ಗದಗ: ದಶಕದಲ್ಲೇ ದಾಖಲೆ ಬಿಸಿಲು..! ಒಣಗುತ್ತಿರುವ ಬೆಳೆ, ಕುಡಿಯುವ ನೀರಿಗೆ ತತ್ವಾರ

7
ಮಳೆಗಾಗಿ ಪ್ರಾರ್ಥನೆ

ಗದಗ: ದಶಕದಲ್ಲೇ ದಾಖಲೆ ಬಿಸಿಲು..! ಒಣಗುತ್ತಿರುವ ಬೆಳೆ, ಕುಡಿಯುವ ನೀರಿಗೆ ತತ್ವಾರ

Published:
Updated:

ಗದಗ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಸಿಲು ಉಗ್ರ ಸ್ವರೂಪ ತಾಳುತ್ತಿದೆ. ದಶಕದ ನಂತರ ಮೊದಲ ಬಾರಿಗೆ ಸೆಪ್ಟೆಂಬರ್‌ ತಿಂಗಳಲ್ಲಿ ಜಿಲ್ಲೆಯ ಗರಿಷ್ಠ ಉಷ್ಣಾಂಶವು 34 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಭಾನುವಾರ ನಗರದಲ್ಲಿ 34.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

2009ರ ಸೆಪ್ಟೆಂಬರ್‌ ತಿಂಗಳಲ್ಲಿ ಗರಿಷ್ಠ 34 ಡಿಗ್ರಿ ಉಷ್ಣಾಂಶ ದಾಖಲಾಗಿತ್ತು. 67 ವರ್ಷಗಳ ಹಿಂದೆ ಅಂದರೆ 1951ರಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಗದಗ ನಗರದಲ್ಲಿ 37.08 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಇದೇ ಇದುವರೆಗಿನ ಸಾರ್ವಕಾಲಿಕ ದಾಖಲೆ.

ಸಾಮಾನ್ಯವಾಗಿ ಸೆಪ್ಟೆಂಬರ್‌ ತಿಂಗಳಲ್ಲಿ ಗದುಗಿನಲ್ಲಿ 30ರಿಂದ 31 ಡಿಗ್ರಿ ಸೆಲ್ಸಿಯಸ್‌ ವಾಡಿಕೆ ಉಷ್ಣಾಂಶ ಇರುತ್ತದೆ. ಆದರೆ ಭಾನುವಾರ ಬಿಸಿಲಿನ ಝಳ 34.5 ಡಿಗ್ರಿ ಸಮೀಪಕ್ಕೆ ಬಂದಿದೆ. ಇದು ತಿಂಗಳಾಂತ್ಯಕ್ಕೆ ಇನ್ನಷ್ಟು ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ಹೇಳಿವೆ. ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ತೀವ್ರ ಬಿಸಿಲಿರುತ್ತದೆ. ಬಿಸಿಲಿನ ಪ್ರಖರತೆಯಿಂದ ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರಗಡೆ ಬರಲು ಆಗುತ್ತಿಲ್ಲ. ಈಗಲೇ ಈ ಸ್ಥಿತಿಯಾದರೆ ಜನವರಿ,ಫೆಬ್ರುವರಿ ವೇಳೆಗೆ ಹೇಗೆ ಎನ್ನುತ್ತಿದ್ದಾರೆ ನಗರದ ಜನತೆ.

ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಪೂರ್ವದಲ್ಲೇ ಅಂದರೆ ಮೇ ತಿಂಗಳ ಅಂತ್ಯದಲ್ಲಿ ಉತ್ತಮ ಮಳೆಯಾಗಿತ್ತು. ನಂತರ ಜುಲೈ, ಆಗಸ್ಟ್‌ ತಿಂಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿತ್ತು. ನೀರಿನ ಸೆಲೆ ಕಣ್ಮರೆಯಾಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ. ಇದರಿಂದಾಗಿ ಬಿಸಿಲ ಧಗೆ ಹೆಚ್ಚುತ್ತಿದೆ. ಇನ್ನೊಂದೆಡೆ ಒಣಹವೆ ಕೂಡ ಹೆಚ್ಚಾಗುತ್ತಿದೆ.

ಕುಡಿಯುವ ನೀರಿನ ಸಮಸ್ಯೆ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಜನರು ಕುಡಿಯುವ ನೀರಿಗೆ ಕೆರೆಗಳನ್ನೇ ಆಶ್ರಯಿಸಿದ್ದಾರೆ. ಕೆಲವು ಕಡೆ ನದಿ ನೀರಿನಿಂದ ಕೆರೆ ತುಂಬಿಸಿದ್ದಾರೆ. ಇನ್ನು ಕೆಲವಡೆ ಕೆರೆ ನೀರು ಬತ್ತುತ್ತಾ ಬಂದಿದೆ. ಹೀಗಾಗಿ ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೆ ಬಳಸಲು ನೀರಿನ ಅಭಾವ ಉಂಟಾಗಿದೆ. ಕಳೆದ ಬೇಸಿಗೆಯಲ್ಲಿ ಜಿಲ್ಲೆಯ 33 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಎದುರಾಗಿತ್ತು. ಕೆಲವೆಡೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗಿತ್ತು.ಸದ್ಯ ನರೇಗಲ್‌ ಹೋಬಳಿ, ಗಜೇಂದ್ರಗಡ ವ್ಯಾಪ್ತಿಯಲ್ಲಿ ಸಂಪೂರ್ಣ ಬೇಸಿಗೆಯ ಸ್ಥಿತಿ ನಿರ್ಮಾಣವಾಗಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಲಕ್ಕಲಕಟ್ಟಿಯಂತಹ ಕೆಲವು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ್ನು ತರಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ತೇವಾಂಶ ಕೊರತೆಯಿಂದ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಒಣಗಲು ಪ್ರಾರಂಭಿಸಿರುವ ಬಳ್ಳಿ ಶೇಂಗಾ ಬೆಳೆ

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !