ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯತೆಯೇ ಭಾರತೀಯರ ರಾಷ್ಟ್ರೀಯ ಧರ್ಮ: ಇಬ್ರಾಹಿಂ

ವಾಗ್ಮಿ ಇಬ್ರಾಹಿಂ ಸುತಾರ್‌ ಅಭಿಮತ
Last Updated 5 ಮಾರ್ಚ್ 2018, 10:08 IST
ಅಕ್ಷರ ಗಾತ್ರ

‘ಬಹುತ್ವ ಭಾರತದ ಮಣ್ಣಿನ ಗುಣವಾಗಿದೆ. ಇಲ್ಲಿ ಅರಾಧನೆ ಬೇರೆಯಾದರೂ ಆರಾಧ್ಯ ಒಬ್ಬನೇ. ಅವನೇ ದೇವನು. ಅಂತೆಯೇ, ಭಾವೈಕ್ಯತೆ ಭಾರತೀಯರ ರಾಷ್ಟ್ರೀಯ ಧರ್ಮವಾಗಿದೆ’ ಎಂದು ಖ್ಯಾತ ವಾಗ್ಮಿ, ಪದ್ಮಶ್ರೀ ಪುರಸ್ಕೃತ ಮಹಾಲಿಂಗಪುರದ ಇಬ್ರಾಹಿಂ ಸುತಾರ್‌ ತಿಳಿಸಿದರು.

ಇಲ್ಲಿನ ಮಳಖೇಡ್‌ದಲ್ಲಿ ಕಲಬುರ್ಗಿ ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ನಡೆದ ರಾಷ್ಟ್ರಕೂಟ ಉತ್ಸವದಲ್ಲಿ ಅವರು ವಿಶೇಷ ಅನುಭಾವ ನೀಡಿದರು.

ಅನುಭಾವದುದ್ದಕ್ಕೂ ಅಲ್ಲಲ್ಲಿ ದೇವರು, ಧರ್ಮ, ಶರಣರ ವಚನ ಮತ್ತು ಕನ್ನಡ ಹೆಗ್ಗಳಿಕೆ ಮತ್ತು ತತ್ವಜ್ಞಾನದ ಕುರಿತು ಹಾಡು ಹೇಳುತ್ತ 45 ನಿಮಿಷಗಳ ಕಾಲ ನಿರರ್ಗಳವಾಗಿ ಮಾತನಾಡಿದರು.

‘ನಿಸರ್ಗದ ಚರ, ಅಚರ ಜೀವಿಗಳನ್ನು ನಿಯಂತ್ರಿಸುವ ಅವ್ಯಕ್ತ ಮಹಾಶಕ್ತಿಯುಳ್ಳ ಮಹಾ ಚೈತನ್ಯವೇ ದೇವರು’ ಎಂದು ಬಣ್ಣಿಸಿದ ಅವರು, ‘ಬಸವಣ್ಣನವರ ಜಗದಗಲ ಮಿಗೆಯಗಲ ಮಿಗೆಯಗಲ ವಚನಗಳ ಸಾಲು, ಅಂಬಿಗರ ಚೌಡಯ್ಯನವರ ಅಸುರರ ಮಾಲೆಗಳಲ್ಲಿಲ್ಲ ’ಎಂಬ ವಾಣಿ, ಅಕ್ಕ ಮಹಾದೇವಿಯ ‘ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವ’ ಎಂಬ ಸಾಲುಗಳು, ‘ಕಹೋ ಜಾನೋ ಔರ್‌ ಸಮಜೋ ಅಲ್ಲಾ ಏಕ್‌ ಹೈ’ ಎಂಬ ಕುರಾನ್‌ ಸುರ್‌ ಎ ಇಕ್ಲಾಸ್‌ ಮತ್ತು ವೇದ ಹಾಗೂ ಉಪನಿಷತ್ತಿನ ಸಾಲುಗಳನ್ನು ಅವರು ವಿವರಿಸಿದರು.

‘ಧರ್ಮ ಒಂದೇ. ಆದರೆ ನಾವು ನಮಗೆ ಬೇಕಾದ ಹೆಸರು ಇಟ್ಟುಕೊಂಡಿದ್ದೇವೆ. ಧರ್ಮ ಸ್ಥಾಪಕ ಆ ದೇವರು ಒಬ್ಬನೇ ಆದರೂ ಅವನಿಗೂ ಹೆಸರು ಇಟ್ಟು ಈಗ ಬಡಿದಾಡಿಕೊಳ್ಳುತ್ತಿದ್ದೇವೆ’ ಎಂದು ವಿಷಾದಿಸಿದರು.

‘ಎಲ್ಲಾ ಧರ್ಮ ಗ್ರಂಥಗಳು, ಅನುಭಾವಿಗಳು ದೇವರು ಒಬ್ಬನೇ ನಾಮ ಹಲವು ಎಂದು ಹೇಳಿದರೂ ನಾವು ದೇವರು ಧರ್ಮಕ್ಕೆ ಗಡಿಯನ್ನು ಗುರುತಿಸಿದ್ದೇವೆ. ವಾಸ್ತವವಾಗಿ ದೇವರು ಸರ್ವಾಂತರ್ಯಾಮಿ. ಆದರೆ, ಧರ್ಮ ಮನುಷ್ಯನನ್ನು ಉದ್ಧಾರ ಮಾಡಿ ಪರಮ ಶಾಂತಿಯನ್ನು ನೀಡುವುದಾಗಿದೆ’ ಎಂದರು.

ಮಂದಿ ಇರುವಂಗ್‌ ಮಾತ್‌ ಇರುತ್ತಾವ್‌ ಎನ್ನುತ್ತಲೇ ನಿಜ ಶರಣ ಅಂಬಿಗರ ಚೌಡಯ್ಯನವರ ನಿಷ್ಠುರ ವಚನಗಳನ್ನು ಉಲ್ಲೇಖಿಸಿದರೆ, ನೀವೆಲ್ಲಾ ಒಂದ್ ದಿನ ಇಲ್ಲೇ ಬರ್ತೀರಿ ಅದಕ್ಕಾಗಿ ಹಿಡದ್‌ ದಾರಿ ಬಿಡಬ್ಯಾಡ್ರಿ ಜಗಳ ಆಡ್ಲಾಕ್‌ ಹೋಗಬ್ಯಾಡ್ರಿ ಎಂಬ ತತ್ವ ಪದ ವಿವರಿಸಿದರು.

ಭಾರತದ ಮಣ್ಣಿನ ಕಣಕಣದಲ್ಲಿ ಸಾಮರಸ್ಯವಿದೆ. ಹಿಂದಿನ ಕಾಲದಲ್ಲಿ ಸಂತರು, ಮಹಾಂತರು, ಸೂಫಿಗಳು, ಶರಣರು, ಅನುಭಾವಿಗಳು ಒಂದೆಡೆ ಕುಳಿತು ದೇವರ ಪರಿಕಲ್ಪನೆ ಕುರಿತು ಚರ್ಚಿಸುತ್ತಿದ್ದರು. ವೇದ, ಉಪನಿಷತ್ತು, ಗೀತೆ, ಕುರಾನ್‌, ವಚನಗಳನ್ನು ವಿಶ್ಲೇಷಿಸುತ್ತಿದ್ದರು. ತಮ್ಮಲ್ಲಿರುವ ತಪ್ಪು ತಿಳಿವಳಿಕೆ ನಿವಾರಿಸಿಕೊಳ್ಳುತ್ತಿದ್ದರು. ಪರತತ್ವ ಒಂದೇ ಎಂದು ಅರಿತು ಅನೋನ್ಯತೆಯಿಂದ ಎಲ್ಲರೂ ಕೂಡಿ ಬಾಳುತ್ತಿದ್ದರು.

ಅವರಿಗೆ ಧರ್ಮದ ಬಗ್ಗೆ ದುರಭಿಮಾನ ಇರಲಿಲ್ಲ, ಸಹಿಷ್ಣುತೆಯಿತ್ತು. ಪರಸ್ಪರರನ್ನು ಗೌರವದಿಂದ ಕಾಣುವುದು, ಪರಸ್ಪರರ ಆಚರಣೆ ಗೌರವಿಸುವುದು ಸಾಮಾನ್ಯವಾಗಿತ್ತು. ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮಳಖೇಡ ಕೂಡ ಇದಕ್ಕೆ ಹೊರತಲ್ಲ’ ಎಂದರು.

ಇದು ಅನೇಕ ಧರ್ಮಗಳಿಗೆ ಆಶ್ರಯ ನೀಡಿದ ಸಾಮರಸ್ಯ ನೆಲವಾಗಿದೆ. ಕಲೆ ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದವರು ರಾಷ್ಟ್ರಕೂಟರು ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT