ಗದಗ: ‘ಬರಗಾಲ ಘೋಷಣೆಯಾದ ಹಿನ್ನಲೆಯಲ್ಲಿ ರೈತರಿಗೆ ನೀಡುವ ಪರಿಹಾರ ಮೊತ್ತವನ್ನು ಬ್ಯಾಂಕ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಾರದು. ಈ ಕುರಿತು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಜಿಲ್ಲೆಯ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಬೆಳೆ ವಿಮಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಮಳೆ ಕೊರತೆಯಾಗಿರುವುದರಿಂದ ರಾಜ್ಯ ಸರ್ಕಾರ ಗದಗ ಜಿಲ್ಲೆಯ ಆರು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಿಸಿದೆ. ಮುಂದಿನ ಹಂತದಲ್ಲಿ ರೈತರಿಗೆ ಪರಿಹಾರ ಒದಗಿಸುವಲ್ಲಿ ಬೆಳೆ ಸಮೀಕ್ಷೆ ಮಹತ್ವದ ಪಾತ್ರ ವಹಿಸಲಿದೆ. ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವಲ್ಲಿ ರೈತ ಮುಖಂಡರು ನೆರವಾಗಬೇಕು’ ಎಂದು ಮನವಿ ಮಾಡಿದರು.
‘ಸರ್ಕಾರ ನಿರಂತರವಾಗಿ ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಕೃಷಿ ಸಂಬಂಧಿತ ಇಲಾಖೆಗಳು ಸರಿಯಾಗಿ ಮಾಡಬೇಕು. ಕಾಲಕಾಲಕ್ಕೆ ರೈತ ಸಮುದಾಯಕ್ಕೆ ಬಿತ್ತನೆ ಕುರಿತಂತೆ ಹಾಗೂ ವಿಮೆ ನೋಂದಣಿ ಕುರಿತಂತೆ ಮಾಹಿತಿ ಒದಗಿಸಬೇಕು. ಜಿಲ್ಲೆಯ ರೈತರು ಸರ್ಕಾರದ ಯಾವುದೇ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗಬಾರದು’ ಎಂದು ಸೂಚಿಸಿದರು.
‘ರೈತರೆಲ್ಲರೂ ಫ್ರೂಟ್ ತಂತ್ರಾಂಶದಲ್ಲಿ ಫ್ರೂಟ್ ಐಡಿಗಳನ್ನು ಕಡ್ಡಾಯವಾಗಿ ಮಾಡಿಸಬೇಕು. ನೋಂದಣಿ ಸಮಯದಲ್ಲಿ ಭೂಮಿಯ ವಿಸ್ತೀರ್ಣದ ಕುರಿತು ನಿಖರವಾಗಿ ನಮೂದಿಸಬೇಕು. ಬೆಳೆ ಸಮೀಕ್ಷೆ, ಫ್ರೂಟ್ ತಂತ್ರಾಂಶ ಹಾಗೂ ಪರಿಹಾರ ಆ್ಯಪ್‍ಗಳು ಒಂದಕ್ಕೊಂದು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತವೆ. ಅವುಗಳ ಸಹಾಯದಿಂದಲೇ ಮುಂಬರುವ ದಿನಗಳಲ್ಲಿ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗಲಿದೆ. ಆದ್ದರಿಂದ ರೈತರೆಲ್ಲರೂ ಬೆಳೆ ಸಮೀಕ್ಷೆ ಸರಿಯಾಗಿ ಪೂರ್ಣಗೊಳಿಸಬೇಕು’ ಎಂದು ತಿಳಿಸಿದರು.
ಬಜಾಜ್ ಅಲಯನ್ಸ್ ವಿಮಾ ಕಂಪನಿಯ ಜಿಲ್ಲಾ ಸಂಯೋಜಕ ಪವನ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ರೈತರಿಗೆ ಕಂಪನಿಯಿಂದ ಆದಷ್ಟು ಹೆಚ್ಚಿನ ಪರಿಹಾರ ವಿತರಣೆ ಮಾಡಲಾಗುವುದು. ವಿಮಾ ಕಂತು ಪಾವತಿಸಿದ ಅರ್ಹ ರೈತರಿಗೆ ಸರ್ಕಾರದ ಮಾರ್ಗಸೂಚಿಗಳನ್ವಯ ಪರಿಹಾರ ಮೊತ್ತ ವಿತರಿಸಲಾಗುವುದು’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಎ.ಎ.ಕಂಬಾಳಿಮಠ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನೆ, ಕೃಷಿ ಇಲಾಖೆ ಉಪನಿರ್ದೇಶಕ ಕರಿಯಪ್ಪ ಸೇರಿದಂತೆ ಜಿಲ್ಲೆಯ ರೈತರು, ರೈತ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ರೈತರು ತಾವು ಬಿತ್ತಿದ ಬೆಳೆಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ಪ್ರಕೃತಿ ವಿಕೋಪ ಸಂಭವಿಸಿದಲ್ಲಿ ವಿಮಾ ಕಂಪನಿಗಳು ಪರಿಹಾರ ವಿತರಿಸಬೇಕು –ವೈಶಾಲಿ ಎಂ.ಎಲ್ ಜಿಲ್ಲಾಧಿಕಾರಿ
‘ಸರ್ಕಾರದ ಮಾರ್ಗಸೂಚಿಯನ್ವಯ ವಿತರಣೆ’ ಪಿಎಂಜಿಎಸ್‌ವೈ ವಿಮಾ ಕಂತು ಪಾವತಿಸಿದ ಜಿಲ್ಲೆಯ ರೈತರಿಗೆ 2019ರಲ್ಲಿ 31619 ರೈತರಿಗೆ ₹2662 ಲಕ್ಷ ಪರಿಹಾರ ವಿತರಿಸಲಾಗಿದೆ. 2020ರಲ್ಲಿ 86331 ರೈತರಿಗೆ ₹14852 ಲಕ್ಷ 2021ರಲ್ಲಿ 83794 ರೈತರಿಗೆ ₹10471 ಲಕ್ಷ 2022ರಲ್ಲಿ 92123 ರೈತರಿಗೆ ₹12735 ಲಕ್ಷ ಪರಿಹಾರ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ಬರಗಾಲ ಘೋಷಣೆಯಾದ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು’ ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.