ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಲ್ಲಿ ಸಮಸ್ಯೆಗಳ ಮಹಾಪೂರ..!

7
ಕಡಕೋಳ ಗ್ರಾಮ; ಸಾರಾಯಿ ನಿಷೇಧ ಮಾಡದಿದ್ದರೆ ಮಹಿಳೆಯರಿಂದ ಸಾಮೂಹಿಕ ಆತ್ಮಹತ್ಯೆ ಬೆದರಿಕೆ

ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಲ್ಲಿ ಸಮಸ್ಯೆಗಳ ಮಹಾಪೂರ..!

Published:
Updated:
Deccan Herald

ಶಿರಹಟ್ಟಿ: ‘ನಮ್ಮ ಗ್ರಾಮಕ್ಕ ನೀವು ಏನೂ ಸೌಲಭ್ಯ ಕೊಡಲಿಲ್ಲಾ ಅಂದ್ರೂ ಅಡ್ಡಿಯಿಲ್ಲ. ಸೆರೆ(ಸರಾಯಿ) ಮಾತ್ರ ಬಂದ್‌ ಮಾಡಸ್ರಿ. ನಾವು ಮತ್ತ ನಮ್ಮ ಮಕ್ಕಳು ಚಂದಗಿ ಇರ್ತಿವಿ. ನೀವು ಬಂದ್‌ ಮಾಡದಿದ್ರೆ ಸಾಮೂಹಿಕ ಆತ್ಮಹತ್ಯೆ ಮಾಡ್ಕೋತೀವಿ ಸಾಹೇಬ್ರ, ಇದು ಖರೇ ನೋಡ್ರಿ ಮತ್ತ,’.

ತಾಲ್ಲೂಕಿನ ಕಡಕೋಳ ಗ್ರಾಮದಲ್ಲಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಗುರುವಾರ ನಡೆಸಿದ ಗ್ರಾಮವಾಸ್ತವ್ಯ ಮತ್ತು ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಗ್ರಾಮದ ಮಹಿಳೆಯರು ಅವರಿಗೆ ಮನವಿ ಮಾಡಿಕೊಂಡ ಪರಿ ಇದು.

‘ಗ್ರಾಮದಲ್ಲಿ ಕುಡಿಯಲು ಹನಿ ನೀರಿಲ್ಲ. ಆದರೆ, ಸಾರಾಯಿ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆದಿದೆ. ಗ್ರಾಮದ ಪ್ರತಿ ಅಂಗಡಿಗಳಲ್ಲಿ ಸರಾಯಿ ಸಿಗುತ್ತದೆ.ನಮ್ಮ ಬದುಕು ಕಷ್ಟಕರವಾಗುತ್ತಿದೆ. ಸರಾಯಿ ಅಂಗಡಿಯವರು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆ. ಜೇಬಿನಲ್ಲೇ ಸರಾಯಿ ಪಾಕೀಟು ಇಟ್ಟುಕೊಂಡು ರಾಜಾರೋಷವಾಗಿ ಮಾರಾಟ ಮಾಡುತ್ತಾರೆ. ರಾತ್ರಿ ಮಹಿಳೆಯರು ಸಂಚರಿಸಲು ಭಯ ಪಡುವಂತಾಗಿದೆ’ ಎಂದು ಅವಲತ್ತುಕೊಂಡರು.
ತಕ್ಷಣ ಪೋಲಿಸ್‌ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡ ಜಿಲ್ಲಾಧಿಕಾರಿ, ಗ್ರಾಮದಲ್ಲಿ ತಕ್ಷಣ ಅಕ್ರಮ ಸರಾಯಿ ಬಂದ್‌ ಮಾಡಲು ಕ್ರಮ ಕೈಗೊಳ್ಳಬೇಕು, ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು

‘ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ನಿರ್ವಹಿಸುತ್ತಿರುವ ಎಲ್‌ ಆ್ಯಂಡ್‌ ಟಿ ಕಂಪನಿಗೆ ಈಗಾಗಲೇ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ, ನೀರು ಪೂರೈಸುವಂತೆ ತಾಕೀತು ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ನಿರು ತುಂಬಿಸುವಂತೆ ಜನರು ಮನವಿ ಮಾಡಿಕೊಂಡಿದ್ದಾರೆ, ಇದಕ್ಕೆ  ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ಕಡಕೋಳ ಗ್ರಾಮದಲ್ಲಿ  ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಳೆಗಾಲದಲ್ಲಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲು ಪಿಡಿಒಗೆ ಸೂಚಿಸಲಾಗಿದೆ ಎಂದರು.

ಶಾಸಕ ರಾಮಣ್ಣ ಲಮಾಣಿ, ಉಪವಿಭಾಗಾಧಿಕಾರಿ ಮಂಜುನಾಥ ಚವ್ಹಾಣ, ಜಿಲ್ಲಾ ಪಂಚಾಯ್ತಿ ಸದಸ್ಯೆ ರೇಖಾ ಅಳವಂಡಿ, ತಾಲ್ಲೂಕ ಪಂಚಾಯ್ತಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ,ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿರೂಪಾಕ್ಷಪ್ಪ ಗೌಳಿ, ಉಪಾಧ್ಯಕ್ಷೆ ಸೀತಮ್ಮ ಅಕ್ಕಿ, ತಹಶೀಲ್ದಾರ್‌ ಎ.ಡಿ. ಅಮರಾವದಗಿ, ತಾಲ್ಲೂಕು ಪಂಚಾಯ್ತಿ ಇ.ಒ ಆರ್‌.ವೈ. ಗುರಿಕಾರ ಇದ್ದರು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !