ಗುರುವಾರ , ಜನವರಿ 21, 2021
23 °C
ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ-: ಜಿಲ್ಲಾಧಿಕಾರಿ ಸುಂದರೇಶ ಬಾಬು ಸೂಚನೆ

ಮಕ್ಕಳ ರಕ್ಷಣಾ ನೀತಿ ಸಿದ್ಧಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಮಕ್ಕಳ ಪಾಲನೆ– ಪೋಷಣೆ, ಹಕ್ಕುಗಳ ರಕ್ಷಣೆಗೆ ಸಂಬಂಧಪಟ್ಟಂತೆ ಜಿಲ್ಲೆಯ ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳ ಸಲಹೆ ಪಡೆದು ಸಮಗ್ರವಾಗಿ ಮಕ್ಕಳ ರಕ್ಷಣಾ ನೀತಿ ರೂಪಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲನ್ಯಾಯ ಮಂಡಳಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಬಾಲನ್ಯಾಯ ನಿಧಿ ಯೋಜನೆ ಅಡಿ ಇಬ್ಬರಿಗೆ, ವಿಶೇಷ ಪಾಲನಾ ಯೋಜನೆ ಅಡಿ 399 ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಮೂವರು ಮಕ್ಕಳು ವಿಶೇಷ ದತ್ತು ಕೇಂದ್ರಕ್ಕೆ ಹೊಸದಾಗಿ ದಾಖಲಾಗಿದ್ದು, ಒಂದು ಮಗುವನ್ನು ಹೈದರಾಬಾದ್ ದಂಪತಿಗೆ ದತ್ತು ನೀಡಲಾಗಿದೆ. ಇಬ್ಬರು ಮಕ್ಕಳನ್ನು ದತ್ತು ಪೂರ್ವ ಪೋಷಕತ್ವಕ್ಕೆ ನೀಡಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವಿನಾಶಲಿಂಗ ಗೋಟಖಿಂಡಿ ತಿಳಿಸಿದರು.

ದತ್ತು ಮಾಸಾಚರಣೆ ಪ್ರಯುಕ್ತ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನ.20ರಿಂದ ಡಿ.1ರವರೆಗೆ ದತ್ತು ಕಾರ್ಯಕ್ರಮ, ಬಾಲ್ಯವಿವಾಹ ನಿಷೇಧ, ಬಾಲ ಕಾರ್ಮಿಕತೆ ನಿಷೇಧ, ಭಿಕ್ಷಾಟನೆ, ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಅರಿವು ಮೂಡಿಸಲಾಗಿದೆ ಎಂದು ತಿಳಿಸಿದರು.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 82 ಪ್ರಕರಣಗಳಿದ್ದು, ಬಾಲನ್ಯಾಯ ಮಂಡಳಿ ಮುಂದೆ ಬಂದ 23 ಪ್ರಕರಣಗಳು ಇತ್ಯರ್ಥವಾಗಿವೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಬಾಕಿ ಉಳಿದ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಗೊಳಿಸಲು ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಸರ್ಕಾರವು ಉಪಕಾರ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಅಡಿ ಪಾಲನಾ ಸಂಸ್ಥೆಯಿಂದ ಬಿಡುಗಡೆಯಾದ ಮಕ್ಕಳ ಉನ್ನತ ವ್ಯಾಸಾಂಗ ಮತ್ತು ಸ್ವ-ಉದಯೋಗಕ್ಕಾಗಿ ಪ್ರತಿ ತಿಂಗಳು ₹5 ಸಾವಿರದಂತೆ 3 ವರ್ಷಗಳ ಕಾಲ ಸಹಾಯಧನ ಪಡೆಯಬಹುದು’ ಎಂದು ತಿಳಿಸಿದರು.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸುವುದು, ಸಮನ್ವಯ ಹಾಗೂ ಸಹಭಾಗಿತ್ವ ಸಭೆ, ಬಾಲಕಿಯರ ಬಾಲಮಂದಿರ ಹೊಸ ಕಟ್ಟಡ ನಿರ್ಮಾಣ ಪ್ರಗತಿ, ಮಕ್ಕಳ ಸ್ನೇಹಿ ನ್ಯಾಯಾಲಯ ಕಾಮಗಾರಿ ಪ್ರಗತಿ ಕುರಿತು ಚರ್ಚಿಸಲಾಯಿತು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ., ಮಕ್ಕಳ ಕಲ್ಯಾಣಾಧಿಕಾರಿ ಕಿರಣ ಕಾಂಬ್ಳೆ, ಮಂಜುನಾಥ ಬಮ್ಮನಕಟ್ಟಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಸಿ.ಎಸ್ ಬೊಮ್ಮನಹಳ್ಳಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಾ ಗಂಧದ, ಬಾಲನ್ಯಾಯ ಮಂಡಳಿಯ ಸಮನ್ವಯಾಧಿಕಾರಿ ಐ.ಕೆ.ಮಣಕವಾಡ, ಅಮೂಲ್ಯ ವಿಶೇಷ ದತ್ತು ಕೇಂದ್ರದ ಸದಸ್ಯ ಚನ್ನಪ್ಪನವರ ಇದ್ದರು.

‘ಮಕ್ಕಳ ಮಾದರಿ ಗ್ರಾಮ ಸಭೆ ನಡೆಸಿ’

‘ಜಿಲ್ಲೆಯ 122 ಗ್ರಾಮ ಪಂಚಾಯ್ತಿಗಳಲ್ಲಿ 41 ಗ್ರಾಮ ಪಂಚಾಯ್ತಿಗಳು ಮಕ್ಕಳ ಸ್ನೇಹಿ ಗ್ರಾಮಸಭೆಗಳನ್ನು ಆಯೋಜಿಸಿವೆ. ಪ್ರತಿ ತಾಲ್ಲೂಕಿನಲ್ಲಿ ಆಯ್ದ 2 ಗ್ರಾಮ ಪಂಚಾಯ್ತಿಗಳಲ್ಲಿ ಮಕ್ಕಳ ಮಾದರಿ ಗ್ರಾಮ ಸಭೆಗಳನ್ನು ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯ್ತಿ ಇಒಗಳನ್ನು ಸಂಪರ್ಕಿಸಿ ಅವರ ಮಾರ್ಗದರ್ಶನದಲ್ಲಿ ಪಿಡಿಒಗಳು ಮತ್ತು ಗ್ರಾಮ ಲೆಕ್ಕಿಗರೊಟ್ಟಿಗೆ ಆಯೋಜಿಸಲು ಕ್ರಮವಹಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಆನಂದ್‌ ಕೆ. ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.