ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ಅವಧಿಯಲ್ಲಿ ಸಮೀಕ್ಷೆ ಮುಗಿಸಿ

ತಾಲ್ಲೂಕು ಮಟ್ಟದ ಅಧಿಕಾರಿಗಳ ಜತೆಗೆ ವಿಡಿಯೊ ಕಾನ್ಫರೆನ್ಸ್‌: ಜಿಲ್ಲಾಧಿಕಾರಿ ಸೂಚನೆ
Last Updated 27 ಸೆಪ್ಟೆಂಬರ್ 2020, 3:07 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ಯಾವೊಬ್ಬ ರೈತರೂ ಬೆಳೆ ಸಮೀಕ್ಷೆಯಿಂದ ವಂಚಿತರಾಗಬಾರದು. ಮಳೆಯಿಂದ ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಜಂಟಿ ಸಮೀಕ್ಷೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.

ಗದಗ ಜಿಲ್ಲಾ ಪಂಚಾಯ್ತಿ ಕಾರ್ಯಾಲಯದಲ್ಲಿ ನಡೆದ ತಹಶೀಲ್ದಾರ್‌ಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ಕೃಷಿ, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗಿನ ವಿಡಿಯೊ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ಮನೆ ಹಾಗೂ ಜಾನುವಾರುಗಳ ಸಮೀಕ್ಷೆ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ, ಪರಿಹಾರ ಒದಗಿಸಲು ಕ್ರಮ ವಹಿಸಬೇಕು. ಜಿಲ್ಲೆಯ ನದಿ ಪಾತ್ರದ ಗ್ರಾಮಗಳು ಪ್ರತಿವರ್ಷ ಪ್ರವಾಹ ಭೀತಿಗೆ ಒಳಗಾಗುತ್ತಿದ್ದು ಆಸ್ತಿ, ಜನ, ಜಾನುವಾರು ಹಾಗೂ ಬೆಳೆ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಪ್ರತಿವರ್ಷ ಪ್ರವಾಹಕ್ಕೆ ತುತ್ತಾಗುವ ಗ್ರಾಮಗಳಾದ ಲಖಮಾಪುರ ಹಾಗೂ ಕೊಣ್ಣೂರು ಗ್ರಾಮಗಳ ಜನತೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಸ್ಥಳ ಗುರುತಿಸಬೇಕು. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸಾರ್ವಜನಿಕರ ಒಪ್ಪಿಗೆ ಪಡೆದು ಗ್ರಾಮಸಭೆಯಲ್ಲಿ ಠರಾವು ಅನುಮೋದಿಸಿ, ಪ್ರಸ್ತಾವ ಕಳುಹಿಸಿಕೊಡಬೇಕು ಎಂದು ಸೂಚನೆ ನೀಡಿದರು.

ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಖರೀದಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ರೈತರಿಂದ ನೋಂದಣಿ ಮಾಡುವ ಪ್ರಕ್ರಿಯೆ ಪ್ರಾರಂಭಿಸಲು ಕೇಂದ್ರಗಳನ್ನು ತೆರೆಯಲಾಗಿದೆ. ಆಯಾ ತಾಲ್ಲೂಕಿನ ತಹಶೀಲ್ದಾರರು ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕು. ರೈತರಿಗೆ ಖರೀದಿ ಕೇಂದ್ರಗಳ ಮಾಹಿತಿ ಒದಗಿಸಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು. ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್‌ ಕೆ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್.ರುದ್ರೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ ಬಸರಿಗಿಡದ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT