ಭಾನುವಾರ, ಮೇ 16, 2021
22 °C
ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಜತೆಗೆ ಜಿಲ್ಲಾಧಿಕಾರಿ ಸಭೆ

ಸೋಂಕಿತರ ಚಿಕಿತ್ಸೆ: ನಿಷ್ಕಾಳಜಿ ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸೋಂಕಿತರ ಆರೋಗ್ಯದ ಸ್ಥಿತಿಗೆ ಅನುಸಾರವಾಗಿ ಆಕ್ಸಿಜನ್, ಐಸಿಯು ಸೌಲಭ್ಯ ಒದಗಿಸಬೇಕು. ಅಗತ್ಯವಿದ್ದವರಿಗೆ ಮಾತ್ರ ರೆಮ್‌ಡಿಸಿವರ್ ಲಸಿಕೆ ನೀಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ವೈದ್ಯರಿಗೆ ಸೂಚಿಸಿದರು.

ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಜಿಮ್ಸ್‌) ಶುಕ್ರವಾರ ವೈದ್ಯಕೀಯ ಸಿಬ್ಬಂದಿ ಜತೆಗೆ ನಡೆಸಿದ ಕೋವಿಡ್-19 ನಿಯಂತ್ರಣ ಹಾಗೂ ಚಿಕಿತ್ಸೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸೋಂಕಿಗೆ ತುತ್ತಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ರೋಗಿಗಳನ್ನು ಜಿಮ್ಸ್‌ಗೆ ದಾಖಲಿಸಲಾಗುತ್ತಿದೆ. ಚಿಕಿತ್ಸೆ ನೀಡುವಾಗ ನಿಷ್ಕಾಳಜಿತ ತೋರಬಾರದು. ಸೋಂಕಿತರು ಶೀಘ್ರ ಗುಣಮುಖರಾಗಲು ಅನುವಾಗುವಂತೆ ಸರ್ಕಾರ ನಿಗದಿಪಡಿಸಿದ ಔಷಧೋಪಚಾರ ಮಾಡಬೇಕು. ಬಿಸಿ ಆಹಾರ, ಕುಡಿಯಲು ಶುದ್ಧ ಬೀಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಆಸ್ಪತ್ರೆಯ ಶುಚಿತ್ವದ ಕಡೆಗೆ ಹೆಚ್ಚಿನ ಗಮನ ನೀಡಬೇಕು’ ಎಂದು ಸೂಚಿಸಿದರು.

‘ಸೋಂಕಿತ ವ್ಯಕ್ತಿಗಳ ಕುಟುಂಬದವರಿಗೆ ರೋಗಿಯ ಆರೋಗ್ಯ ಸ್ಥಿತಿಗತಿಯ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಒದಗಿಸಬೇಕು. ಅಲ್ಲದೇ ಸೋಂಕಿತರು ಹಾಗೂ ಕುಟುಂಬ ವರ್ಗದವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು’ ಎಂದು ತಿಳಿಸಿದರು.

‘ಕೋವಿಡ್‌ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲು ಅನುಕೂಲವಾಗುವಂತೆ ಮೈಕ್ರೋಬಯಾಲಜಿಸ್ಟ್‌ಗಳು, ತಾಂತ್ರಿಕ ಸಿಬ್ಬಂದಿ ಒದಗಿಸಲಾಗುವುದು. ಜಿಮ್ಸ್‌ ಆಸ್ಪತ್ರೆಯಲ್ಲಿ 13 ಕೆ.ಎಲ್. ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್‌ ಹಾಗೂ 200 ಜಂಬೋ ಸಿಲಿಂಡರ್ ಸಾಮರ್ಥ್ಯದ ಆಮ್ಲಜನಕ ಲಭ್ಯವಿದೆ. ಅದನ್ನು ಬಳಸಿಕೊಂಡು ಜೀವಹಾನಿ ತಪ್ಪಿಸಬೇಕು. ಅಗತ್ಯವಿದ್ದಲ್ಲಿ ಜಿಮ್ಸ್‌ ಆವರಣದಲ್ಲಿರುವ ವಸತಿ ನಿಲಯವನ್ನು ಕೋವಿಡ್ ಕೇರ್ ಸೆಂಟರ್‌ ಆಗಿ ಪರಿವರ್ತಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್. ಮಾತನಾಡಿ, ಪ್ರಯಾಣಕ್ಕಾಗಿ ಸಾರಿಗೆ ಸಂಸ್ಥೆ ಬಸ್‌ ಒದಗಿಸುವಂತೆ ಜಿಮ್ಸ್‌ ಸಿಬ್ಬಂದಿಯಿಂದ ಬೇಡಿಕೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆಗೆ ಚರ್ಚಿಸಿ ಬಸ್‌ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಲ್ಲೇದ, ಸಹಾಯಕ ಔಷಧಿ ನಿಯಂತ್ರಕ ಸಂಗಣ್ಣ ಶಿಳ್ಳೆ, ಜಿಮ್ಸ್‌ನ ವೈದ್ಯರು, ತಾಂತ್ರಿಕ ಸಹಾಯಕರು, ಸಿಬ್ಬಂದಿ ಇದ್ದರು.

ಜಿಲ್ಲಾಧಿಕಾರಿ ನಿರ್ದೇಶನದಂತೆ ಜಿಮ್ಸ್‌ನ ವೈದ್ಯರು ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಜೀವ ಹಾನಿ ತಪ್ಪಿಸಿ ಸೋಂಕಿತರು ಶೀಘ್ರ ಗುಣಮುಖರಾಗಲು ಶ್ರಮಿಸಬೇಕು
ಡಾ.ಪಿ.ಎಸ್.ಭೂಸರೆಡ್ಡಿ
ಜಿಮ್ಸ್‌ ನಿರ್ದೇಶಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.