ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಪತ್ತು ನಿರ್ವಹಣೆಗೆ ಸಿದ್ಥತೆ ಅಗತ್ಯ: ಎಂ.ಸುಂದರೇಶ್ ಬಾಬು

ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಪ‍್ರಕ್ರಿಯೆಯನ್ನು ಚುರುಕುಗೊಳಿಸಲು ಸೂಚನೆ
Last Updated 3 ಜುಲೈ 2021, 15:21 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಆಗುವ ಪ್ರಾಣಹಾನಿ ತಡೆಯಲು ತಾಲ್ಲೂಕು ಆಡಳಿತಗಳು ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರವಾಹ ಪರಿಸ್ಥಿತಿ ನಿರ್ವಹಣೆಗೆತಾಲ್ಲೂಕು ಆಡಳಿತಗಳು ಪ್ರತಿವಾರ ಸಭೆ ನಡೆಸಿ, ಚರ್ಚಿಸಿ ಯೋಜನೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಪ್ರವಾಹ ತಲೆದೋರಿದ ಪ್ರದೇಶದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಜನ ಜಾನುವಾರುಗಳ ರಕ್ಷಣೆ ಮಾಡಬೇಕು. ಕಾಳಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ವ್ಯವಸ್ಥೆ ಕಲ್ಪಿಸಿಕೊಡಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಆರಂಭಗೊಂಡಿದ್ದು, ರೈತರಿಗೆ ಅಗತ್ಯವಿರುವ ಬಿತ್ತನೆಬೀಜ, ಗೊಬ್ಬರ ಹಾಗೂ ಕೀಟನಾಶಕಗಳ ಕೊರತೆಯಾಗದಂತೆ ಕ್ರಮವಹಿಸಬೇಕು. ರೈತರು ಬೆಳೆದ ಬೆಳೆಗೆ ವಿಮೆ ಮಾಡಿಸುವಂತೆ ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ಲಸಿಕೆ ಪ್ರಕ್ರಿಯೆ ಚುರುಕಿನಿಂದ ನಡೆಯುತ್ತಿದ್ದು ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ಸೂಚಿಸಲಾಗಿದೆ. ಜಿಲ್ಲೆಗೆ ಹಂಚಿಕೆಯಾಗಿರುವ ಲಸಿಕೆ ಪ್ರಮಾಣದ ಅನುಸಾರವಾಗಿ ಆದ್ಯತೆ ಮೇರೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಬೇಕು. ಅದೇರೀತಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೂ ಲಸಿಕೆ ಹಾಕಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಭರತ್ ಎಸ್. ಮಾತನಾಡಿ, ‘ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸಿಸುವವರು ಹಾಗೂ ತಗ್ಗು ಪ್ರದೇಶದ ಮನೆಗಳಲ್ಲಿ ಇರುವವರನ್ನು ಗುರುತಿಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು’ ಎಂದು ಸೂಚಿಸಿದರು.

ಡಿಸಿಎಫ್‌ ಎ.ವಿ.ಸೂರ್ಯಸೇನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‌ ಕುಮಾರ್ ಎಂ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಡಿಡಿಎಲ್‌ಆರ್‌ ರವಿಕುಮಾರ್, ಡಿಎಚ್‌ಒ ಡಾ. ಸತೀಶ್‌ ಬಸರಿಗಿಡದ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಹಶೀಲ್ದಾರರು, ಇಒಗಳು ಇದ್ದರು.

ಮಕ್ಕಳಿಗೆ ಸೋಂಕು: 15 ಸಕ್ರಿಯ ಪ್ರಕರಣ

‘ಜಿಲ್ಲೆಯಲ್ಲಿ 0–18 ವರ್ಷದೊಳಗಿನ ಮಕ್ಕಳ ಪೈಕಿ ಗದಗ ತಾಲ್ಲೂಕಿನಲ್ಲಿ 1,072 ಮಂದಿಗೆ ಸೋಂಕು ದೃಢಪಟ್ಟಿದ್ದು, ಅದರಲ್ಲಿ ಪ್ರಕರಣಗಳು 11 ಸಕ್ರಿಯವಾಗಿವೆ’ ಎಂದು ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಜಗದೀಶ್ ನುಚ್ಚಿನ ತಿಳಿಸಿದರು.

‘ಮುಂಡರಗಿಯಲ್ಲಿ 323 ಮಕ್ಕಳು ಸೋಂಕಿತರಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1, ರೋಣದಲ್ಲಿ 393 ಮಕ್ಕಳು ಸೋಂಕಿಗೆ ಒಳಗಾಗಿದ್ದು, ಅದರಲ್ಲಿ ಸಕ್ರಿಯ ಪ್ರಕರಣ 1, ಶಿರಹಟ್ಟಿಯಲ್ಲಿ 374 ಮಕ್ಕಳು ಸೋಂಕಿತರಿದ್ದು, ಸಕ್ರಿಯ ಪ್ರಕರಣ 2 ಇವೆ. ಜಿಲ್ಲೆಯ ಒಟ್ಟು ಕೋವಿಡ್ ಸೋಂಕಿತ ಮಕ್ಕಳ ಪೈಕಿ ಸದ್ಯಕ್ಕೆ 15 ಸಕ್ರಿಯ ಪ್ರಕರಣಗಳಿವೆ’ ಎಂದು ಮಾಹಿತಿ ಒದಗಿಸಿದರು.

ಶೇ 33ರಷ್ಟು ಪ್ರಗತಿ

‘ಜಿಲ್ಲೆಗೆ ಹಂಚಿಕೆಯಾಗುತ್ತಿರುವ ಲಸಿಕೆಗಳನ್ನು ಎಲ್ಲ ಕೇಂದ್ರಗಳಿಗೆ ಸಮನಾಗಿ ವಿತರಿಸಲಾಗುತ್ತಿದೆ. ಹೆಚ್ಚಿನ ಲಸಿಕೆಗಾಗಿ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಬಿ.ಎಂ.ಗೋಜನೂರ ತಿಳಿಸಿದರು.

‘ಆದ್ಯತಾ ಗುಂಪು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಶೇ 33ರಷ್ಟು ಲಸಿಕಾಕರಣ ಆಗಿದೆ’ ಎಂದು ಮಾಹಿತಿ ನೀಡಿದರು.

*
ಗ್ರಾಮೀಣ ಪ್ರದೇಶದ ಚರಂಡಿ ಹಾಗೂ ಮುಖ್ಯ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಮುಂದೆ ಸಾಗುವಂತೆ ಸ್ವಚ್ಛತಾ ಕಾರ್ಯವನ್ನು ಗ್ರಾಮ ಪಂಚಾಯ್ತಿಗಳು ಮಾಡಬೇಕು.
-ಭರತ್‌ ಎಸ್‌., ಸಿಇಒ, ಜಿಲ್ಲಾ ಪಂಚಾಯ್ತಿ ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT