ಶನಿವಾರ, ನವೆಂಬರ್ 28, 2020
23 °C
ಗದಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್‌ ಅಭಿಮತ

ಗಿಡ ನೆಟ್ಟು ಪೋಷಿಸುವ ಪ್ರವೃತ್ತಿ ಹಬ್ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಗಿಡಮರಗಳನ್ನು ಸಂರಕ್ಷಿಸುವ ಕಾರ್ಯ ಪ್ರತಿಯೊಬ್ಬರ ಕರ್ತವ್ಯ ಆಗಬೇಕು. ಭಾಷಣ, ಘೋಷಣೆಗಿಂತ ವಾಸ್ತವಿಕ ಕಾರ್ಯ ಆಗಬೇಕು’ ಎಂದು ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ರಾಜಶೇಖರ ವಿ.ಪಾಟೀಲ ಹೇಳಿದರು.

ಗದಗ ಸಮೀಪದ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಗದಗ-ಬೆಟಗೇರಿ ಲಯನ್ಸ್ ಕ್ಲಬ್ ಶುಕ್ರವಾರ ಏರ್ಪಡಿಸಿದ್ದ 250 ಸಸಿಗಳನ್ನು ದತ್ತುಪಡೆಯುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಾಮಾಜಿಕ ಸೇವಾ ಸಂಘಟನೆಯೊಂದು ತನ್ನೆಲ್ಲ ಸದಸ್ಯರನ್ನು ಸಾಮಾಜಿಕ ಕಾರ್ಯದಲ್ಲಿ ಒಳಗೊಳ್ಳುವಂತೆ ಮಾಡುವ ಮೂಲಕ ಒಂದೇ ದಿನದಲ್ಲಿ 250 ಸಸಿಗಳನ್ನು ದತ್ತು ಸ್ವೀಕರಿಸಿರುವುದು ಶ್ಲಾಘನೀಯ’ ಎಂದರು.

‘ಪರಿಸರ ಸಂರಕ್ಷಣೆ, ಅರಣ್ಯ ಸಂಪತ್ತು ಉಳಿಸಿ, ಕಾಡು ಬೆಳಸಿ ನಾಡು ಉಳಿಸಿ ಎಂಬುದು ಕೇವಲ ಘೋಷಣೆಗೆ ಸೀಮಿತವಾಗದೇ ಸರ್ವರ ಸಹಭಾಗಿತ್ವ ಅವಶ್ಯಕ’ ಎಂದು ಹೇಳಿ ಅವರು ಕೂಡ 10 ಸಸಿಗಳನ್ನು ದತ್ತು ಸ್ವೀಕರಿಸಿದರು.

ಗದಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್‌ ಮಾತನಾಡಿ, ‘ಅರಣ್ಯ ಸಂರಕ್ಷಣೆ, ಪರಿಸರ ಉಳಿವಿಗಾಗಿ ಜನ ಸಮುದಾಯದಲ್ಲಿ ಜಾಗೃತಿ ಮೂಡುತ್ತಿದೆ. ಈ ಜಾಗೃತಿ ಸಸಿಗಳನ್ನು ನೆಟ್ಟು ಪಾಲನೆ, ಪೋಷಣೆ ಮಾಡುವ ರೀತಿಯಲ್ಲಿ ಪರಿವರ್ತನೆಯಾಗಬೇಕು. ಸಸಿಗಳನ್ನು ದತ್ತು ಸ್ವೀಕರಿಸಿ ಸಂರಕ್ಷಿಸುವ ಕೆಲಸ ಆಗಬೇಕು’ ಎಂದರು.

‘ಮಾಜಿ ಸಚಿವ ಎಸ್.ಎಸ್.ಪಾಟೀಲ ಅವರು ವೈಯಕ್ತಿಕವಾಗಿ 100 ಸಸಿಗಳನ್ನು ದತ್ತು ಸ್ವೀಕರಿಸಿದ್ದು, ಅವರ ನಂತರ ಸಾಮಾಜಿಕ ಸಂಸ್ಥೆಯೊಂದು ಬೃಹತ್ ಪ್ರಮಾಣದಲ್ಲಿ ಸಸಿಗಳನ್ನು ದತ್ತು ಸ್ವೀಕರಿಸಿದ್ದು ಇದೇ ಮೊದಲು’ ಎಂದು ಹೇಳಿದರು.

ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ ಅಧ್ಯಕ್ಷ ಆನಂದ ಪೋತ್ನಿಸ್‌ ಮಾತನಾಡಿ, ‘ಇದು ಕ್ಲಬ್‍ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದ್ದು, ಈ ಕಾರ್ಯಕ್ಕೆ ವಾಣಿಜ್ಯೋದ್ಯಮಿಗಳ ಸಂಘದ ಸದಸ್ಯರನ್ನೂ ಒಳಗೊಳ್ಳುವಂತೆ ಪ್ರೇರೇಪಿಸಲಾಗುವುದು. ಜನ್ಮ ದಿನಾಚರಣೆ, ಮದುವೆ ವಾರ್ಷಿಕೋತ್ಸವ ಮುಂತಾದ ವಿಶೇಷ ಸಂದರ್ಭಗಳಲ್ಲಿ ಈ ರೀತಿ ಸಸಿಗಳನ್ನು ದತ್ತು ಪಡೆಯಲು ಪ್ರಜ್ಞಾವಂತರು ಮುಂದಾಗಬೇಕು’ ಎಂದು ಹೇಳಿದರು.

ಗದಗ-ಬೆಟಗೇರಿ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಅಶ್ವತ್ಥ್‌ ಸುಲಾಖೆ, ಕಾರ್ಯದರ್ಶಿ ರಮೇಶ ಶಿಗ್ಲಿ, ರಘು ಮೇಹರವಾಡೆ, ಖಜಾಂಚಿ ಅರುಣ ಮಿಸ್ಕಿನ್, ಎಂ.ಬಿ.ಸಿಕ್ಕೇದೇಸಾಯಿ, ಡಾ.ಜೆ.ಸಿ.ಶಿರೋಳ, ಪ್ರಕಾಶ ರಾಯ್ಕರ್, ಅರುಣ ವಾದೋನೆ, ಶ್ರೀನಿವಾಸ ಬಾಕಳೆ, ಎಂ.ಕೆ.ಕುಷ್ಟಗಿ, ಪ್ರಕಾಶ ಅಂಗಡಿ, ಲಯನೆಸ್ ಕ್ಲಬ್ ಅಧ್ಯಕ್ಷೆ ವೀಣಾ ಸುಲಾಖೆ, ಕಾರ್ಯದರ್ಶಿ ಸಾವಿತ್ರಿಬಾಯಿ ಶಿಗ್ಲಿ, ಖಜಾಂಚಿ ರೂಪಾ ಮಿಸ್ಕಿನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.