ನರಗುಂದ: ‘ನಾನು ಕನ್ನಡ ಮಾಧ್ಯಮದಲ್ಲಿಯೇ ಅಭ್ಯಾಸ ಮಾಡಿ ನಿರಂತರ ಶ್ರಮ ಪಟ್ಟಿದ್ದರಿಂದ ಈ ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ. ಉನ್ನತ ವ್ಯಾಸಂಗದಲ್ಲಿ ಕನ್ನಡ ಮಾಧ್ಯಮ ಎಂದು ಕೀಳರಿಮೆ ಬೇಡ’ ಎಂದು ಪಿಜಿ ನೀಟ್ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ 9ನೇ ರ‍್ಯಾಂಕ್ ಪಡೆದ ಡಾ.ಶರಣಪ್ಪ ಸೀನಪ್ಪನವರ ಹೇಳಿದರು.
ಪಟ್ಟಣದ ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಈಚೆಗೆ ನಡೆದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಅದನ್ನು ಶ್ರಮ ಪಟ್ಟು ಅಭ್ಯಾಸ ಮಾಡಿ ಸಾರ್ಥಕಗೊಳಿಸಬೇಕು. ನಾನು ಒಂದರಿಂದ ಹತ್ತನೇ ತರಗತಿಯವರೆಗೆ 10 ವರ್ಷಗಳ ಕಾಲ ಕನ್ನಡ ಮಾಧ್ಯಮದಲ್ಲಿಯೇ ಅಧ್ಯಯನ ಮಾಡಿರುವೆ. ಆದರೂ ನನಗೇನು ಕಷ್ಟವಾಗಿಲ್ಲ. ಪಿಯು ಆರಂಭದಲ್ಲಿ ಸ್ವಲ್ಪ ಇಂಗ್ಲಿಷ್ ಕಠಿಣವಾದರೂ ಅದನ್ನು ನಿರಂತರ ಅಧ್ಯಯನ ಮಾಡಿದ ಪರಿಣಾಮ ಅದರ ಕಠಿಣತೆಯನ್ನು ನೀಗಿಸಿರುವೆ. ಆತ್ಮ ವಿಶ್ವಾಸದಿಂದ ಅಭ್ಯಾಸ ಮಾಡಿದ್ದಾದರೆ ಎಂಥ ಪರೀಕ್ಷೆಯನ್ನಾದರೂ ಎದುರಿಸಿ ಯಶಸ್ಸು ಪಡೆಯಲು ಸಾಧ್ಯ’ ಎಂದು ಹೇಳಿದರು.
‘ದೇಶದಾದ್ಯಂತ ನೀಟ್ ಪಿಜಿ ಪ್ರವೇಶ ಪರೀಕ್ಷೆಗೆ ಹೆಚ್ಚಿನ ಸ್ಪರ್ಧೆ ಇರುತ್ತದೆ. ಅದರಲ್ಲಿ ನಾನು ಯಶ ಪಡೆದಿರುವುದು ಸಂತಸ ತಂದಿದೆ. ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಿ ಸಮಾಜಕ್ಕೆ ಕೊಡುಗೆ ನೀಡುವ ಹಂಬಲ ಹೊಂದಿರುವೆ. ಈ ಉನ್ನತ ಸಾಧನೆಯಲ್ಲಿ ನನ್ನ ತಂದೆ ತಾಯಿಗಳ, ಗುರುಗಳ ಪಾತ್ರ ಹೆಚ್ಚಿನದಾಗಿದೆ. ಅವರಿಗೆ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಗೆ ನಾನು ಚಿರಋಣಿಯಾಗಿದ್ದೇನೆ. ಪ್ರೌಢ ಶಾಲೆಯ ಮೂರು ವರ್ಷಗಳು ಲಯನ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಪೂರೈಸಿದೆ. ಇದರಿಂದ ನನಗೆ ಉತ್ತಮ ಬುನಾದಿ ದೊರೆತಿದೆ’ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಮಾತನಾಡಿ, ‘ಲಯನ್ಸ್ ಶಿಕ್ಷಣ ಸಂಸ್ಥೆ ಕಳೆದ ನಾಲ್ಕು ದಶಕಗಳಿಂದ ಗುಣಾತ್ಮಕ ಶಿಕ್ಷಣ ನೀಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಮೇಘನಾ ಜೈನ್ ಐಎಎಸ್ ಪಾಸಾಗಿ ಮೇಘಾಲಯದಲ್ಲಿ ಡಿಸಿಯಾಗಿದ್ದಾರೆ. ಉನ್ನತ ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ವಿದೇಶದಲ್ಲೂ ಸೇವೆ ಸಲ್ಲಿಸುತ್ತಿರುವುದು ವಿಶೇಷ ಹಾಗೂ ಹೆಮ್ಮಯ ಸಂಗತಿ. ಶಿಕ್ಷಕರು ವಿದ್ಯಾರ್ಥಿಗಳಲ್ಲಿಯ ಪ್ರತಿಭೆ ಗುರುತಿಸಲು ಮುಂದಾಗಬೇಕು’ ಎಂದು ಹೇಳಿದರು.
ನಿರ್ದೇಶಕರಾದ ಜಿ.ಬಿ.ಕುಲಕರ್ಣಿ, ಸಿ.ಎಸ್. ಸಾಲೂಟಗಿಮಠ, ರಾಘವೇಂದ್ರ ಆನೇಗುಂದಿ, ಮುಖ್ಯಾಧ್ಯಾಪಕ ವೈ.ಪಿ. ಕಲ್ಲನಗೌಡರ, ಪ್ರಾಚಾರ್ಯ ಎಸ್.ಜಿ. ಜಕ್ಕಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.