ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಲ್ಪದ ಜತೆಗೆ ಸ್ಪಷ್ಟ ಗುರಿ ಇರಲಿ: ಡಾ. ದೀಪಾ ಗಾಣಿಗೇರ್

ಎರಡನೇ ಪ್ರಯತ್ನದಲ್ಲೇ ಯಶಸ್ಸು ‌
Last Updated 8 ಮಾರ್ಚ್ 2021, 5:22 IST
ಅಕ್ಷರ ಗಾತ್ರ

ಗದಗ: ನಾಲ್ಕನೇ ಇಯತ್ತೆಯಲ್ಲಿ ಕಂಡ ಕನಸನ್ನು ಎರಡನೇ ಪ್ರಯತ್ನದಲ್ಲೇ ಈಡೇರಿಸಿಕೊಂಡ ಖುಷಿ ನನ್ನದು. ಗದಗ ಜಿಲ್ಲೆಯ ಹೊಳೆ ಇಟಗಿ ಗ್ರಾಮದವಳಾದ ನಾನೀಗ ತಮಿಳುನಾಡಿನ ಸೇಲಂ ಜಿಲ್ಲೆಯ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅತ್ಯುನ್ನತ ಸೇವೆಗಾಗಿ ಈಚೆಗಷ್ಟೇ ತಮಿಳುನಾಡು ಸರ್ಕಾರ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದ್ದು ಖುಷಿ ನೀಡಿದೆ.

ತಂದೆ ಅಬಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. ಅವರ ಜತಗೆ ಸಭೆ, ಸಮಾರಂಭಕ್ಕೆ ಹೋದಾಗಲೆಲ್ಲ ಗೂಟದ ಕಾರು, ಅಧಿಕಾರಿಗಳ ಠಾಕುಠೀಕು ನನ್ನನ್ನು ರೋಮಾಂಚನಗೊಳಿಸುತ್ತಿತ್ತು. 10 ವರ್ಷದ ಬಾಲಕಿಯಾಗಿದ್ದಾಗಲೇ ನಾನು ಚೆನ್ನಾಗಿ ಓದಿ ಜಿಲ್ಲಾಧಿಕಾರಿಯೇ ಆಗಬೇಕು ಎಂಬ ಸಂಕಲ್ಪ ಮಾಡಿಕೊಂಡಿದ್ದೆ. ಗುರಿ ಸ್ಪಷ್ಟವಾಗಿತ್ತು. ಅದನ್ನು ತಲುಪುವ ಸರಿಯಾದ ಮಾರ್ಗವನ್ನು ಪೋಷಕರು ತೋರಿಸಿದರು.

ವಿಜಯಪುರದ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಪೂರೈಸಿದ ಬಳಿಕ ಆರುತಿಂಗಳು ದೆಹಲಿಯಲ್ಲಿ ತರಬೇತಿ ಪಡೆದೆ. ಮೊದಲ ಬಾರಿಗೆ 2011ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದೆ. ಪ್ರಥಮ ಪ್ರಯತ್ನದಲ್ಲೇ ಸಂದರ್ಶನ ಹಂತದವರೆಗೆ ತಲುಪಿ ಬಂದೆ. ಛಲ ಬಿಡದೇ ಮರುವರ್ಷ ಪರೀಕ್ಷೆ ಎದುರಿಸಿ 2012ನೇ ಬ್ಯಾಚ್‌ನ ತಮಿಳುನಾಡು ಕೇಡರ್‌ ಐಪಿಎಸ್‌ ಅಧಿಕಾರಿಯಾಗಿ ಆಯ್ಕೆಯಾದೆ. ಜಿಲ್ಲಾಧಿಕಾರಿಯಾಗುವ ಆಸೆ ಇತ್ತು. ಆದರೆ, ರ‍್ಯಾಂಕಿಂಗ್‌ನಲ್ಲಿ ಐಪಿಎಸ್‌ ಅಧಿಕಾರಿಯಾಗುವ ಅವಕಾಶ ಸಿಕ್ಕಿತು.ಸವಾಲು ಎದುರಿಸುವ, ಚಾಕಚಕ್ಯತೆ ಬೇಡುವ ಪೊಲೀಸ್‌ ವೃತ್ತಿ ಸಂತೃಪ್ತಿ ನೀಡಿದೆ. ಪತಿ ಸಂತೋಷ ಹಾದಿಮನಿ ನವದೆಹಲಿಯ ಸಿಬಿಐನಲ್ಲಿ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಅಧಿಕಾರಿಗಳಿಗೆ ರಾಜಕಾರಣಿಗಳಿಂದ ಹಸ್ತಕ್ಷೇಪ, ಒತ್ತಡ ಇಲ್ಲ. ಹುದ್ದೆಗೆ ತಕ್ಕ ಗೌರವ ಸಿಗುತ್ತದೆ. ಕಾನೂನಿನಂತೆ ಕೆಲಸ ಮಾಡಲು ಯಾವುದೇ ಅಡ್ಡಿ ಇಲ್ಲ. ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರ ಮತಕ್ಷೇತ್ರ ಎಡಪ್ಪಾಡಿ ಸೇಡಂ ಜಿಲ್ಲೆಯಲ್ಲಿಯೇ ಬರುತ್ತದೆ. ಒತ್ತಡರಹಿತವಾಗಿ ಕೆಲಸ ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ.

ಹೆಣ್ಣು ಎಂದು ಹಿಂದೆ ಉಳಿಯುವ ಕಾಲ ದೂರವಾಗಿದೆ. ಸಮಾನತೆಯ ಮಂತ್ರ ಎಲ್ಲೆಡೆ ಅನುರಣಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಅವಕಾಶಗಳು ಅನಿಯಮಿತ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆತ್ಮಸ್ಥೈರ್ಯದೊಂದಿಗೆ ಮುನ್ನುಗ್ಗಿದರೆ ಗುರಿ ಸಾಧಿಸಬಹುದು.

ನಿರೂಪಣೆ: ಕೆ.ಎಂ.ಸತೀಶ್‌ ಬೆಳ್ಳಕ್ಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT