಯಾಗ ಆರು ಜನ; ಬೇಕರಿ ಅಂಗಡಿ ವ್ಯಾಪರದ ಮ್ಯಾಗ ನಂಬಿ ಜೀವನ ನಡೆಸ್ತಾ ಇದಿವಿ. ಕೈಮುಗಿದು ಕೇಳ್ತಿನಿ ನಮ್ಗ ಅಂಗಡಿ ತೆರೆಯೋಕೆ ಅವಕಾಶ ಮಾಡಿಕೊಡ್ರೀ ಎಂದು ಗದಗ ಜಿಲ್ಲೆಯ ನರೇಗಲ್‌ ಪಟ್ಟಣದ ಬೇಕರಿ ಅಂಗಡಿ ವ್ಯಾಪರಸ್ಥ ಶಿವಕುಮಾರ ನಾಗಪ್ಪ ಮುಳಗುಂದ ಅಧಿಕಾರಿಗಳಿಗೆ ಶನಿವಾರ ಮನವಿ ಮಾಡಿಕೊಂಡರು.

ಕದಾ ಹಾಕಿದ್ದ ಬೇಕರಿ ಅಂಗಡಿಯ ಮುಂದೆ ಬ್ರೆಡ್‌ ಹಾಗೂ ಇತರೇ ಬೇಕರಿ ತಿನಸುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಅವರು ಕಣ್ಣೀರು ಹಾಕುವ ಮೂಲಕ ಅಳಲು ತೋಡಿಕೊಂಡರು. 25 ವರ್ಷಗಳಿಂದ ಬೇಕರಿ ವ್ಯಾಪರದ ಮೇಲೆ ಅವಲಂಬನೆಯಾಗಿ ಪೂರ್ಣ ಕುಟುಂಬ ಜೀವನ ನಡೆಸುತ್ತಿದ್ದೇವೆ. ದುಪ್ಪಟ್ಟಾಗಿರುವ ಅಂಗಡಿ ಬಾಡಿಗೆ ಕಟ್ಟುತ್ತಿರುವೆ, ಮನೆ ಕಟ್ಟಿಸಲು ನಾಲ್ಕು ಲಕ್ಷ ಸಾಲ ಮಾಡಿರುವೆ ಅದರ ಕಂತುಗಳನ್ನು ಕಟ್ಟುವುದು ಹಾಗೂ ಬೆಲೆ ಏರಿಕೆಯ ನಡುವೆ ಮನೆಯ ಆಗುಹೋಗುಗಳ ನಿರ್ವಹಣೆ ಮಾಡುವುದು ಕಷ್ಟದ ಕೆಲಸವಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.