ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮಾರ್ಗಸೂಚಿಗೆ ಒತ್ತು

ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಲ್ಲಿ ಖುಷಿಯ ಹೊನಲು
Last Updated 24 ಆಗಸ್ಟ್ 2021, 7:40 IST
ಅಕ್ಷರ ಗಾತ್ರ

ಗದಗ: ಆ.23ರಿಂದ 9 ಮತ್ತು 10 ಹಾಗೂ ಪಿಯುಸಿ ತರಗತಿಗಳನ್ನು ಆರಂಭಿಸುವಂತೆ ಸರ್ಕಾರ ನೀಡಿದ್ದ ಸೂಚನೆಗೆ ಗದಗ ಬೆಟಗೇರಿ ಅವಳಿ ನಗರದಲ್ಲಿ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರೌಢಶಾಲೆ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಖುಷಿಯಿಂದಲೇ ಶಾಲೆಗೆ ಹಾಜರಾದರು.

ಸೋಮವಾರ ಬೆಳಿಗ್ಗೆ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು, ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು. ಶಾಲಾ ಆವರಣದಲ್ಲಿ ಥರ್ಮಲ್ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು. ಸುರಕ್ಷಿತ ಅಂತರ ಕಾಪಾಡಿಕೊಳ್ಳುವಂತೆ ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಹೇಳಿದರು.

ಭೌತಿಕ ತರಗತಿಗಳಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದ್ದರಿಂದ ಮೊದಲ ದಿನ ಶಾಲೆಗೆ ಬಂದಿದ್ದ ಎಲ್ಲ ವಿದ್ಯಾರ್ಥಿಗಳು ಒಪ್ಪಿಗೆಪತ್ರ ತಂದಿದ್ದರು. ಬಹಳ ದಿನಗಳ ನಂತರ ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳ ಮೊಗದಲ್ಲಿ ಸಂತಸ ಮನೆ ಮಾಡಿತ್ತು. ಆನ್‌ಲೈನ್‌ ತರಗತಿಗಳಿಂದ ಮತ್ತೇ ಭೌತಿಕ ತರಗತಿಗಳಿಗೆ ಹಾಜರಾಗಿದ್ದಕ್ಕೆ ಇನ್ನಷ್ಟು ಖುಷಿಗೊಂಡಿದ್ದರು.

‘ಜಿಲ್ಲೆಯಲ್ಲಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಒಟ್ಟು 291 ಶಾಲೆಗಳು ಕೂಡ ಸೋಮವಾರದಿಂದ ಆರಂಭಗೊಂಡಿವೆ. ಜಿಲ್ಲೆಯಲ್ಲಿ 9ನೇ ತರಗತಿಯಲ್ಲಿ ಕಲಿಯುವ 16,778 ಮಂದಿ ವಿದ್ಯಾರ್ಥಿಗಳಿದ್ದು ಸೋಮವಾರ 7,076 ಮಂದಿ ಶಾಲೆಗೆ ಹಾಜರಾಗಿದ್ದರು. ಎಸ್ಸೆಸ್ಸೆಲ್ಸಿಯ 17,114 ಮಂದಿ ವಿದ್ಯಾರ್ಥಿಗಳ ಪೈಕಿ 8,600 ಮಂದಿ ಶಾಲೆಗೆ ಹಾಜರಾಗಿದ್ದರು’ ಎಂದು ಡಿಡಿಪಿಐ ಬಸವಲಿಂಗಪ್ಪ ಜಿ.ಎಂ. ತಿಳಿಸಿದ್ದಾರೆ.

ವಿವಿಧ ಶಾಲೆಗಳಿಗೆ ಎಸಿ ಭೇಟಿ

ಮುಂಡರಗಿ: ಶಾಲಾ, ಕಾಲೇಜುಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಸೋಮವಾರ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆ, ಎಂ.ಎಸ್.ಡಂಬಳ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.

‘ವಿದ್ಯಾರ್ಥಿಗಳು ಭಯಮುಕ್ತರಾಗಿ ಕಲಿಕೆಯಲ್ಲಿ ಭಾಗವಹಿಸಬೇಕು. ಕೊರೊನಾ ನಿಯಮಗಳನ್ನು ಪಾಲಿಸಬೇಕು. ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್ ಆಶಪ್ಪ ಪೂಜಾರಿ, ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ ಅಣ್ಣಿಗೇರಿ, ಎಚ್.ಎಂ.ಪಾಟೀಲ, ಎಚ್.ವೈ.ಭಜಂತ್ರಿ ಮತ್ತಿತರರು ಇದ್ದರು.

ಬಿಇಒ ಕೆ.ಡಿ.ಬಡಿಗೇರ ಅವರು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೊರೊನಾ ಹಿನ್ನೆಲೆ ಮುಂಜಾಗ್ರತೆ ಕ್ರಮವಾಗಿ ಶಾಲಾ, ಕಾಲೇಜಿನಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಯಿತು. ಶಾಲಾ, ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ನೀಡುವುದರ ಜೊತೆಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು. ಮಾಸ್ಕ್ ಧರಿಸದವರಿಗೆ ಮಾಸ್ಕ್ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಪಾಲಕರ ಒಪ್ಪಿಗೆ ಪತ್ರ ಪಡೆದುಕೊಂಡರು. ತಾಲ್ಲೂಕಿನಲ್ಲಿ 9 ಮತ್ತು 10ನೇ ತರಗತಿಗೆ 4,979ವಿದ್ಯಾರ್ಥಿಗಳು ದಾಖಲಾತಿ ಹೊಂದಿದ್ದರು. ಈ ಪೈಕಿ ಸೋಮವಾರ 9 ಮತ್ತು 10ನೇ ತರಗತಿಯ 1,962ವಿದ್ಯಾರ್ಥಿಗಳು ಹಾಜರಾಗಿದ್ದರು.

ಸಚಿವರಿಂದ ಆನ್‌ಲೈನ್‌ ವೀಕ್ಷಣೆ!

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಸಚಿವ ಸಂಪುಟದ ಸಹೋದ್ಯೋಗಿಗಳು, ಆಯಾ ಜಿಲ್ಲೆಗಳಲ್ಲಿ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳನ್ನು, ಶಿಕ್ಷಕರನ್ನು ಪ್ರೋತ್ಸಾಹಿಸಿ, ಪೋಷಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸಬೇಕು’ ಎಂದು ಸಲಹೆ ನೀಡಿದ್ದರಿಂದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಬೆಂಗಳೂರಿನಿಂದಲೇ ಜಿಲ್ಲೆಯ ಕೆಲವು ಶಾಲೆಗಳ ಶಿಕ್ಷಕರ ಜತೆಗೆ ವಿಡಿಯೊ ಕಾಲ್‌ನಲ್ಲಿ ಮಾತನಾಡಿ, ಹುರಿದುಂಬಿಸಿದರು.

ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಶಿಕ್ಷಕರು ಮತ್ತು ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯ ಕೆಲವು ಶಿಕ್ಷಕರೊಂದಿಗೆ ಮತ್ತು ಶಿಕ್ಷಣ ಅಧಿಕಾರಿಗಳೊಂದಿಗೆ, ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿದ ಸಚಿವರು, ‘ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈಗ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ಆದರೆ ಕೊರೊನಾ ಸೋಂಕಿನ ಅಪಾಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತ ರಕ್ಷಣೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT