ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ’

ಗದಗ ಜಿಲ್ಲೆಯಾದ್ಯಂತ ನಿರಂತರ ಮಳೆ– ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಸೂಚನೆ
Last Updated 15 ಅಕ್ಟೋಬರ್ 2020, 6:08 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಜನರು ಮುನ್ನೆಚ್ಚರಿಕೆ ವಹಿಸಬೇಕು. ಮಳೆಯಿಂದ ಸಂಕಷ್ಟಕ್ಕೆ ಸಿಲುಕುವ ಜನರಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣವೇ ನೆರವು ಒದಗಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ತಿಳಿಸಿದ್ದಾರೆ.

ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ನೇಮಿಸಲಾಗಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು, ಅಗತ್ಯ ಕ್ರಮ ಗಳನ್ನು ಜರುಗಿಸಬೇಕು ಎಂದು ಹೇಳಿದ್ದಾರೆ.

ಅಗ್ನಿಶಾಮಕದಳದ ಸಿಬ್ಬಂದಿ ಅಗತ್ಯ ರಕ್ಷಣಾ ಸಾಮಗ್ರಿಗಳೊಂದಿಗೆ ದಿನದ ಯಾವುದೇ ಸಂದರ್ಭದಲ್ಲಿ ಎದುರಾಗಬಹುದಾದ ಸನ್ನಿವೇಶಗಳನ್ನು ನಿಭಾಯಿಸಲು ಸನ್ನದ್ಧರಾಗಿರಬೇಕು. ಉಪ ವಿಭಾಗಾಧಿಕಾರಿ ಸೇರಿದಂತೆ ಜಿಲ್ಲೆಯ ಎಲ್ಲ ತಹಶೀಲ್ದಾರರು ತಮ್ಮ ಕಚೇರಿಯಲ್ಲಿ ಕಂಟ್ರೋಲ್ ರೂಂಗಳನ್ನು ತೆರೆದು ದಿನದ 24 ಗಂಟೆಗಳ ಕಾಲ ಅಗತ್ಯವಿರುವ ಸಿಬ್ಬಂದಿ ನೇಮಿಸಬೇಕು. ತುರ್ತು ಸಂದರ್ಭಗಳಲ್ಲಿ ಜಿಲ್ಲಾ ಸಹಾಯವಾಣಿ ಕೇಂದ್ರದ ಟೋಲ್ ಫ್ರೀ ಸಂಖ್ಯೆ 1077 ಹಾಗೂ ಜಿಲ್ಲಾಧಿಕಾರಿ ಕಚೇರಿ ದೂರವಾಣಿ ಸಂಖ್ಯೆ 08372 239177 ಸಂಪರ್ಕಿಸುವಂತೆ ತಿಳಿಸಿದ್ದಾರೆ.

ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ಮತ್ತು ಪಿಡಿಒ, ಕಾರ್ಯದರ್ಶಿ ಮತ್ತು ಸಿಬ್ಬಂದಿ ಗ್ರಾಮ ಪಂಚಾಯ್ತಿಗಳಲ್ಲಿದ್ದು, ಅತಿವೃಷ್ಟಿ ಬಗ್ಗೆ ತೊಂದರೆಗಳಾಗುವ ಸಂಭವ ಇದ್ದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕು. ನದಿಪಾತ್ರದ ಜನರಿಗೆ ನದಿ, ಹಳ್ಳಗಳತ್ತ ತೆರಳದಂತೆ ಡಂಗುರ ಸಾರುವ ಮೂಲಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ.

ಜನರನ್ನು ಸುರಕ್ಷಿತವಾಗಿರುವ ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಬೇಕು. ಇದಕ್ಕಾಗಿ ಸಮುದಾಯ ಭವನ, ದೊಡ್ಡ ಕಟ್ಟಡಗಳನ್ನು ಗುರುತಿಸಿ ಇಟ್ಟಿರಬೇಕು. ಸಂತ್ರಸ್ತರಿಗೆ ಕಾಳಜಿ ಕೇಂದ್ರ ತೆರೆಯಲು ಅವಶ್ಯಕ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಳ್ಳಬೇಕು.

ಮಳೆ ಮತ್ತು ಗಾಳಿಯಿಂದ ರಸ್ತೆ ಗುರುಳಿದ ಗಿಡ ಮರಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು. ಪ್ರವಾಹ ಸಂದರ್ಭದಲ್ಲಿ ಸಾರಿಗೆ ಸಂಚಾರಕ್ಕಾಗಿ ಸುರಕ್ಷಿತ ಮಾರ್ಗ ತೆರೆಯಬೇಕು. ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯ್ತಿಯವರು ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ತಂತಿಗಳು, ಟ್ರಾನ್ಸ್‌ಫಾರ್ಮರ್‌ಗಳು ಬಿದ್ದು ವಿದ್ಯುತ್ ಹರಿದು ಸಾರ್ವಜನಿಕರಿಗೆ ತೊಂದರೆ ಆಗದಂತೆ ಅವಶ್ಯಕ ಕ್ರಮಗಳನ್ನು ಶೀಘ್ರವೇ ಜರುಗಿಸಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT