ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧು ಬಾಂಧವರೊಡನೆ ವನಭೋಜನ!

ಸಂಕ್ರಾಂತಿ ವಿಶೇಷ: ಗದಗ ಮೃಗಾಲಯಕ್ಕೆ ದಾಖಲೆಯ ಜನ
Last Updated 16 ಜನವರಿ 2023, 5:34 IST
ಅಕ್ಷರ ಗಾತ್ರ

ಗದಗ: ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಅವಳಿ ನಗರದ ಜನರು ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಮನೆಗಳಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಹಬ್ಬದ ಸಂಭ್ರಮ ಮೇಳೈಸಿತ್ತು. ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಲಾಗಿತ್ತು. ಅನೇಕರು ಹೊಸ ದಿರಿಸು ಧರಿಸಿ, ದೇವಸ್ಥಾನಗಳಿಗೆ ಭೇಟಿ ನೀಡಿದರು. ಪುಟ್ಟ ಮಕ್ಕಳು ನೆರೆಹೊರೆಯವರಿಗೆ ಎಳ್ಳು ಬೆಲ್ಲ ಬೀರಿ ಸಂಭ್ರಮಿಸಿದರು.

ಗದಗ ಬೆಟಗೇರಿಯ ಬಹುಪಾಲು ಜನರು ಸಂಕ್ರಾಂತಿ ಅಂಗವಾಗಿ ಶೇಂಗಾ ಹೋಳಿಗೆ, ರೊಟ್ಟಿ, ಚಟ್ನಿ ಹಾಗೂ ಬಗೆಬಗೆಯ ಪಲ್ಯಗಳನ್ನು ಮಾಡಿಕೊಂಡು ಬಿಂಕದಕಟ್ಟಿ, ಸಾಲುಮರದ ತಿಮ್ಮಕ್ಕ ಉದ್ಯಾನ, ಬಸವೇಶ್ವರ ಮೂರ್ತಿ ಇರುವ ಭೀಷ್ಮಕೆರೆಗೆ ತೆರಳಿ ವನಭೋಜನ ಸವಿದಿದ್ದು ವಿಶೇಷವಾಗಿತ್ತು.

ಬಿಂಕದಕಟ್ಟಿಯಲ್ಲಿರುವ ಗದಗ ಕಿರು ಮೃಗಾಲಯಕ್ಕೆ ಸಂಕ್ರಾಂತಿಯಂದು ಜನರು ದಾಖಲೆಯ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಒಂದೇ ದಿನ 8 ಸಾವಿರ ಮಂದಿ ಭೇಟಿ ನೀಡಿದ್ದರಿಂದ ಮೃಗಾಲಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬ ಸಮೇತರಾಗಿ ಬಂದಿದ್ದ ಜನರು ಮನೆಯಿಂದ ಬುತ್ತಿಯನ್ನೂ ತಂದಿದ್ದರು. ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಿ, ಹೋಳಿಗೆ ರೊಟ್ಟಿ ಪಲ್ಯೆ ಸವಿದು ತೃಪ್ತರಾದರು.

ಅದೇರೀತಿಯಾಗಿ, ಬಿಂಕದಕಟ್ಟಿಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನಕ್ಕೆ 3,350 ಮಂದಿ ಭೇಟಿ ನೀಡಿದ್ದರು. ನರಗುಂದದಲ್ಲಿರುವ ಸಸ್ಯೋದ್ಯಾನಕ್ಕೆ 1,300 ಮಂದಿ ಭೇಟಿ ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃಗಾಲಯಕ್ಕೆ ಭೇಟಿ ನೀಡಿದ್ದ ಜನಸಂದಣಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಶ್ರಮಿಸಿದರು. ಇದರಿಂದಾಗಿ, ಬಂದವರೆಲ್ಲರೂ ವ್ಯವಸ್ಥಿತವಾಗಿ ಮೃಗಾಲಯ ವೀಕ್ಷಣೆ ಮಾಡಲು ಸಾಧ್ಯವಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2020ರ ನಂತರದ ದಿನಗಳಲ್ಲಿ ಅತಿಹೆಚ್ಚು ಜನರು ಈ ಸಂಕ್ರಾಂತಿಯಂದು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಭಾನುವಾರ ಒಂದೇ ದಿನ 8 ಸಾವಿರ ಮಂದಿ ಭೇಟಿ ನೀಡಿದ್ದಾರೆ
ದೀಪಿಕಾ ಬಾಜಪೇಯಿ, ಡಿಸಿಎಫ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT